ಪಣಜಿ: ಗೋವಾದ ಸಮುದ್ರ ತಟದಲ್ಲಿ ಸೋಮರ್ ಸಾಲ್ಟ್ ಹೊಡೆಯುವ ವೇಳೆ ನಟ ದಿಗಂತ್ ಬೆನ್ನು ಮೂಳೆಗೆ, ಕುತ್ತಿಗೆಗೆ ತೀವ್ರ ಪೆಟ್ಟು ಬಿದ್ದಿದ್ದು ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ.
ಆಸ್ಪತ್ರೆಯ ಮೂಲಗಳ ಪ್ರಕಾರ, ಅವರು ತಮ್ಮ ಪತ್ನಿ ಐಂದ್ರಿತಾ ರೈ ಅವರೊಂದಿಗೆ ರಜೆಗಾಗಿ ಗೋವಾಕ್ಕೆ ಬಂದಿದ್ದರು. ಫಿಟ್‌ನೆಸ್ ಫ್ರೀಕ್ ಆಗಿರುವ ಮತ್ತು ಸಾಹಸ ಕ್ರೀಡೆಗಳನ್ನು ಇಷ್ಟಪಡುವ ದಿಗಂತ್ ಸಮ್ಮರ್‌ಸಾಲ್ಟ್ ಮಾಡುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ.
ಆರಂಭದಲ್ಲಿ ದಿಗಂತ್ ಅವರನ್ನು ಗೋವಾದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಅವರನ್ನು ವಿಮಾನದ ಮೂಲಕ ಬೆಂಗಳೂರಿನ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಯಿತು.
ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಆಸ್ಪತ್ರೆಯ ವೈದ್ಯರು ದಿನ ಕಳೆದಂತೆ ಅವರ ಆರೋಗ್ಯ ಸ್ಥಿತಿಯನ್ನು ತಿಳಿಸುವುದಾಗಿ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಚಿತ್ರವೊಂದರ ಚಿತ್ರೀಕರಣದ ವೇಳೆ ದುರ್ಘಟನೆಯೊಂದು ನಡೆದಿತ್ತು. ಈ ಚಿತ್ರೀಕರಣದ ವೇಳೆ ದಿಗಂತ್ ಕಣ್ಣೊಂದಕ್ಕೆ ಹಾನಿಯಾಗಿತ್ತು..