ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿದ ರಕ್ಷಣಾ ಪಡೆಗಳ ಹೊಸ ನೇಮಕಾತಿ ಯೋಜನೆ ವಿರುದ್ಧ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳ ಬೆನ್ನಲ್ಲೇ ಭಾರತೀಯ ವಾಯುಪಡೆ(ಐಎಎಫ್) ಅಗ್ನಿಪಥ್ ಯೋಜನೆಯಡಿ ನೇಮಕಾತಿಗೆ ನೋಂದಣಿ ಆರಂಭಿಸುವ ಮೂಲಕ ಹೊಸ ನೇಮಕಾತಿ ಪ್ರಕ್ರಿಯೆಗೆ ಶುಕ್ರವಾರ ಚಾಲನೆ ನೀಡಿದೆ.
"#Agniveervayuಗೆ ಅರ್ಜಿ ಸಲ್ಲಿಸಲು ನೋಂದಣಿ ವಿಂಡೋ ತೆರೆಯಲಾಗಿದ್ದು, ಇಂದು ಬೆಳಗ್ಗೆ 10 ರಿಂದ ಕಾರ್ಯನಿರ್ವಹಿಸುತ್ತಿದೆ" ಎಂದು ಐಎಎಫ್ ಟ್ವಿಟ್ ಮಾಡಿದೆ.
ಜೂನ್ 14 ರಂದು ಅಗ್ನಿಪಥ್ ಯೋಜನೆ ಘೋಷಿಸಿದ ಕೇಂದ್ರ ಸರ್ಕಾರ 17 ರಿಂದ 21 ವರ್ಷ ವಯಸ್ಸಿನ ಯುವಕರನ್ನು ನಾಲ್ಕು ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಮತ್ತು ಅವರಲ್ಲಿ ಶೇ. 25 ರಷ್ಟು ಜನರನ್ನು ನಂತರ ನಿಯಮಿತ ಸೇವೆಗೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿತ್ತು.
ದೇಶದ ಹಲವು ಭಾಗಗಳಲ್ಲಿ ಯೋಜನೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಹಲವಾರು ವಿರೋಧ ಪಕ್ಷಗಳು ಮತ್ತು ಮಿಲಿಟರಿ ತಜ್ಞರು ಸಹ ಈ ಯೋಜನೆಯನ್ನು ಟೀಕಿಸಿದರು. ಇದು ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ವಾದಿಸಿದ್ದರು.