ಕುಂಬಳೆ: ಕೋವಿಡ್ ಲಾಕ್ ಡೌನ್ ಬಳಿಕ ಪುನರಾರಂಭಗೊಂಡ ಬಸ್ ಸಹಿತ ವಾಹನ ಸಂಚಾರ ವ್ಯವಸ್ಥೆಗಳು ಇದೀಗ ಮೊದಲಿನ ಸ್ಥಿತಿಗೆ ಮರಳಿದ್ದರೂ, ಕುಂಬಳೆ-ಬದಿಯಡ್ಕ-ಮುಳ್ಳೇರಿಯ ರಸ್ತೆ ಸಾರಿಗೆ ಸ್ಥಿತಿ ಅವ್ಯವಸ್ಥೆಯಿಂದ ಪ್ರಯಾಣಿಕರಿಗೆ ಭಾರೀ ತೊಂದರೆಯಾಗುತ್ತಿದೆ.
ಪ್ರಸ್ತುತ ಕುಂಬಳೆಯಿಂದ ಸಂಜೆ ವೇಳೆ ಸಮರ್ಪಕವಾಗಿ ಬಸ್ ಸಂಚರಿಸದಿರುವುದರಿಂದ ಹಲವು ಪ್ರಯಾಣಿಕರು ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಕೋವಿಡ್ ಪೂರ್ವದಲ್ಲಿ ರಾತ್ರಿ 8.20 ರ ವರೆಗೂ ಬದಿಯಡ್ಕ-ಮುಳ್ಳೇರಿಯ ಕಡೆಗಳಿಗೆ ಬಸ್ ಸಂಚಾರ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಆದರೆ, ಇದೀಗ 6.55-7 ರ ನಡುವೆ ಬಸ್ ತೆರಳಿದರೆ ಬಳಿಕ ಪ್ರಯಾಣಿಕರಿಗೆ ಬಸ್ ಲಭ್ಯವಾಗುತ್ತಿಲ್ಲ. ಇದರಿಂದ ಮಂಗಳೂರು, ಕಾಸರಗೋಡು ಕಡೆಗಳಿಂದ ಆಗಮಿಸುವ ಮಹಿಳೆಯರು, ವಿದ್ಯಾರ್ಥಿಗಳ ಸಹಿತ ಹಲವು ಪ್ರಯಾಣಿಕರು ಪರಿತಪಿಸುವ ಪರಿಸ್ಥಿತಿ ಎದುರಾಗಿದೆ.
ಈಗಾಗಲೇ ತಲಪ್ಪಾಡಿ, ಚೆರ್ಕಳ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಜೊತೆಗೆ ಮಂಗಳೂರು ಪಂಪ್ ವೆಲ್ ನಿಂದ ತೊಕ್ಕೋಟ್ ವರೆಗೆ ಸಂಜೆ ವೇಳೆ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ಕಾರಣ ನಿಗದಿತ ಸಮಯಕ್ಕೆ ಹೆದ್ದಾರಿ ಬಸ್ ಸಂಚಾರ ಗುರಿ ಮುಟ್ಟುವಲ್ಲಿ ದಿನನಿತ್ಯ ಭಾರೀ ಸಮಯದ ವ್ಯಯವಾಗುತ್ತಿದ್ದು, ಇದರಿಂದ ಕುಂಬಳೆಯಿಂದ ಇತರ ಗ್ರಾಮೀಣ ಪ್ರದೇಶಗಳಿಗೆ ತೆರಳುವಲ್ಲಿ ಮತ್ತಷ್ಟು ಸಮಯಾವಕಾಶ ಬೇಕಾಗುತ್ತಿದೆ. ಈ ಮಧ್ಯೆ ಕುಂಬಳೆಯಿಂದ ಸಂಜೆ 7 ರ ಬಳಿಕ ಬಸ್ ಸಂಚಾರ ಇಲ್ಲದಿರುವುದು ವ್ಯಾಪಕ ಸಮಸ್ಯೆಗೆ ಕಾರಣವಾಗಿದೆ.
ಕುಂಬಳೆಯಲ್ಲಿ ಬಸ್ ಲಭ್ಯವಾಗದೆ ಬಾಕಿಯಾಗುವ ಪ್ರಯಾಣಿಕರು ಬಳಿಕ ಸೀತಾಂಗೋಳಿಯ ಬಳಿಕದ ನಿಲ್ದಾಣಗಳಾದ ನೀರ್ಚಾಲು, ಕನ್ಯಪ್ಪಾಡಿ, ಬದಿಯಡ್ಕ, ನಾರಂಪಾಡಿ, ಮುಳ್ಳೇರಿಗಳ ಒಳ ಪ್ರದೇಶಗಳಿಗೆ ತೆರಳುವವರಿಗೆ ದೊಡ್ಡ ಸವಾಲಾಗುತ್ತಿದ್ದು, ದುಬಾರಿ ಬಾಡಿಗೆಯ ಟ್ಯಾಕ್ಸಿ ಬಳಸಿ ದಿನನಿತ್ಯ ತೆರಳಲು ಸಾಧ್ಯವಾಗದವರು ಏನು ಮಾಡಬೇಕೆಂದು ತಿಳಿಯದೆ ಕಂಗಾಲಾಗಿದ್ದಾರೆ.
