HEALTH TIPS

ಪ್ರವಾದಿ ಅವಹೇಳನ ವಿವಾದ: ಹಿಂಸಾಚಾರದ ವಿರುದ್ಧ ದೇಶವ್ಯಾಪಿ ಧರಣಿಗೆ ಬಜರಂಗದಳ ಕರೆ

 ನವದೆಹಲಿ: ಪ್ರವಾದಿ ಮಹಮ್ಮದರ ಅವಹೇಳನದ ವಿಚಾರವಾಗಿ ಇತ್ತೀಚಿಗೆ ದೇಶದ ಹಲವು ಭಾಗಗಳಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ಬಜರಂಗ ದಳವು ಗುರುವಾರ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು 'ವಿಶ್ವ ಹಿಂದೂ ಪರಿಷತ್‌' ಮಂಗಳವಾರ ಹೇಳಿದೆ.

'ಇಸ್ಲಾಮಿಕ್ ಜಿಹಾದಿ ಮೂಲಭೂತವಾದಿಗಳಿಂದ ಹೆಚ್ಚುತ್ತಿರುವ ತೀವ್ರವಾದಿ ಕೃತ್ಯಗಳ ವಿರುದ್ಧ ನಮ್ಮ ಯುವ ಘಟಕದ ಕಾರ್ಯಕರ್ತರು ಗುರುವಾರ ದೇಶದಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಲಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಜ್ಞಾಪಕ ಪತ್ರವನ್ನು ರವಾನಿಸಲಿದ್ದಾರೆ' ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ವಿಎಚ್‌ಪಿ ತಿಳಿಸಿದೆ.

ಪ್ರವಾದಿ ಮಹಮ್ಮದರ ವಿರುದ್ಧದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ವಿವಾದಾತ್ಮಕ ಹೇಳಿಕೆಗಳ ವಿರುದ್ಧ ಜೂನ್ 10 ರಂದು ದೆಹಲಿಯ ಜಾಮಾ ಮಸೀದಿಯ ಹೊರಗೆ ಮತ್ತು ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಪ್ರವಾದಿ ವಿರುದ್ಧದ ಹೇಳಿಕೆಯಿಂದಾಗಿ ನೂಪುರ್‌ ಶರ್ಮಾ ಬಿಜೆಪಿಯಿಂದ ಅಮಾನತಾಗಿದ್ದರೆ, ನವೀನ್‌ ಜಿಂದಾಲ್‌ ಉಚ್ಚಾಟನೆಯಾಗಿದ್ದಾರೆ.

ಜಾರ್ಖಂಡ್‌ನಲ್ಲಿ ಪ್ರತಿಭಟನಾಕಾರರನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದರು. ಜಮ್ಮುವಿನ ಕೆಲವು ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಿದ್ದಾರೆ. ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೀಗಾಗಿ ಅಲ್ಲಿ ಲಾಠಿ ಚಾರ್ಜ್ ಮಾಡಿ, ಅಶ್ರುವಾಯು ಸಿಡಿಸಲಾಗಿದೆ.

'ದೇಶದಲ್ಲಿ ಇಸ್ಲಾಮಿಕ್ ಜಿಹಾದಿ ಮೂಲಭೂತವಾದಿಗಳಿಂದ ಹೆಚ್ಚುತ್ತಿರುವ ತೀವ್ರವಾದಿ ಕೃತ್ಯಗಳ ವಿರುದ್ಧ, ವಿಎಚ್‌ಪಿಯ ಯುವ ಘಟಕ ಬಜರಂಗದಳ ಈಗ ಬೀದಿಗಿಳಿಯಲಿದೆ' ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಜಿಹಾದಿ ಮೂಲಭೂತವಾದಿಗಳಿಂದ ಹಿಂದೂಗಳ ಮೇಲಿನ ನಿರಂತರ ದಾಳಿಯ ವಿರುದ್ಧ ಬಜರಂಗದಳ ಕಾರ್ಯಕರ್ತರು ಗುರುವಾರ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಧರಣಿ ನಡೆಸಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಿದ್ದಾರೆ' ಎಂದು ಅವರು ಹೇಳಿದರು.

ಜೂನ್ 10ರ ಶುಕ್ರವಾರ ಪ್ರಾರ್ಥನೆಯ ನಂತರ ಮಸೀದಿಗಳಿಂದ ಹೊರ ಬಂದಿದ್ದ ಮುಸ್ಲಿಮ್‌ ಸಮುದಾಯದ ಗುಂಪುಗಳು ಏಕಾಏಕಿ ಪ್ರತಿಭಟನೆ ನಡೆಸಿದ್ದವು. ಅಂಥ ಮಸೀದಿಗಳ ಮೇಲೆ ನಿಗಾ ಇರಿಸಬೇಕು ಎಂದು ಪರಾಂಡೆ ಇದೇ ವೇಳೆ ಆಗ್ರಹಿಸಿದ್ದಾರೆ.

