ತ್ರಿಶೂರ್: ಗುರುವಾಯೂರ್ ದೇವಸ್ಥಾನದಲ್ಲಿ ಕಾಣಿಕೆಯಾಗಿ ಸಲ್ಲಿಕೆಯಾಗಿದ್ದ ಮಹೀಂದ್ರ ಥಾರ್ ಕಾರನ್ನು ಮರು ಹರಾಜಿಗೆ ಇಡಲಾಗುತ್ತಿದೆ. ಇದೇ 6ರಂದು ಬೆಳಗ್ಗೆ 11 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ 15.10 ಲಕ್ಷ ರೂ.ಗೆ ಹೊರರಾಜ್ಯದ ಅಮಲ್ ಮೊಹಮ್ಮದ್ ಎಂಬುವರು ವಾಹನವನ್ನು ಹರಾಜಿಗೆ ಪಡೆದಿದ್ದು, ಸರಿಯಾಗಿ ಹರಾಜಾಗಿಲ್ಲ, ಬೆಲೆಯೂ ಬಂದಿಲ್ಲ ಎಂಬ ದೂರುಗಳು ಬಂದಿದ್ದವು.
ಅಂದು ನಡೆದ ಹರಾಜಿನಲ್ಲಿ ಒಬ್ಬರೇ ಭಾಗವಹಿಸಿದ್ದರು. ಅಮಲ್ ಮೊಹಮ್ಮದ್ ಅಲಿ ಎಂಬ ಅನಿವಾಸಿ 15.10 ಲಕ್ಷ ರೂ.ಗೆ ಹರಾಜಲ್ಲಿ ಖರೀದಿಸಲು ಮುಂದೆ ಬಂದಿದ್ದರು. ಸಾಕಷ್ಟು ಪ್ರಚಾರ ಹಾಗೂ ಸಮಯಾವಕಾಶ ನೀಡದೆ ತರಾತುರಿಯಲ್ಲಿ ಹರಾಜು ನಡೆಸಲಾಗಿದೆ ಎಂಬ ದೂರುಗಳು ಬಂದವು. ಈ ಕುರಿತು ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಮತ್ತೆ ಹರಾಜು ನಡೆಸಲು ದೇವಸ್ವಂ ಆಯುಕ್ತರು ನಿರ್ಧರಿಸಿದ್ದಾರೆ.
ಈ ಬಾರಿ ಹರಾಜಿಗೆ ಮುನ್ನವೇ ಹೆಚ್ಚಿನ ಪ್ರಚಾರ ನೀಡಲಾಗಿದೆ. ಹಾಗಾಗಿ ಹೆಚ್ಚು ಜನ ಬರುವ ನಿರೀಕ್ಷೆ ಇದೆ. ಬಿಡ್ ಮೊತ್ತವೂ ಬದಲಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಡಿಸೆಂಬರ್ 4 ರಂದು ಮಹೀಂದ್ರಾ ಗ್ರೂಪ್ ಗುರುವಾಯೂರ್ ದೇವಸ್ಥಾನಕ್ಕೆ ವಾಹನವನ್ನು ಕೊಡುಗೆಯಾಗಿ ನೀಡಿತ್ತು. ಗುರುವಾಯೂರಪ್ಪನವರಿಗೆ ನೀಡಲಾದ ಈ ವಾಹನವನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ.