ನವದೆಹಲಿ: ಅಗ್ನಿಪಥ ಯೋಜನೆಯನ್ನು ರದ್ದು ಮಾಡಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆ ತೀವ್ರಗೊಂಡಿದೆ. ಯೋಜನೆಯನ್ನು ಕೈಬಿಡಬೇಕು ಎಂದು ಕಾಂಗ್ರೆಸ್ ಪಕ್ಷವು ಆಗ್ರಹಿಸಿದೆ. ಅಗ್ನಿಪಥ ಯೋಜನೆಯನ್ನು ನಿರ್ಲಕ್ಷ್ಯದಿಂದ ರೂಪಿಸಲಾಗಿದೆ ಮತ್ತು ಅದು ದೇಶದ ಭವಿಷ್ಯಕ್ಕೆ ಮಾರಕ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿಯ ಮಿತ್ರ ಪಕ್ಷವಾದ ಜೆಡಿಯು ಕೂಡ 'ಅಗ್ನಿಪಥ' ಯೋಜನೆಯ ವಿರುದ್ಧ ಮಾತನಾಡಿದೆ.
'ಅಗ್ನಿಪಥ ಯೋಜನೆಯು ಅತೃಪ್ತಿ, ಹತಾಶೆ ಮತ್ತು ಕರಾಳ ಭವಿಷ್ಯದ (ನಿರುದ್ಯೋಗ) ಭೀತಿ ಹುಟ್ಟಿಸಿದೆ. ಇದು ಬಿಹಾರ ಸೇರಿದಂತೆ ದೇಶದ ಎಲ್ಲೆಡೆಯ ಯುವಜನರು ಮತ್ತು ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಗ್ನಿಪಥ ಯೋಜನೆಯನ್ನು ಕೇಂದ್ರ ಸರ್ಕಾರವು ತಕ್ಷಣವೇ ಮರುಪರಿಶೀಲನೆಗೆ ಒಳಪಡಿಸಬೇಕು. ಇದು ದೇಶದ ಸುರಕ್ಷತೆಯ ವಿಷಯ' ಎಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಯೋಜನೆಯನ್ನು ಅಮಾನತಿನಲ್ಲಿ ಇರಿಸಿ. ಸೇವೆಯಲ್ಲಿರುವ ಮತ್ತು ನಿವೃತ್ತರಾದ ಸೇನಾಧಿಕಾರಿಗಳ ಜತೆಗೆ ವ್ಯಾಪಕ ಸಮಾಲೋಚನೆ ನಡೆಸಿ. ಗುಣಮಟ್ಟ, ಕಾರ್ಯದಕ್ಷತೆ, ಹಣಕಾಸು ವಿಚಾರಗಳ ಕುರಿತು ಚರ್ಚಿಸಿ. ಈ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಲೇಬಾರದು ಎಂದು ಕಾಂಗ್ರೆಸ್ ಪಕ್ಷವು ಆಗ್ರಹಿಸಿದೆ.
'ರ‍್ಯಾಂಕೂ ಇಲ್ಲ, ಪಿಂಚಣಿಯೂ ಇಲ್ಲ. ಎರಡು ವರ್ಷ ನೇರ ನೇಮಕಾತಿಯೂ ಇಲ್ಲ. ನಾಲ್ಕು ವರ್ಷಗಳ ಬಳಿಕ ಸ್ಥಿರ ಭವಿಷ್ಯವೇ ಇಲ್ಲ. ಸೇನೆಯ ಬಗ್ಗೆ ಸರ್ಕಾರಕ್ಕೆ ಯಾವ ಗೌರವವೂ ಇಲ್ಲ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್‌ನ ಅಜಯ ಮಾಕನ್, ಸಚಿನ್ ಪೈಲಟ್, ಪವನ್ ಖೇರಾ ಮತ್ತು ಪಿ. ಚಿದಂಬರಂ ಅವರು ಜಂಟಿ ಮಾಧ್ಯಮಗೋಷ್ಠಿ ನಡೆಸಿ, ಪಿಂಚಣಿ ಮೊತ್ತವನ್ನು ತಗ್ಗಿಸಲು ಈ ಯೋಜನೆ ರೂಪಿಸಲಾಗಿದೆ ಎಂಬ ವಾದವೇ ಅತ್ಯಂತ ದುರ್ಬಲ ಎಂದರು. ಅಲ್ಪಾವಧಿ ಕರ್ತವ್ಯ ವ್ಯವಸ್ಥೆಯು ಗುಣಮಟ್ಟ, ದಕ್ಷತೆ ಮತ್ತು ಕಾರ್ಯಕ್ಷಮತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದರು.
