ಕಾಸರಗೋಡು: ಜಿಲ್ಲಾ ಸಾಕ್ಷರತಾ ಮಿಷನ್ ಆಶ್ರಯದಲ್ಲಿ ವಾಚನಾ ಸಪ್ತಾಹದ ಉದ್ಘಾಟನೆ, ಜಿಲ್ಲಾ ಪಂಚಾಯಿತಿಯ ಇ.ಕೆ.ನಾಯನಾರ್ ಗ್ರಂಥಾಲಯದಿಂದ ವಾಚನಾಗೋಷ್ಠಿ, ಪುಸ್ತಕ ವಿತರಣಾ ಉದ್ಘಾಟನೆ ಜೂ.20ರಂದು ಬೆಳಗ್ಗೆ 10.30ಕ್ಕೆ ಜರುಗಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಗ್ರಂಥಾಲಯ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್ ಸರಿತಾ ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಶಾನವಾಜ್ ಪಾದೂರು ವಾಚನಾದಿನ ಸಂದೇಶ ವಾಚಿಸುವರು. ಕಣ್ಣೂರು ವಿಶ್ವವಿದ್ಯಾನಿಲಯದ ಮಾಜಿ ಪರೀಕ್ಷಾ ನಿಯಂತ್ರಕ ಪ್ರಾಧ್ಯಾಪಕ ಕೆ.ಪಿ.ಜಯರಾಜ್ ಪಿ.ಎನ್.ಪಣಿಕ್ಕರ್ ಸಂಸ್ಮರಣ ಸಂಚಿಕೆ, ಪಪ್ಪನ್ ಕುಟ್ಟಮಠ ವಾಚನ ಮೆರವಣಿಗೆ ಸಂದೇಶ ಹಾಗೂ ಜಿಲ್ಲಾ ವಾರ್ತಾ ಮತ್ತು ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಜಿಲ್ಲಾ ಮಟ್ಟದ ವಾಚನಗೋಷ್ಠಿಯ ವಿವರಣೆ ಮಂಡಿಸುವರು. ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ವಿ.ಪುಷ್ಪಾ ಅವರು ವಿದ್ಯಾರ್ಥಿಗಳ ಓದುವ ಹವ್ಯಾಸವನ್ನು ಹೆಚ್ಚಿಸುವ ಕುರಿತು ಹಾಗೂ ಜಿಲ್ಲಾ ಗ್ರಂಥಾಲಯ ಪರಿಷತ್ತಿನ ಕಾರ್ಯದರ್ಶಿ ಪಿ.ಪ್ರಭಾಕರನ್ ಗ್ರಂಥಾಲಯದ ಕುರಿತು ಮಾತನಾಡುವರು. ಈ ಸಂದರ್ಭ ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆ ನಡೆಯಲಿರುವುದು.