ಕಾಸರಗೋಡು: ಅನಧಿಕೃತವಾಗಿ ನಡೆಯುತ್ತಿರುವ ಹೊಟೇಲ್‍ಗಳನ್ನು ನಿಯಂತ್ರಿಸಿ ಕಾನೂನು ಬದ್ಧವಾಗಿ ಕಾರ್ಯನಿರ್ವಹಿಸುವವರಿಗೆ ರಕ್ಷಣೆ ನೀಡಿದರೆ ಮಾತ್ರ ಹೊಟೇಲ್ ಉದ್ಯಮ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕೇರಳ ಹೊಟೇಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್(ಕೆಎಚ್ ಆರ್ ಎ)ರಾಜ್ಯಾಧ್ಯಕ್ಷ ಜಿ.ಜಯಪಾಲ್ ತಿಳಿಸಿದ್ದಾರೆ.
ಅವರು ಸಂಘಟನೆ ಕಾಸರಗೋಡು ಜಿಲ್ಲಾ ಸಮಾವೇಶ ಹಾಗೂ ರಾಜ್ಯ ನಾಯಕರಿಗೆ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅನಧಿಕೃತವಾಗಿ ಆಹಾರ ಪೂರೈಸುವ ಕೇಂದ್ರಗಳಿಂದ ಅನೇಕ ಸಮಸ್ಯೆಗಳು ತಲೆದೋರುತ್ತಿದ್ದರೂ, ಸರ್ಕಾರ ಇವರ ಬಗ್ಗೆ ಮೃದು ಧೋರಣೆ ತಳೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲೂ ಹಿಂದೇಟು ಹಾಕುತ್ತಿದೆ. ಅಧಿಕೃತವಾಗಿ ನಡೆಯುತ್ತಿರುವ ಹೋಟೆಲ್ ಉದ್ದಿಮೆಯನ್ನು ನಾಶ ಮಾಡುವ ಇಂತಹ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಅಬ್ದುಲ್ಲ ತಾಜ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯಾಧ್ಯಕ್ಷ ಸಿ.ಬಿಜುಲಾಲ್ ಹಾಗೂ ರಾಜ್ಯ ಸಮಿತಿ ಕೋಶಾಧಿಕಾರಿ ಎನ್.ಎಂ.ಆರ್. ರಜಾಕ್, ರಾಜ್ಯ ಉಪಾಧ್ಯಕ್ಷ ಪಿ.ಪಿ.ಅಬ್ದುಲ್ ರಹಮಾನ್, ರಾಜ್ಯ ಕಾರ್ಯದರ್ಶಿ ಮಹಮ್ಮದ್ ಗಜಾಲಿ, ರಾಜ್ಯ ಸಲಹಾ ಮಂಡಳಿ ಸದಸ್ಯ ಪಿ.ಸಿ.ಬಾವಾ, ರಾಜ್ಯ ಸಮಿತಿ ಸದಸ್ಯರಾದ ಅಜೇಶ್ ನುಳ್ಳಿಪಾಡಿ, ಸತ್ಯನಾಥನ್ ಬೋವಿಕಾನಂ, ವಸಂತಕುಮಾರ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ನಾರಾಯಣ ಪೂಜಾರಿ ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ರಾಜನ್ ಕಲಕ್ಕರ ವಂದಿಸಿದರು.