ಕುಂಬಳೆ: ಪಕ್ಷವೊಂದು ಸುದೃಢವಾಗಿ ಬೆಳೆಯಬೇಕಾದರೆ ತಳಮಟ್ಟದ ಕಾರ್ಯಕರ್ತರ ಶ್ರಮವೇ ಪ್ರಧಾನ, ಅವರೇ ಪಕ್ಷದ ಬೆನ್ನೆಲುಬು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಮಾಜೀ ಸಂಸದ, ಅಖಿಲ ಭಾರತ ಹಜ್ ಸಮಿತಿ ಅಧ್ಯಕ್ಷ ಅಬ್ದುಲ್ಲ ಕುಟ್ಟಿ ತಿಳಿಸಿದರು.
ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದ ಎಂಟನೇ ವರ್ಷದ ವಿವಿಧ ಯೋಜನೆಗಳ ಕುರಿತು ಅವಲೋಕನ ನಡೆಸಲು ಕಾಸರಗೋಡಿಗೆ ಆಗಮಿಸಿದ್ದ ಅವರು, ಬಿಜೆಪಿ ಕುಂಬಳೆ ಕಚೇರಿಗೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮೊದಲ ಆದ್ಯತೆ ದೇಶಕ್ಕೆ, ಬಳಿಕ ಸಂಘಟನೆ ಹಾಗೂ ಕೊನೆಯಲ್ಲಿ ಮಾತ್ರ ವೈಯುಕ್ತಿಕ ಜೀವನಕ್ಕೆ ಎಂಬ ಪಂಡಿತ್ ದೀನದಯಾಳ್ ಉಪಾಧ್ಯಾಯರ ಮಾತನ್ನು ನೆನಪಲ್ಲಿಡಬೇಕು ಎಂದು ಅವರು ಕಿವಿಮಾತು ಹೇಳಿದರು. ಬಿಜೆಪಿ ಕುಂಬಳೆ ಸಮಿತಿ ಉತ್ತಮ ರೀತಿಯಲ್ಲಿ ಕಾರ್ಯವೆಸಗುತ್ತಿರುವ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಸಭಾ ನಡವಳಿಕೆಗಳ ದಾಖಲೆ ಪುಸ್ತಕದಲ್ಲಿ ಸಹಿ ಹಾಕಿದರು.
ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ನಾಯ್ಕಾಪು, ಮಂಡಲ ಕಾರ್ಯದರ್ಶಿ ಸುಧಾಕರ ಕಾಮತ್, ಒ.ಬಿ.ಸಿ.ಮೋರ್ಚಾ ಮಂಡಲ ಅಧ್ಯಕ್ಷ ಮಹೇಶ್ ಪುಣಿಯೂರು, ಮಂಡಲ ಕಚೇರಿ ಕಾರ್ಯದರ್ಶಿ ಶಶಿ ಕುಂಬಳೆ, ಹಿರಿಯರಾದ ಬಾಬು ಗಟ್ಟಿ ದೇವೀನಗರ ಉಪಸ್ಥಿತರಿದ್ದರು.
ಕುಂಬಳೆ ಮಂಡಲ ಸಮಿತಿ ಸದಸ್ಯ ಬಿ.ಸುಬ್ರಹ್ಮಣ್ಯ ನಾಯಕ್ ಸ್ವಾಗತಿಸಿ, ಕುಂಬಳೆ ಗ್ರಾ.ಪಂ.ಸದಸ್ಯ ಮೋಹನ ಕೆ. ವಂದಿಸಿದರು.