HEALTH TIPS

ಅಭಿವೃದ್ದಿಯ ಹೆಸರಲ್ಲಿ ಪರಂಪರೆಗೆ ಕೊಡಲಿಯೇಟು: ಕುಂಬಳೆ ಕೋಟೆಯನ್ನು ನುಂಗಿದ ರಾ.ಹೆದ್ದಾರಿ ಕಾಮಗಾರಿ

                ಕುಂಬಳೆ: ರಾಷ್ಟ್ರೀಯ ಹೆದ್ದಾರಿ ತಚೆರ್ಕಳದ ವರೆಗಿನ ಕಾಮಗಾರಿ ಭರದಿಂದ ಸಾಗುತ್ತಿದ್ದು, ದಿನದಿಂದ ದಿನಕ್ಕೆ ಹೆದ್ದಾರಿ ಇಕ್ಕೆಲಗಳ ಚರ್ಯೆಯೇ ಬದಲಾಗುತ್ತಿದೆ. ಈಗಾಗಲೇ ರಸ್ತೆಯ ಎರಡೂ ಬದಿಲಪ್ಪಾಡಿಯಿಂದ ಗಳಲ್ಲಿದ್ದ ಶತಮಾನಗಳಷ್ಟು ಹಳೆಯ ಬೃಹತ್ ಮರಗಳಿಗೆ ಕೊಡಲಿಯೇಟು ನೀಡಲಾಗಿದ್ದು, ಬೋಳು ಬೋಳಾದ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಹಲವು ಕಟ್ಟಡಗಳನ್ನೂ ಮುರಿದು ತೆಗೆಯಲಾಗಿದೆ. ಇನ್ನಷ್ಟು ಬದಲಾವಣೆಗಳು ನಿರೀಕ್ಷಿತವಾಗಿದೆ.

           ಈ ಮಧ್ಯೆ ಇತಿಹಾಸ ಪ್ರಸಿದ್ಧ ಕುಂಬಳೆ ಕೋಟೆ ಎಂದೇ ಪ್ರಸಿದ್ಧಿ ಪಡೆದ ಆರಿಕ್ಕಾಡಿ ಕೋಟೆಯ ಒಂದು ಪಾಶ್ರ್ವ ಭಾಗಶಃ ಹೆದ್ದಾರಿಗೆ ಪರಭಾರೆಗೊಂಡು ಮೂಲ ಕೋಟೆಯ ಬಹಳಷ್ಟು ಸ್ಥಳಗಳು ನಾಮಾವಶೇಷಗೊಳ್ಳುತ್ತಿರುವುದು ಆತಂಕಮೂಡಿಸಿದೆ.

        ಕಾಸರಗೋಡಿನ ಇತಿಹಾಸದ ಪುಟಗಳಲ್ಲಿ ಕೋಟೆಗಳ ಚರಿತ್ರೆ ಮಹತ್ವಪೂರ್ಣವಾದುದು. ಬೇಕಲ ಕೋಟೆ ಹೊರತು ಮಿಕ್ಕೆಲ್ಲಾ ಕೋಟೆಗಳು ಬಹುತೇಕ ನಾಶವಾಗಿದೆ ಮತ್ತು ನಾಶವಾಗುತ್ತಿದೆ. ಈ ಪೈಕಿ ಪೊವ್ವಲ್, ಚಂದ್ರಗಿರಿ ಮತ್ತು ಆರಿಕ್ಕಾಡಿ ಕೋಟೆಗಳು ಗುರುತಿಸಬಹುದಾದಷ್ಟು ಉಳಿದುಕೊಂಡಿದ್ದು, ಇದೀಗ ರಾ.ಹೆದ್ದಾರಿಯ ಕಾಮಗಾರಿ ಹೆಸರಲ್ಲಿ ಕೋಟೆ ನಿವೇಶನದ ಒಂದು ಪಾಶ್ರ್ವವೇ ಅಗೆಯಲ್ಪಟ್ಟಿದೆ. ಹಿರಿಯರು ನೆನಪಿಸುವಂತೆ ಮೊದಲ ಬಾರಿಗೆ ರಾ.ಹೆದ್ದಾರಿ ಹಾದುಹೋದಾಗಲೇ ಕೋಟೆಯ ಒಂದಷ್ಟು ಭಾಗ ಹೆದ್ದಾರಿಗೆ ಸೇರಲ್ಪಟ್ಟಿತೆಂದು ತಿಳಿದುಬರುತ್ತದೆ. 

           6ನೇ ಶತಮಾನದಲ್ಲಿ ಇಕ್ಕೇರಿ ನಾಯಕರು ಈ ಕೋಟೆಯನ್ನು ನಿರ್ಮಿಸಿದ್ದರೆಂದೂ, ತಾಳಿಕೋಟೆ ಕದನದ ಬಳಿಕ ಇಕ್ಕೇರಿ ನಾಯಕರು ತಮ್ಮ ಆಡಳಿತ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಶತ್ರುಗಳನ್ನು ಹಿಮ್ಮೆಟ್ಟಲು ಹಾಗೂ ರಕ್ಷಣಾ ಕವಚವಾಗಿ ಆರಿಕ್ಕಾಡಿಯ ಹೊರತಾಗಿ ಬೇಕಲ ಮತ್ತು ಚಂದ್ರಗಿರಿ ಕೋಟೆಗಳನ್ನು ನಿರ್ಮಿಸಿದ್ದರೆಂದು ಇತಿಹಾಸ ತಿಳಿಸುತ್ತದೆ. ಈ ಕೋಟೆಯ ಪಕ್ಕ ಕೋಟೆ ವೀರಾಂಜನೇಯ ದೇವಾಲಯ ಈಗಲೂ ನಿತ್ಯ ನೂರಾರು ಭಕ್ತರ ಭೇಟಿಯ ಪುಣ್ಯ ತಾಣವಾಗಿ ಕಾರಣಿಕದಿಂದ ಮೆರೆಯುತ್ತಿದೆ.  

           ಕುಂಬಳೆ, ಕೋಟೆ ವಿಸ್ತಾರದಲ್ಲಿ ಕಾಸರಗೋಡು ಕೋಟೆಯಷ್ಟೇ ಇದೆ. ಕೊಡಿಯಾಲ, ಮೂಡಬಿದರೆ, ಮೂಲ್ಕಿ, ಉಳ್ಳಾಲ, ಕುಂಬಳೆ, ಪುದುಂವೆಟ್ಟು, ಬೆಳ್ಳಾರೆ, ಕಾಂತಮಂಗಲ, ಬಂದಡ್ಕ, ಚಂದ್ರಗಿರಿ, ಬೇಕಲ, ಹೊಸದುರ್ಗ ಮುಂತಾದ ಕೋಟೆಗಳನ್ನು ಬಲಪಡಿಸಿದವನು ಇಕ್ಕೇರಿ ರಾಜರಾಮನ ಮಗ ಹಿರಿಯ ವೆಂಕಟಪ್ಪನಾಯಕ. 1514ರಲ್ಲಿ ದುರ್ತೆ ಬಾರಬೋಸ್ ಎಂಬ ಪೆÇೀರ್ಚುಗೀಸ್ ಪ್ರವಾಸಿ ಕುಂಬಳೆ ಕೋಟೆಗೆ ಬಂದಿದ್ದ.  ಈ ಕೋಟೆಯಿಂದ ಮಾಲ್ಡಿವ್ ದ್ವೀಪಗಳಿಗೆ ಅಕ್ಕಿಯನ್ನು ಕಳುಹಿಸುತ್ತಿದ್ದರೆಂದೂ ಅದಕ್ಕೆ ಬದಲಾಗಿ ಹಗ್ಗಹುರಿಗಳನ್ನು ಕೊಳ್ಳುತ್ತಿದ್ದರೆಂದೂ ಅವನು ಹೇಳಿದ್ದಾನೆ. ಈ ಕೋಟೆಯಿಂದ ಪೆÇೀರ್ಚುಗೀಸರಿಗೆ ಹೇರಳವಾಗಿ ಅಕ್ಕಿ ಸಾಗುತ್ತಿತ್ತು ಎಂದು ಇತಿಹಾಸ ಸಾರುತ್ತದೆ. ಒಂದು ಬದಿ ಶಾಂತವಾಗಿ ಹರಿಯುವ ಕುಂಬಳೆ ಹೊಳೆ, ಮತ್ತೊಂದೆಡೆ ಅರಬ್ಬೀ ಸಮುದ್ರ, ತೆಂಗು, ಕಂಗುಗಳ ತೋಟಗಳು, ದೇವಾಲಯಗಳ ಶಂಖನಾದಗಳ ಜೊತೆಗೆ ಕಾಸರಗೋಡಿನ ಕನ್ನಡ-ತೌಳವ ಸಂಸ್ಕøತಿಯ ಪ್ರತೀಕಗಳಾದ ಇಂತಹ ಕೋಟೆಗಳನ್ನು ಸಂರಕ್ಷಿಸಬೇಕಾಗಿದೆ. ಅಭಿವೃದ್ದಿ ಹೆಸರಲ್ಲಿ ಪರಂಪರೆಗೆ ನೀಡುವ ಕೊಡಲಿಯೇಟು  ಯಾವ ರೀತಿಯ ಅಭಿವೃದ್ದಿ ಎಂಬುದು ಕಾಡುವ ಪ್ರಶ್ನೆಯಾಗಿದೆ.


