ನವದೆಹಲಿ: ಎರಡು ದಿನಗಳ ಭಾರತ- ಆಸಿಯಾನ್ ರಾಷ್ಟ್ರಗಳ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ವಿದೇಶಾಂಗ ಸಚಿವರ ಸಮ್ಮೇಳನಕ್ಕೆಂದು ಭಾರತಕ್ಕೆ ಬಂದಿರುವ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ನವದೆಹಲಿ: ಎರಡು ದಿನಗಳ ಭಾರತ- ಆಸಿಯಾನ್ ರಾಷ್ಟ್ರಗಳ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ವಿದೇಶಾಂಗ ಸಚಿವರ ಸಮ್ಮೇಳನಕ್ಕೆಂದು ಭಾರತಕ್ಕೆ ಬಂದಿರುವ ಆಸಿಯಾನ್ ದೇಶಗಳ ವಿದೇಶಾಂಗ ಸಚಿವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
'ಆಸಿಯಾನ್' ದೇಶಗಳೊಂದಿಗೆ ಭಾರತ ಸಂಬಂಧದ 30ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಭಾರತ ಗುರುವಾರದಿಂದ ಎರಡು ದಿನಗಳವರೆಗೆ ಒಕ್ಕೂಟದ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮ್ಮೇಳನವನ್ನು ನವದೆಹಲಿಯಲ್ಲಿ ಆಯೋಜಿಸಿದೆ.
'ಆಸಿಯಾನ್ ದೇಶಗಳೊಂದಿಗೆ ಭಾರತ ಉತ್ತಮ ಬಾಂಧವ್ಯ ಹೊಂದಿದೆ. ಈ ದೇಶಗಳ ವಿದೇಶಾಂಗ ಸಚಿವರು ಮತ್ತು ಪ್ರತಿನಿಧಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆದಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಉಪಸ್ಥಿತರಿದ್ದರು.
ಏಕೀಕೃತ 'ಆಸಿಯಾನ್'ಗೆ ಬೆಂಬಲ: ಇಂಡೊ- ಪೆಸಿಫಿಕ್ ವಲಯದಲ್ಲಿ ಪ್ರಮುಖ ಪಾತ್ರ ಹೊಂದಿರುವ ಪ್ರಬಲ, ಏಕೀಕೃತ ಮತ್ತು ಸಮೃದ್ಧ 'ಆಸಿಯಾನ್' ಅನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಸಮ್ಮೇಳನ ಸಭೆಯಲ್ಲಿ ಹೇಳಿದರು.
'ಉಕ್ರೇನ್ ಬೆಳವಣಿಗೆಗಳಿಂದ ಎದುರಾಗಿರುವ ಕಠಿಣ ಸಂದರ್ಭವನ್ನು ಎದುರಿಸಲು ಎರಡೂ ಕಡೆಯಿಂದ ಹೊಸ ಹಾದಿಗಳನ್ನು ಗುರುತಿಸಬೇಕಿದೆ' ಎಂದು ಅವರು ಪ್ರತಿಪಾದಿಸಿದರು.
ಉಕ್ರೇನ್ ಬಿಕ್ಕಟ್ಟಿನಿಂದ ಜಾಗತಿಕವಾಗಿ ಆಹಾರ, ಇಂಧನ, ರಸಗೊಬ್ಬರಗಳು ಮತ್ತು ಸರಕುಗಳ ಬೆಲೆಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಿವೆ. ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಗಳಲ್ಲಿ ವ್ಯತ್ಯಯಗಳಾಗಿವೆ ಎಂದು ತಿಳಿಸಿದರು.
ವ್ಯಾಪಾರ, ಆರ್ಥಿಕತೆ ಮತ್ತು ಪ್ರಾದೇಶಿಕ ಭದ್ರತೆಯ ಮೇಲೆ ಎದುರಾಗಿರುವ ವ್ಯತಿರಿಕ್ತ ಪರಿಣಾಮವನ್ನು ಎದುರಿಸಲು ಈ ಸಮ್ಮೇಳನದಲ್ಲಿ ಹೊಸ ಮಾರ್ಗಗಳನ್ನು ಅನ್ವೇಷಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.