ನವದೆಹಲಿ: ಎಷ್ಟು ಸಮಯ ದೇಶದ ದ್ರೋಹಿಗಳನ್ನು ರಕ್ಷಿಸುತ್ತೀರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಬಂಧನಕ್ಕೊಳಗಾಗಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದಕ್ಕಾಗಿ ಕೇಜ್ರಿವಾಲ್ ವಿರುದ್ಧ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಜ್ರಿವಾಲ್‌ಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಜೈನ್ ವಿರುದ್ಧದ ಆರೋಪಗಳನ್ನು ಪಟ್ಟಿ ಮಾಡಿದ ಅವರು, ಇದು ನಿಜವೇ ಅಥವಾ ಸುಳ್ಳೇ ಎಂದು ಮುಖ್ಯಮಂತ್ರಿಗಳನ್ನು ಉದ್ದೇಶಿಸಿ ಪ್ರಶ್ನಿಸಿದ್ದಾರೆ.
ಜೈನ್ ಮತ್ತು ಅವರ ಕುಟುಂಬದ ಸದಸ್ಯರ ಒಡೆತನದಲ್ಲಿದೆ ಎನ್ನಲಾದ ಶೆಲ್ ಕಂಪನಿಯನ್ನು ಹೆಸರಿಸಿದ ಅವರು, ಜೈನ್ ಅವರು ಈ ಕಂಪನಿಯ ಒಡೆಯ ಹೌದೇ, ಅಲ್ಲವೇ ಎಂದು ಕೇಜ್ರಿವಾಲ್ ಅವರನ್ನು ಕೇಳಿದ್ದಾರೆ.
ಜೈನ್ ಅವರನ್ನು ಜೂನ್ 9ರವರೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ದೆಹಲಿ ನ್ಯಾಯಾಲಯ ಮಂಗಳವಾರ ಆದೇಶಿಸಿತ್ತು. ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸೋಮವಾರ ಬಂಧಿಸಿದ್ದರು.
'ಎಂಟು ವರ್ಷ ಹಳೆಯ 'ಹುಸಿ' ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ. ಸತ್ಯೇಂದ್ರ ಅವರು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಎಎಪಿ ಉಸ್ತುವಾರಿಯಾಗಿದ್ದಾರೆ. ಅಲ್ಲಿ ಚುನಾವಣೆ ಸೋಲುವ ಭೀತಿಯಲ್ಲಿರುವ ಬಿಜೆಪಿ, ಹೀಗೆ ಮಾಡಿದೆ' ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟೀಕಿಸಿದ್ದರು. ಕೇಜ್ರಿವಾಲ್ ಸಹ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಜೈನ್ ಅವರನ್ನು ಸಮರ್ಥಿಸಿಕೊಂಡಿದ್ದರು.