ಬೆಂಗಳೂರು : ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕರು ಕೋವಿಡ್ 19ನಂತಹ ವೈರಸ್‌ಗಳನ್ನು ನಿಷ್ಕ್ರಿಯಗೊಳಿಸಲು ಹೊಸ ಕಾರ್ಯವಿಧಾನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
'ನೇಚರ್ ಕೆಮಿಕಲ್ ಬಯಾಲಜಿ' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ, ಸಂಶೋಧಕರು ಕೃತಕ ಪೆಪ್ಟೈಡ್‌ಗಳು ಅಥವಾ ಮಿನಿಪ್ರೋಟೀನ್‌ಗಳ (ಅಮೈನೋ ಆಮ್ಲಗಳನ್ನು ಒಳಗೊಂಡಿರುವ ಒಂದು ಸಂಯುಕ್ತ) ಹೊಸ ವರ್ಗವನ್ನು ವಿನ್ಯಾಸಗೊಳಿಸಿದ್ದಾರೆ.
ಐಐಎಸ್‌ಸಿಯ ಮಾಲಿಕ್ಯುಲರ್ ಬಯೋಫಿಸಿಕ್ಸ್ ಯುನಿಟ್ (ಎಂಬಿಯು) ಮತ್ತು ಅಧ್ಯಯನದ ಪ್ರಮುಖ ಲೇಖಕರಾದ ಜಯಂತ ಚಟರ್ಜಿ, ಸಹಾಯಕ ಪ್ರಾಧ್ಯಾಪಕ ಸೋಮನಾಥ್ ದತ್ತಾ, ಪ್ರಾಧ್ಯಾಪಕರಾದ ರಾಘವನ್ ವರದರಾಜನ್ ಅವರನ್ನು ಒಳಗೊಂಡ ತಂಡವು ಈ ಅಧ್ಯಯನ ನಡೆಸಿದೆ.
ಈ ಹೊಸ ವಿಧಾನದ ಫಲಿತಾಂಶ ಕಂಡುಕೊಳ್ಳಲು ರಾಘವನ್ ಅವರ ಪ್ರಯೋಗಾಲಯದಲ್ಲಿ ಸಸ್ತನಿಯ ವಿಷಕಾರಿ ಗುಣದ ಕೋಶಗಳ ಮೇಲೆ ಪರೀಕ್ಷೆ ನಡೆಸಲಾಗಿದೆ. ಪ್ರಯೋಗಕ್ಕೆ ಒಳಪಟ್ಟ ಸಸ್ತನಿಯಲ್ಲಿ (ಇಲಿ) ಯಾವುದೇ ತೂಕ ನಷ್ಟ ಆಗಲಿಲ್ಲ. ವೈರಸ್‌ಗೆ ಮಾತ್ರ ಒಡ್ಡಿಕೊಂಡ ಇಲಿಗಳನ್ನು ಹೋಲಿಸಿ ನೋಡಿದಾಗ, ವೈರಲ್ ಲೋಡ್ ಕೂಡ ಕಡಿಮೆ ಇತ್ತು. ಶ್ವಾಸಕೋಶದಲ್ಲಿಯೂ ಜೀವಕೋಶದ ಹಾನಿ ತುಂಬಾ ಕಡಿಮೆ ಪ್ರಮಾಣದಲ್ಲಿತ್ತು ಎಂದು ಐಐಎಸ್‌ಸಿ ಸಂಶೋಧಕರು ಹೇಳಿದ್ದಾರೆ.
ಕೋವಿಡ್-19: ಠಾಣೆಯಲ್ಲಿ 273 ಹೊಸ ಪ್ರಕರಣ
ಠಾಣೆ (ಪಿಟಿಐ): ಇಲ್ಲಿ ಕೋವಿಡ್-19 ಸೋಂಕಿನ 273 ಹೊಸ ಪ್ರಕರಣಗಳು ಭಾನುವಾರ ಪತ್ತೆಯಾಗಿದ್ದು, ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ 7,11,115ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
ಠಾಣೆಯಲ್ಲಿ ಭಾನುವಾರ ಕೋವಿಡ್‌ನಿಂದ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಸಾವಿನ ಸಂಖ್ಯೆ 11,895. ಠಾಣೆಯಲ್ಲಿ ಮರಣ ಪ್ರಮಾಣವು ಶೇ 1.67ರಷ್ಟಿದೆ ಎಂದು ಅವರು ತಿಳಿಸಿದರು.