ನವದೆಹಲಿ:ಪಾಲಿಯೆಸ್ಟರ್ ಮತ್ತು ಯಂತ್ರ ನಿರ್ಮಿತ ರಾಷ್ಟ್ರಧ್ವಜಗಳನ್ನು ಸಿದ್ಧಪಡಿಸಲು ಅನುಮತಿಸುವ ಸಲುವಾಗಿ ಕೇಂದ್ರ ಸರಕಾರ ಫ್ಲ್ಯಾಗ್ ಕೋಡ್ ಆಫ್ ಇಂಡಿಯಾಗೆ ಕಳೆದ ವರ್ಷ ತಿದ್ದುಪಡಿ ತಂದಿದೆ. ಎಲ್ಲಾ ಸರಕಾರಿ ಕಟ್ಟಡಗಳು, ಖಾಸಗಿ ಕಚೇರಿಗಳು ನಿವಾಸಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ʼಹರ್ ಘರ್ ತಿರಂಗಾʼ ಯೋಜನೆಗೆ ಸಾಕಷ್ಟು ಧ್ವಜಗಳು ಲಭ್ಯಗೊಳಿಸುವುದು ಇದರ ಉದ್ದೇಶವಾಗಿದೆ ಎಂದು thehindu.com ವರದಿ ಮಾಡಿದೆ.
ಈ ಹಿಂದೆ ಕೇವಲ ಕೈಮಗ್ಗದ ಹತ್ತಿಯ, ಉಣ್ಣೆ, ರೇಷ್ಮೆ ಅಥವಾ ಖಾದಿ ಧ್ವಜಗಳನ್ನು ಮಾತ್ರ ಅನುಮತಿಸಲಾಗಿತ್ತು.
ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2022 ಅಧಿಸೂಚನೆಯನ್ನು ಕಳೆದ ವರ್ಷದ ಡಿಸೆಂಬರ್ 30 ರಂದು ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ್ದು ಅದರಲ್ಲಿ ಮೇಲಿನ ಮಾಹಿತಿ ನೀಡಲಾಗಿದೆ ಹಾಗೂ ಈಗ "ಹ್ಯಾಂಡ್ ಸ್ಪನ್, ಕೈಮಗ್ಗದ ಅಥವಾ ಯಂತ್ರ ನಿರ್ಮಿತ ಕಾಟನ್/ಪಾಲಿಯೆಸ್ಟರ್/ಉಣ್ಣೆ/ಸಿಲ್ಕ್ ಖಾದಿ ಬಟ್ಟೆಗಳನ್ನು ಬಳಸಬಹುದು" ಎಂದು ಬರೆಯಲಾಗಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಯೋಜನೆಯಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹರ್ ಘರ್ ತಿರಂಗಾ ಯೋಜನೆಯನ್ನು ಘೋಷಿಸಿದ್ದರು. ಎಪ್ರಿಲ್ 12ರಂದು ಜಾರಿಯಾದ ಈ ಯೋಜನೆಯಡಿ ಭಾರತೀಯರಿಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಅರಳಿಸಲು ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಜನರಲ್ಲಿ ದೇಶಭಕ್ತಿಯ ಭಾವನೆ ಉದ್ದೀಪನಗೊಳಿಸುವುದು ಇದರ ಉದ್ದೇಶವೆಂದೂ ಸರಕಾರ ಹೇಳಿದೆ.
ಮೇ 13 ರಂದು ಕ್ಯಾಬಿನೆಟ್ ಕಾರ್ಯದರ್ಶಿ ಉನ್ನತ ಮಟ್ಟದ ಸಭೆಯನ್ನೂ ನಡೆಸಿದ್ದು ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ರಂಗದ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಸ್ವಸಹಾಯ ಸಂಘಗಳ ಸಕ್ರಿಯ ಭಾಗವಹಿಸುವಿಕೆಯನ್ನು ಕೋರಲಾಗಿದೆ ಎಂದು ಮೇ 20ರಂದು ಸಂಸ್ಕೃತಿ ಸಚಿವಾಲಯವು ಎಲ್ಲಾ ಸರಕಾರಿ ಇಲಾಖೆಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.