              ಅಭಿಮತ: 

      ರಾಷ್ಟ್ರೀಯ ಹೆದ್ದಾರಿ ಅಗಲೀಕರಣ-ಅಭಿವೃದ್ದಿ ತುರ್ತು ಅಗತ್ಯವಾಗಿದ್ದು, ಬದಲಾಗುತ್ತಿರುವ ವ್ಯವಸ್ಥೆ ಅವ್ಯವಸ್ಥಿತವಾಗದಿರಲು ಇದೆಲ್ಲ ಬೇಕಿದೆ. ಆದರೆ, ಅಭಿವೃದ್ದಿಯ ವೇಳೆ ನಮ್ಮ ಪರಂಪರೆ, ಇತಿಹಾಸಗಳನ್ನು ಸಂರಕ್ಷಿಸುವ ಅಗತ್ಯವೂ ಇದೆ. ಈ ಹಿನ್ನೆಲೆಯಲ್ಲಿ ಅಧಿಕೃತರು ಸ್ಥಳೀಯ ಪ್ರಮುಖರನ್ನು ಒಗ್ಗೂಡಿಸಿ ವಿಚಾರ ವಿನಿಮಯಗಳನ್ನು ಮಾಡುವ ಸಂಸ್ಕøತಿ ಆರಂಭಗೊಳ್ಳಬೇಕು. ಆರಿಕ್ಕಾಡಿ ಕೋಟೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈಹಿಂದೆ ಇಂತಹ ಯತ್ನಗಳಾಗಿದ್ದರೆ ಇಂದಿನ ದುರವಸ್ಥೆ ಎದುರಾಗುತ್ತಿರಲಿಲ್ಲ. ಸರ್ಕಾರ, ಇಲಾಖೆಗಳು, ಅಧಿಕಾರಿಗಳು ಇನ್ನಾದರೂ ಇಂತಹ ವಿಚಾರಗಳನ್ನು ಪರಸ್ಪರ ಹಂಚಿಕೊಳ್ಳಲು, ಮಾರ್ಪಾಡುಗಳಿಗಾಗಿ ಆಯಾ ಪ್ರದೇಶದ ಪ್ರಮುಖರೊಂದಿಗೆ ಸಮಾಲೋಚಿಸಬೇಕು.

                                        -ಸುಕುಮಾರ ಆರಿಕ್ಕಾಡಿ

                                   ಅಧ್ಯಕ್ಷರು ಶ್ರೀಅಲಿಚಾಮುಂಡಿ ದೈವ ಕ್ಷೇತ್ರ ಪಾರೆಸ್ಥಾನ. ಆರಿಕ್ಕಾಡಿ. ಕುಂಬಳೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries