ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದಿಂದ ಒಮ್ಮತದ ಅಭ್ಯರ್ಥಿ ಯಾರಾಗ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗೇ ಉಳಿದಿದೆ. ಯಾಕೆಂದರೆ ವಿರೋಧ ಪಕ್ಷಗಳು ಪ್ರಸ್ತಾಪಿಸಿದ ಅಭ್ಯರ್ಥಿಗಳೆಲ್ಲಾ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿವೆ.
ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುವ ವಿರೋಧ ಪಕ್ಷಗಳ ಮನವಿಯನ್ನು ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಇಂದು ತಿರಸ್ಕರಿಸಿದ್ದಾರೆ. 77 ವರ್ಷ ವಯಸ್ಸಿನ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ನಂತರ ಪ್ರಸ್ತಾವನೆಯಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡ ಮೂರನೇ ರಾಜಕೀಯ ವ್ಯಕ್ತಿ ಗೋಪಾಲಕೃಷ್ಣ ಗಾಂಧಿ ಅವರಾಗಿದ್ದಾರೆ.
ಪ್ರತಿಪಕ್ಷದ ಹಲವಾರು ಗೌರವಾನ್ವಿತ ನಾಯಕರು ಮುಂಬರುವ ಚುನಾವಣೆಯಲ್ಲಿ ರಾಷ್ಟ್ರಪತಿಯ ಅತ್ಯುನ್ನತ ಹುದ್ದೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಲು ನನ್ನನ್ನು ಯೋಚಿಸಲು ಚಿಂತಿಸುವ ಮೂಲಕ ನನಗೆ ಗೌರವ ನೀಡಿದ್ದಾರೆ. ನಾನು ಅವರಿಗೆ ಅತ್ಯಂತ ಕೃತಜ್ಞನಾಗಿದ್ದೇನೆ. ಆದರೆ ವಿಷಯವನ್ನು ಆಳವಾಗಿ ಪರಿಗಣಿಸಿದ ನಂತರ ವಿರೋಧ ಪಕ್ಷದ ಅಭ್ಯರ್ಥಿಯಾಗುವವರು ರಾಷ್ಟ್ರೀಯ ಒಮ್ಮತ ಮತ್ತು ರಾಷ್ಟ್ರೀಯ ವಾತಾವರಣವನ್ನು ಪ್ರತಿಪಕ್ಷಗಳ ಏಕತೆಯ ಜೊತೆಗೆ ಸೃಷ್ಟಿಸುವವರಾಗಿರಬೇಕು. ನನಗಿಂತ ಉತ್ತಮವಾಗಿ ಇದನ್ನು ಮಾಡುವವರು ಇದ್ದಾರೆಂದು ನಾನು ಭಾವಿಸುತ್ತೇನೆ ಎಂದು ಗೋಪಾಲಕೃಷ್ಣ ಗಾಂಧಿ ಹೇಳಿದರು.
ರಾಷ್ಟ್ರಪತಿ ಚುನಾವಣೆಗೆ ತಮ್ಮ ಜಂಟಿ ಅಭ್ಯರ್ಥಿಯನ್ನು ಚರ್ಚಿಸಲು ಮುಂಬೈನಲ್ಲಿ ವಿರೋಧ ಪಕ್ಷಗಳ ನಿಗದಿತ ಸಭೆಗೆ r ಮುಂಚಿತವಾಗಿ ಗೋಪಾಲಕೃಷ್ಣ ಗಾಂಧಿ ತಮ್ಮ ಹೇಳಿಕೆ ನೀಡಿದ್ದಾರೆ. ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಅವರ ಹೆಸರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಚಿಸಿದ್ದರು.
ಜೂನ್. 15ರಂದು ನೂತನ ರಾಷ್ಟ್ರಪತಿ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು, ನಾಮಪತ್ರ ಸಲ್ಲಿಕೆಗೆ ಜೂನ್ 29 ಕೊನೆಯ ದಿನವಾಗಿದೆ. ಅಗತ್ಯ ಬಿದ್ದರೆ ಜುಲೈ 18ರಂದು ಚುನಾವಣೆ ಹಾಗೂ ಜುಲೈನಲ್ಲಿ ಮತ ಎಣಿಕೆ ನಡೆಯಲಿದೆ.