ಬಿಜೆಪಿ ಸಂಸದ ವರುಣ್ ಗಾಂಧಿ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಯೋಜನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯುವ ಜನರಲ್ಲಿ ಅಸಮಾಧಾನ ಹೆಚ್ಚಲು ಇದು ಕಾರಣವಾಗಬಹುದು. ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಯೋಜನೆಯನ್ನು ರದ್ದು ಮಾಡಬೇಕು. ಸಂಸತ್ತಿನಲ್ಲಿ ಯೋಜನೆ ಬಗ್ಗೆ ಚರ್ಚೆ ನಡೆಸಬೇಕು. ಈ ಯೋಜನೆಯು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ ಎಂದು ಎಡ ಪಕ್ಷಗಳು
ಹೇಳಿವೆ.
ನಾಲ್ಕು ವರ್ಷವಷ್ಟೇ ಅಲ್ಲ, ಜೀವನವಿಡೀ ದೇಶಕ್ಕೆ ಸೇವೆ ಸಲ್ಲಿಸಲು ಯುವ ಜನರಿಗೆ ಸರ್ಕಾರ ಅವಕಾಶ ಕೊಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಬಹುಜನ ಸಮಾಜ ಪಕ್ಷ, ಲೋಕ ಜನಶಕ್ತಿ ಪಕ್ಷ ಕೂಡ ಯೋಜನೆಯನ್ನು ವಿರೋಧಿಸಿವೆ.
ನಿವೃತ್ತ ಅಧಿಕಾರಿಗಳಲ್ಲಿ ಭಿನ್ನಾಭಿಪ್ರಾಯ
ಕೋಲ್ಕತ್ತ: ಅಗ್ನಿಪಥ ಯೋಜನೆ ಮತ್ತು ಅದನ್ನು ವಿರೋಧಿಸಿ ಯುವಕರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ನಿವೃತ್ತ ಸೇನಾ ಮುಖ್ಯಸ್ಥರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ನಾಲ್ಕು ವರ್ಷಗಳ ಸೇವೆಯ ನಂತರ ಪಿಂಚಣಿ ಭದ್ರತೆ ಇಲ್ಲದೆ ವಾಪಸಾದರೆ, ನಮ್ಮ ಭವಿಷ್ಯವೇನು ಎಂಬ ಭಯ ಯುವಕರಿಗೆ ಎದುರಾಗಿದೆ. ಹೀಗಾಗಿ ಅವರು ಪ್ರತಿಭಟಿಸುತ್ತಿದ್ದಾರೆ' ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಜೆ.ಆರ್.ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, 'ಅಗ್ನಿಪಥ ಯೋಜನೆಯು ಒಂದು ಕೆಟ್ಟ ನಿರ್ಧಾರ. ನಾಲ್ಕು ವರ್ಷಗಳ ಅವಧಿಯ ಸೇವೆಯಲ್ಲಿ ಅವರಿಗೆ ಅಗತ್ಯ ತರಬೇತಿಗಳನ್ನು ನೀಡಲು ಹೇಗೆ ಸಾಧ್ಯ? ಸರ್ಕಾರವು ಯುವಕರಿಗೆ ಅಗತ್ಯ ತರಬೇತಿ ನೀಡದೆ, ಯುದ್ಧಭೂಮಿಗೆ ದೂಡುತ್ತಿದೆ' ಎಂದು ಅವರು ಹೇಳಿದ್ದಾರೆ.
ಆದರೆ, 'ಸರ್ಕಾರದ ಈ ನಿರ್ಧಾರ ಸರಿಯಾಗಿದೆ. ಹದಿನೇಳೂವರೆ ವರ್ಷಕ್ಕೇ ಯುವಕರು ಸೇವೆಗೆ ಲಭ್ಯವಾಗುವುದರಿಂದ ಸೇನೆಯಲ್ಲಿ ಯುವಶಕ್ತಿ ಹೆಚ್ಚಾಗಲಿದೆ. ಇದರಿಂದ ಸೇನೆಗೇ ಅನುಕೂಲವಾಗಲಿದೆ. ನಾಲ್ಕು ವರ್ಷಗಳ ಸೇವೆ ಮುಗಿಸಿ ಹೊರಬಂದವರಿಗೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಸೂಕ್ತ ಉದ್ಯೋಗ ಒದಗಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನೀತಿ ರೂಪಿಸಬೇಕು' ಎಂದು ನಿವೃತ್ತ ಏರ್‌ಚೀಫ್ ಮಾರ್ಷಲ್ ಅರೂಪ್ ರಾಹಾ ಹೇಳಿದ್ದಾರೆ.
'ಇದನ್ನು ಮೊದಲು ಸೇನೆಯ ಇತರ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಬೇಕಿತ್ತು. ಆನಂತರವಷ್ಟೇ ಕದನ ಕರ್ತವ್ಯ ವಿಭಾಗದಲ್ಲಿ ಜಾರಿಗೆ ತರಬೇಕಿತ್ತು' ಎಂದು ನಿವೃತ್ತ ಮೇಜರ್ ಜನರಲ್ ಅರುಣ್ ರಾಯ್ ಹೇಳಿದ್ದಾರೆ.