ಕಾಸರಗೋಡು: ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಮಿಷನ್ ಅಮೃತ್ ಸರೋವರ ಯೋಜನೆಯು ಜಿಲ್ಲೆಯ ಕೆರೆಗಳನ್ನು ಪುನರುಜ್ಜೀವನಗೊಳಿಸಲಿದೆ. ಜಿಲ್ಲೆಯ ಜಲಸಂಪನ್ಮೂಲವನ್ನು ಹೆಚ್ಚಿಸುವ ಉದ್ದೇಶದಿಂದ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೆರೆಗಳನ್ನು ನಿರ್ಮಿಸಿ ಈಗಿರುವ ಕೆರೆಗಳನ್ನು ಸಂರಕ್ಷಿಸಿ ಯೋಜನೆಯ ಭಾಗವಾಗಿಸಲಾಗುವುದು. ಅಂತರ್ಜಲ ಕುಸಿತ ತೀವ್ರವಾಗಿರುವ ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್‍ಗಳಲ್ಲಿ ಈ ಯೋಜನೆಯು ಹೆಚ್ಚು ಪ್ರಯೋಜನಕಾರಿಯಾಗಲಿದೆ. ಜಿಲ್ಲೆಯಲ್ಲಿ ಈವರೆಗೆ ಬಂದಿರುವ ವರದಿ ಆಧರಿಸಿ 14 ಕೆರೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಧ್ಯಯನಗಳು ಪ್ರಗತಿಯಲ್ಲಿವೆ.
ಬೇಡಡ್ಕ, ಕಾರಡ್ಕ, ಕೋಡೋಂ ಬೆಳ್ಳೂರು, ಪುಲ್ಲೂರು ಪೆರಿಯ, ಮೀಂಜ ಪಂಚಾಯತ್‍ಗಳಲ್ಲಿ ಯೋಜನೆಗೆ ಭೂಮಿ ಗುರುತಿಸಲಾಗಿದೆ. ಆದೂರು, ಕೋಡೋಂ ಬೆಳ್ಳೂರು ಮತ್ತು ತಾಯನೂರು ಪ್ರದೇಶಗಳಲ್ಲಿ ತಲಾ ಎರಡು ಮತ್ತು ಕೊಳತ್ತೂರು, ದೇಲಂಪಾಡಿ, ಚಿತ್ತಾರಿ, ಕಾರಡ್ಕ, ಪೆರಿಯ ಮತ್ತು ಗುಡ್ಮೇರ್ ಪ್ರದೇಶಗಳಲ್ಲಿ ತಲಾ ಒಂದು ಕೆರೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಆನೋಡಿಪಳ್ಳ ಸೇರಿದಂತೆ 16 ಕೆರೆಗಳನ್ನು ಮೇಲ್ದರ್ಜೆಗೇರಿಸಿ ಯೋಜನೆಯ ಭಾಗವಾಗಿಸಲಾಗುವುದು.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರ ಸಹಭಾಗಿತ್ವದಲ್ಲಿ ಕೆರೆಗಳನ್ನು ನಿರ್ಮಿಸಲಾಗುವುದು. ಮಿಷನ್ ಅಮೃತ್ ಸರೋವರ ಯೋಜನೆ ಅನುಷ್ಠಾನಗೊಳಿಸುವ ಯೋಜನೆಗೆ ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಜಿಲ್ಲಾ ನೋಡಲ್ ಅಧಿಕಾರಿಯಾಗಿದ್ದು, ವಿವಿಧ ಪಂಚಾಯಿತಿಗಳು ಹಾಗೂ ವಿವಿಧ ಇಲಾಖೆಗಳಿಂದ ಹೊಸ ಕೆರೆಗಳ ನಿರ್ಮಾಣಕ್ಕೆ ಪ್ರಸ್ತಾವನೆಗಳು ಬರುತ್ತಿವೆ. ಮಡಿಕೈ ಪಂಚಾಯಿತಿಯಲ್ಲಿ ಯೋಜನೆಯ ಭಾಗವಾಗಿ 9 ವಾರ್ಡ್‍ಗಳಲ್ಲಿ ಹೊಸ ಕೆರೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.ಜಿಲ್ಲಾ ಪಂಚಾಯಿತಿಯ ಕೆರೆಗಳ ನವೀಕರಣ ಯೋಜನೆಯ ಭಾಗವಾಗಿ ಅಮೃತ ಸರೋವರ ಯೋಜನೆಯಲ್ಲಿ ಹನ್ನೊಂದು ಕೆರೆಗಳನ್ನು ಸೇರಿಸಲಾಗುವುದು.
ಪ್ರಧಾನಿ ನರೇಂದ್ರ ಮೋದಿ ಅವರು ಪಂಚಾಯತ್ ರಾಜ್ ದಿನ ಏಪ್ರಿಲ್ 24 ರಂದು ಮಿಷನ್ ಅಮೃತ್ ಸರೋವರ ಯೋಜನೆಯನ್ನು ಘೋಷಿಸಿದ್ದರು. ದೇಶದ ಪ್ರತಿ ಜಿಲ್ಲೆಯಲ್ಲಿ 75 ಕೆರೆಗಳನ್ನು ನಿರ್ಮಿಸುವ ಯೋಜನೆ ಇದಾಗಿದೆ. ಅಸ್ತಿತ್ವದಲ್ಲಿರುವವುಗಳನ್ನು ಉಳಿಸಬಹುದು ಮತ್ತು ಯೋಜನೆಯಲ್ಲಿ ಸೇರಿಸಬಹುದು. ಭಾಸ್ಕರಾಚಾರ್ಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಫಾರ್ ಸ್ಪೇಸ್ ಅಪ್ಲಿಕೇಶನ್ಸ್ ಮತ್ತು ಜಿಯೋ ಇನ್ಫಮ್ರ್ಯಾಟಿಕ್ಸ್ ಭೌಗೋಳಿಕ ಅಂಶಗಳ ಆಧಾರದ ಮೇಲೆ ಜಿಲ್ಲೆಗಳಿಗೆ ಅಗತ್ಯವಿರುವ ಯೋಜನಾ ಸ್ಥಳವನ್ನು ಹಂಚುತ್ತದೆ. ಯೋಜನೆಯು ಆಗಸ್ಟ್ 15, 2023 ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.