'ಜನಸಮೂಹಕ್ಕೆ ಪ್ರಚೋದನೆ ನೀಡಿದವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಬೆದರಿಕೆಗೆ ಒಳಗಾದವರಿಗೆ ಭದ್ರತೆ ಒದಗಿಸಬೇಕು. ಬೆದರಿಕೆ ಹಾಕುವವರನ್ನು ಬಂಧಿಸಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು' ಎಂದು ಅವರು ಒತ್ತಾಯಿಸಿದರು.

ಜಮೀಯತ್ ಉಲಮಾ-ಇ-ಹಿಂದ್, ಮಸೀದಿಗಳು ಮತ್ತು ಜಿಹಾದಿ ಮನಸ್ಥಿತಿಯ ವ್ಯಕ್ತಿಗಳು ಗಲಭೆಕೋರರಿಗೆ ಸಂಪನ್ಮೂಲ ಪೂರೈಸುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ಜೂನ್ 10 ರ ಹಿಂಸಾಚಾರದ ವಿರುದ್ಧ ಪ್ರತಿಭಟನೆಯನ್ನು ದಾಖಲಿಸಲು ಜನ ಮಂಗಳವಾರ ರಾತ್ರಿ 8 ಗಂಟೆಗೆ ದೇವಾಲಯಗಳಲ್ಲಿ ಜಮಾಯಿಸಬೇಕು. ಅಲ್ಲಿ ಸಾಮೂಹಿಕವಾಗಿ ಹನುಮಾನ್ ಚಾಲೀಸಾ ಪಠಿಸಬೇಕು ಎಂದು ವಿಎಚ್‌ಪಿಯ ದೆಹಲಿ ಘಟಕವು ನಾಗರಿಕರಿಗೆ ಕರೆ ನೀಡಿತ್ತು.

ಈ ಮಾಹಿತಿಯನ್ನು ಭಕ್ತರಿಗೆ ತಿಳಿಸುವ ಸೂಚನೆಗಳನ್ನು ದೇವಾಲಯಗಳ ವ್ಯವಸ್ಥಾಪಕರು ಮತ್ತು ಅರ್ಚಕರು ಪ್ರಕಟಿಸಬೇಕು ‌ಎಂದು ವಿಎಚ್‌ಪಿ ಮುಖ್ಯಸ್ಥ ಕಪಿಲ್ ಖನ್ನಾ ಹೇಳಿದ್ದಾರೆ.

ಇಂತಹ ಜಿಹಾದ್‌ನಿಂದ ಹೊರಬರಲು ವಾರಕ್ಕೊಮ್ಮೆಯಾದರೂ ಹಿಂದೂಗಳು ದೇವಸ್ಥಾನಗಳಲ್ಲಿ ಸೇರಬೇಕು ಎಂದು ಅವರು ಹೇಳಿದರು.

'ನೂಪುರ್ ಶರ್ಮಾ ಹತ್ಯೆಗೆ ಕಾನೂನುಬಾಹಿರ ಫತ್ವಾಗಳನ್ನು ಹೊರಡಿಸಲಾಗಿದೆ. ಈ ಮೂಲಕ ಹಿಂದೂ ಸಮಾಜದ ಮೇಲೆ ಹಾಕಲಾದ ಒತ್ತಡವನ್ನು ನಾವು ಬಲವಾಗಿ ಖಂಡಿಸುತ್ತೇವೆ' ಎಂದು ದೆಹಲಿ ವಿಎಚ್‌ಪಿ ಮುಖ್ಯಸ್ಥ ಕಪಿಲ್ ಖನ್ನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಸಮಾಜದ ಮೇಲೆ ನಿರ್ಮಾಣವಾಗುತ್ತಿರುವ ಒತ್ತಡಕ್ಕೆ ಸಾಂವಿಧಾನಿಕವಾಗಿ ಸ್ಪಂದಿಸುವುದು ಮತ್ತು ನಮ್ಮ ಶಕ್ತಿ ಪ್ರದರ್ಶಿಸುವುದು ತೀರಾ ಅಗತ್ಯವಾಗಿದೆ ಎಂದು ಅವರು ಹೇಳಿದರು.

'ಜಾಗತಿಕವಾಗಿ ಭಾರತವನ್ನು ದೂಷಿಸುವ ಯೋಜಿತ ಪಿತೂರಿಯ ಭಾಗವಾಗಿ ಜೂನ್ 10 ರಂದು ಮಸೀದಿಗಳಲ್ಲಿ ಪ್ರಾರ್ಥನೆಯ ನಂತರ ಹಿಂಸಾತ್ಮಕ ಪ್ರದರ್ಶನಗಳನ್ನು ನಡೆಸಲಾಯಿತು. ದೇವಾಲಯಗಳು ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಯಿತು' ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆ ಹೇಳಿಕೆಯಲ್ಲಿ ಆರೋಪಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries