ನವದೆಹಲಿ :ನಗರ ಪ್ರದೇಶಗಳಲ್ಲಿ ಮತದಾರರು ಮತದಾನದಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂಬುದನ್ನು ಮನಗಂಡ ಚುನಾವಣಾ ಆಯೋಗ(Election Commission)ವು ಕೇಂದ್ರ ಮತ್ತು ರಾಜ್ಯ ಸರಕಾರಗಳ ಎಲ್ಲಾ ಇಲಾಖೆಗಳಿಗೆ ಹಾಗೂ 500ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಾರ್ವಜನಿಕ ರಂಗದ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಪತ್ರ ಬರೆದು ಮತದಾನದ ದಿನದಂದು ವಿಶೇಷ ಕ್ಯಾಶುವಲ್ ಲೀವ್ ಪಡೆದರೂ ಮತದಾನ ಮಾಡದ ಉದ್ಯೋಗಿಗಳ ಮೇಲೆ ನಿಗಾ ಇಡುವಂತೆ ಸೂಚಿಸಲಿದೆ ಎಂದು indianexpress.com ವರದಿ ಮಾಡಿದೆ.
ತನ್ನ ಸ್ಥಳೀಯ ಜಿಲ್ಲಾ ಚುನಾವಣಾಧಿಕಾರಿಗಳ ಮೂಲಕ ವಿವಿಧ ಇಲಾಖೆಗಳು ಹಾಗೂ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಚುನಾವಣಾ ಆಯೋಗ ಸೂಚನೆ ನೀಡಲಿದ್ದು ಮತದಾನಕ್ಕೆ ಗೈರಾದವರನ್ನು ಗುರುತಿಸಿ ಆಯೋಗ ನಡೆಸುವ ವಿಶೇಷ ಮತದಾರರ ಜಾಗೃತಿ ಕಾರ್ಯಾಗಾರಗಳಿಗೆ ಅವರನ್ನು ಕಳುಹಿಸುವಂತೆ ಮಾಡಲಾಗುವುದು ಎಂದು ಆಯೋಗದ ಮೂಲಗಳು ತಿಳಿಸಿವೆ.
ಮತದಾನಗೈಯ್ಯಲು ಅವಕಾಶ ಕಲ್ಪಿಸಲು ಉದ್ಯೋಗಿಗಳಿಗೆ ನಿಯಮಾನುಸಾರ ವೇತನ ಸಹಿತ ರಜೆ ನೀಡಿದರೂ ಅವರು ಮತದಾನ ನಡೆಸುತ್ತಿಲ್ಲ ಎಂಬುದು ದುರಾದೃಷ್ಟಕರ, ಆಯೋಗ ನಡೆಸುವ ಜಾಗೃತಿ ಕಾರ್ಯಕ್ರಮಗಳು ಮತದಾನದ ಬಗ್ಗೆ ಹಲವರು ತೋರುವ ಅನಾಸ್ಥೆಯನ್ನು ಕಡಿಮೆಗೊಳಿಸಬಹುದೆಂಬ ಆಶಾವಾದ ಆಯೋಗಕ್ಕಿದೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಗ್ರಾಮೀಣ ಭಾಗಗಳಿಗಿಂತ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಮತದಾನದಲ್ಲಿ ನಿರಾಸಕ್ತಿ ಹೆಚ್ಚಾಗಿದೆ ಎಂದು ವರದಿಯಾಗಿದೆ.