ಕಾಸರಗೋಡು: ಕಾಞಂಗಾಡು ನಗರಸಭಾ ಕುಟುಂಬಶ್ರೀ ಸಿಡಿಎಸ್ ವತಿಯಿಂದ ವಿವಿಧ ಹಲಸಿನ ಉತ್ಪನ್ನಗಳೊಂದಿಗೆ ಹಲಸು ಫೆಸ್ಟ್ ಆಯೋಜಿಸಲಾಯಿತು. ನಗರಸಭೆ ವತಿಯಿಂದ ಕಳೆದ ಒಂದು ತಿಂಗಳ ಕಾಲ ನಡೆದ ಮಾರಾಟ ಮೇಳದ ಸಮಾರೋಪದ ಅಂಗವಾಗಿ ಹಲಸಿನ ಹಬ್ಬ ಆಯೋಜಿಸಲಾಗಿತ್ತು.
ಕಾಞಂಗಾಡು ನಗರಸಭಾ ಕಛೇರಿ ಆವರಣದಲ್ಲಿ ನಡೆದ ಉತ್ಸವದಲ್ಲಿ ಕುಟುಂಬಶ್ರೀ ಸದಸ್ಯರು ಮನೆಗಳಲ್ಲಿ ತಯಾರಿಸಿ ತಂದ ಹಲಸಿನ ನಾನಾ ಬಗೆಯ ಖಾದ್ಯ ಪ್ರದರ್ಶಿಸಿದರು. ಹಲಸು ಫೆಸ್ಟ್‍ನಲ್ಲಿ ಹಲ್ವಾ, ಕೇಕ್, ಚಿಪ್ಸ್, ಹಲಸಿನ ರೊಟ್ಟಿ, ವಿವಿಧ ಸಾಸ್, ಹಲಸಿನ ಸಂಬಾರ್, ಕಟ್ಲೆಟ್, ಹಲಸಿನಬೀಜದ ಜ್ಯೂಸ್ ಸೇರಿದಂತೆ 100ಕ್ಕೂ ಹೆಚ್ಚು ಖಾದ್ಯಗಳನ್ನು ಎಡಿಎಸ್ ಕಾರ್ಯಕರ್ತರು ಸಿದ್ಧಪಡಿಸಿದ್ದರು. ಹಲಸಿನ ಖಾದ್ಯದ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಏರ್ಪಡಿಸಲಾಗಿದ್ದು, ಬಹುತೇಕ ಉತ್ಪನ್ನಗಳು ಕ್ಷಣಾರ್ಧದಲ್ಲಿ ಮಾರಾಟಗೊಳ್ಳುವ ಮೂಲಕ ಹಲಸಿನ ಹಬ್ಬ ಯಶಸ್ವಿಸಂಪನ್ನ ಕಂಡಿತು. ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಹಲಸಿನ ಉತ್ಸವ ಉದ್ಘಾಟಿಸಿದರು. ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಸ್. ಅಹ್ಮದಲಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಕೆ. ಅನೀಶ್, ಕೆ.ವಿ.ಮಾಯಾಕುಮಾರಿ, ಸಿಡಿಎಸ್ ಅಧ್ಯಕ್ಷರಾದ ಸೂರ್ಯ ಜಾನಕಿ, ಸುಜಿನಿ, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.