ಉಪ್ಪಳ: ಕಲ್ಕೂರ ಪ್ರತಿಷ್ಠಾನ ಮಂಗಳೂರು ಪೈವಳಿಕೆ ಸಮೀಪದ ಜೋಡುಕಲ್ಲಿನ ಜನಾರ್ದನ ಕಲಾವೃಂದದ ಸಹಯೋಗದಲ್ಲಿ ಜೋಡುಕಲ್ಲು ಜೆಕೆವಿ ಸಭಾಂಗಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಕಯ್ಯಾರ ಕಿಞ್ಞಣ್ಣ್ಣ ರೈ ಹುಟ್ಟುಹಬ್ಬ-ಕಿಞ್ಞಣ್ಣ ರೈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ವೇದಿಕೆ ಏರುವ ಮೊದಲು ಒಂದಷ್ಟು ಹೊತ್ತು ಜನಪರ ನಿಲುವಿನ ದ್ಯೋತಕವೆಂಬಂತೆ ಪೋಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಗಮನ ಸೆಳೆದರು.
ಶಾಸಕರು ಸಮಾರಂಭಕ್ಕಾಗಿ ಉಪ್ಪಳ ಮಾರ್ಗವಾಗಿ ಜೋಡುಕಲ್ಲಿನ ಸಮಾರಂಭ ನಡೆಯುವ ಸ್ಥಳಕ್ಕಾಗಮಿಸುವಾಗ ರಸ್ತೆ ಬದಿ ಮಂಜೇಶ್ವರ ಠಾಣಾಧಿಕಾರಿ ಅನ್ಸಾರ್ ತಮ್ಮ ತಂಡದವರೊಂದಿಗೆ ವಾಹನ ತಪಾಸಣೆಯಲ್ಲಿ ನಿರತರಾಗಿದ್ದರು. ಸಮಾರಂಭ ನಡೆಯುವ ಸಭಾಂಗಣದ ಸನಿಹವೇ ರಸ್ತೆ ಬದಿಯಲ್ಲಿ ಪೋಲೀಸರ ದೈನಂದಿನ ತಪಾಸಣೆಯಿಂದ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಒಂದಷ್ಟು ತೊಂದರೆಯಾಗುತ್ತಿರುವುದನ್ನು ಗಮನಿಸಿ ತಮ್ಮ ಕಾರಿನಿಂದಿಳಿದ ಶಾಸಕರು ಪೋಲೀಸರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಠಾಣಾಧಿಕಾರಿ ಅನ್ಸಾರ್ ಅವರು ನಾವು ಸರ್ಕಾರವೇ ನೀಡಿರುವ ಕರ್ತವ್ಯ ಪಾಲಿಸುತ್ತಿರುವುದಾಗಿ ಉತ್ತರಿಸಿದರೂ ಒಂದಷ್ಟು ದೂರ ಈ ತಪಾಸಣೆ ಮುಂದುವರಿಸಬಹುದೆಂದು ಶಾಸಕರು ತಿಳಿಸಿದರು. ಈ ವೇಳೆ ಠಾಣಾಧಿಕಾರಿ ಮತ್ತು ಶಾಸಕರ ಮಧ್ಯೆ ಭಾರೀ ಮಾತಿನ ಚಕಮಕಿ ನಡೆಯಿತು. ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ರ್ಯಾಂಕ್ ನ ಡಾ.ಸಿ ಸೋಮಶೇಖರ್ ಭಾಗವಹಿಸುವ ಈ ಕಾರ್ಯಕ್ರಮದ ಸಮೀಪದಲ್ಲೇ ಇಂತಹ ತಪಾಸಣೆ ನಡೆಸುವ ಅಗತ್ಯವಿಲ್ಲ ಎಂದು ವಾದಿಸಿದ ಶಾಸಕರು ಕೊನೆಗೂ ಪೋಲೀಸರನ್ನು ಬೇರೆಡೆ ತಪಾಸಣೆಗೆ ಕಳಿಸುವಲ್ಲಿ ಯಶಸ್ವಿಯಾದರು.