ತಿರುವನಂತಪುರ: ಸ್ವಪ್ನಾ ಸುರೇಶ್ ಅವರ ಆಘಾತಕಾರಿ ಸಂಗತಿ ಬಹಿರಂಗಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜೀನಾಮೆಗೆ ಆಗ್ರಹಿಸಿ
ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಯುವಮೋರ್ಚಾ ಕಾರ್ಯಕರ್ತರು ಸೆಕ್ರೆಟರಿಯೇಟ್‍ಗೆ ಮೆರವಣಿಗೆ ನಡೆಸಿದರು. ಅವರನ್ನು ಹೊರ ಕಳಿಸಲು ಪೋಲೀಸರು ಬಲಪ್ರಯೋಗ ಮಾಡಿದಾಗ ತಳ್ಳಾಟ, ಗದ್ದಲಗಳು ನÀಡೆಯಿತು. ರಸ್ತೆ ತಡೆ ನಡೆಸಿದ ಯುವಮೋರ್ಚಾ ಕಾರ್ಯಕರ್ತರನ್ನು ಪೋಲೀಸರು ಜೀಪಿನಲ್ಲಿ ಹಾಕಿ ಠಾ|ಣೆಗೆ ಕರೆದೊಯ್ದರು.
ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಯುವಮೋರ್ಚಾ ಕಾರ್ಯಕರ್ತರು ಎರ್ನಾಕುಳಂನಲ್ಲಿ ಪ್ರತಿಭಟನೆ ನಡೆಸಿದರು. ಕಣಯನ್ನೂರು ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಸಾಂಕೇತಿಕವಾಗಿ ಬಿರಿಯಾನಿ ಬಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸಿ.ಜಿ.ರಾಜಗೋಪಾಲ್ ಮಾತನಾಡಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪಿಣರಾಯಿ ವಿಜಯನ್ ವಿರುದ್ಧ ಪ್ರತಿಭಟನೆ ನಡೆಸಿದರು. ಅಲ್ಲಲ್ಲಿ ಬಿರಿಯಾನಿ, ಕಾಪಿ ಮೂಲಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಕೊಟ್ಟಾಯಂ ಕಲೆಕ್ಟರೇಟ್ ಗೆ ಯುವ ಕಾಂಗ್ರೆಸ್ ನಡೆಸಿದ ಮೆರವಣಿಗೆಯಲ್ಲಿ ಘರ್ಷಣೆ ನಡೆದಿದೆ. ಕಲೆಕ್ಟರೇಟ್ ಗೇಟ್ ಮುಂದೆ ನಡೆದ ಮೆರವಣಿಗೆಯನ್ನು ಪೋಲೀಸರು ತಡೆದರೂ ಕಾರ್ಯಕರ್ತರು ಗೋಡೆ ಹಾರಿ ಒಳಗೆ ಪ್ರವೇಶಿಸಿದರು. ಈ ವೇಳೆ ಪೋಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಹೆಚ್ಚಿನ ಪೋಲೀಸರು ಆಗಮಿಸಿ ಅವರನ್ನು ಬಂಧಿಸಿದರು. ಡಿಸಿಸಿ ಅಧ್ಯಕ್ಷ ನಟ್ಟಕಂ ಸುರೇಶ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಚಿಂಟು ಕುರಿಯನ್ ಜಾಯ್, ಟಾಮ್ ಕೋರಾ, ರಾಹುಲ್ ಮರಿಯಪಳ್ಳಿ ಧರಣಿಯ ನೇತೃತ್ವ ವಹಿಸಿದ್ದರು.
ಯುವ ಮೋರ್ಚಾ, ಯುವ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ರಾತ್ರಿಯೂ ಸೆಕ್ರೆಟರಿಯೇಟ್‍ಗೆ ಮೆರವಣಿಗೆ ನಡೆಸಿದರು. ಪ್ರತಿಭಟನೆಯು ಜಲಫಿರಂಗಿ ಮತ್ತು ಲಾಠಿಚಾರ್ಜ್ ಮಾಡುವ ಹಂತಕ್ಕೆ ತಲುಪಿತ್ತು.