ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ವಿಶ್ವದ ರಾಯಭಾರಿಯಾಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲಕುಟ್ಟಿ ತಿಳಿಸಿದ್ದಾರೆ. ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕೂಡ್ಲು ಗೋಪಾಲಕೃಷ್ಣ ವಿದ್ಯಾಲಯ ಮೈದಾನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಗದ ಮಹತ್ವವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವುದರ ಜತೆಗೆ ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡಿದ್ದಾರೆ. ಯೋಗವನ್ನು ಕೇವಲ ದೈಹಿಕ ವ್ಯಾಯಾಮ ಎಂದು ಪರಿಗಣಿಸದೆ, ದಿನನಿತ್ಯದ ಅಭ್ಯಾಸದಿಂದ ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಕಾಪಾಡುವಲ್ಲಿ ಇದು ಸಹಕಾರಿ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ಮನುಲಾಲ್, ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ರಾಜ್ಯ ಸಮಿತಿ ಸದಸ್ಯ ಎನ್.ಎಸ್. ಸತೀಶನ್, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು ಉಪಸ್ಥಿತರಿದ್ದರು. ಶ್ರೀಲಕ್ಷ್ಮೀ ವೆಂಕಟೇಶ ವಿದ್ಯಾಲಯದ ಶಿಕ್ಷಕಿ ಮಮತಾ ಯೋಗ ತರಬೇತಿ ನಡೆಸಿಕೊಟ್ಟರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ರೈ ಸ್ವಾಗತಿಸಿದರು. ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು ವಂದಿಸಿದರು. ಬಿಜೆಪಿ ವತಿಯಿಂದ ಜಿಲ್ಲೆಯ 48 ಕೇಂದ್ರಗಳಲ್ಲಿ ಯೋಗ ದಿನವನ್ನು ಆಚರಿಸಲಾಯಿತು.