ಹಗಲು ವೇಳೆಯೂ ಕುಂಬಳೆ-ಮುಳ್ಳೇರಿಯ ಮಧ್ಯೆ ಬಸ್ ಸೇವೆಯಲ್ಲಿ ಒಂದು ಸಂಚಾರದಿಂದ ಇನ್ನೊಂದು ಸಂಚಾರದ ಮಧ್ಯೆ ದೀರ್ಘ ಕಾಯುವಿಕೆ ಕಂಡುಬಂದಿದೆ. ಹಿಂದೆ ಐದರಿಂದ 8 ನಿಮಿಷಗಳ ಮಧ್ಯೆ ಒಂದರಂತೆ ಸಂಚರಿಸುತ್ತಿದ್ದ ಬಸ್ ಗಳು ಇದೀಗ 15 ರಿಂದ 25 ನಿಮಿಷಗಳ ಅಂತರದಲ್ಲಿ ಸಂಚರಿಸುತ್ತಿವೆ. ಇದರಿಂದ ಬಸ್ ಗಳಲ್ಲಿ ಜನ ನಿಬಿಡತೆ ಕಂಡುಬಂದಿದ್ದು, ಮಹಿಳೆಯರು, ವೃದ್ದರು ಹಾಗೂ ರೋಗಿಗಳಿಗೆ ಆರಾಮವಾಗಿ ಸಂಚರಿಸಲು ತೊಂದರೆಗಳಾಗುತ್ತಿದೆ.
ಸಂಬಂಧಪಟ್ಟ ಅಧಿಕೃತರು, ಬಸ್ ಮ್ಹಾಲಕರು ಕುಂಬಳೆ-ಮುಳ್ಳೇರಿಯ ಮಧ್ಯೆ ಸಮರ್ಪಕವಾದ ರೀತಿಯಲ್ಲಿ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ದೈನಂದಿನ ಬಸ್ ಪ್ರಯಾಣಿಕರು ಮನವಿ ಮಾಡಿದ್ದಾರೆ.
ಅಭಿಮತ:
1) ಸಂಸ್ಥೆಯೊಂದರ ಉದ್ಯೋಗಿಯಾಗಿರುವ ನಾನು ಮಂಗಳೂರಿನಿಂದ ಹೊರಡುವಾಗಲೇ ಸಂಜೆ 6 ಗಂಟೆಯಾಗುತ್ತದೆ. ಟ್ರಾಫಿಕ್ ಸಹಿತ ಹಲವು ಸಮಸ್ಯೆ ದಾಟಿ ಕುಂಬಳೆ ತಲಪುವಾಗ 7.30 ಆಸುಪಾಸಿನ ಸಮಯವಾಗುತ್ತಿದ್ದು, ಅಲ್ಲಿಂದ ಮುಂದೆ ಊರಿಗೆ ತೆರಳಲು ಬಸ್ ಇಲ್ಲದೆ ಭಾರೀ ಸವಾಲಾಗಿದೆ. ಮಂಗಳೂರಿನ ಉದ್ಯೋಗ ಕೈಬಿಟ್ಟು ಬದಲಿ ವ್ಯವಸ್ಥೆಗೆ ಆಲೋಚಿಸಬೇಕಾದ ಅನಿವಾರ್ಯತೆ ಇದೆ. ಆದರೆ ಅದು ಪ್ರಾಯೋಗಿಕವಾಗದು. ಈ ಹಿನ್ನೆಲೆಯಲ್ಲಿ ಬಸ್ ವ್ಯವಸ್ಥೆ ರಾತ್ರಿ 8.30ರ ವರೆಗೂ ವಿಸ್ತರಿಸುವ ಅಗತ್ಯವಿದೆ.
-ನವೀನ್ ಕುಮಾರ್ ಕಾರ್ಮಾರು. ಮಾನ್ಯ
ನಿತ್ಯ ಪ್ರಯಾಣಿಕ
2) ಕೋವಿಡ್ ಪೂರ್ವದಲ್ಲಿದ್ದ ಪ್ರಯಾಣಿಕರು ಈಗಿಲ್ಲ. ಹೆಚ್ಚಿನವರೂ ಸ್ವಂತ ವಾಹನ ಖರೀದಿಸಿದ್ದಾರೆ. ಜೊತೆಗೆ ಬಸ್ ಸಂಚಾರ ಈ ಹಿಂದೆ ಇದ್ದಂತೆ ಬೇಜವಾಬ್ದಾರಿಯುತವಾಗಿ ಮಾಡಲು ಸಾಧ್ಯವಿಲ್ಲ. ಕಾರಣ ಡೀಸೆಲ್ ದರ, ಟ್ಯಾಕ್ಸ್ ಸಹಿತ ಖರ್ಚುವೆಚ್ಚಗಳು ಹೆಚ್ಚಳಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದಷ್ಟು ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರ ಆವಶ್ಯ ಅನುಸರಿಸಿ ಸಂಚಾರ ವಿಸ್ತರಿಸಲಾಗುವುದು.
-ಹೆಸರು ಹೇಳಲಿಚ್ಚಿಸದ ಕುಂಬಳೆ-ಮುಳ್ಳೇರಿಯ ಬಸ್ ಒಂದರ ನಿರ್ವಾಹಕ