ಬೆಂಗಳೂರು: ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಅವರ ಬಯೋಪಿಕ್ ಮಾಡಲು ಚಿಂತನೆ ನಡೆದಿದೆ.
ನಿರ್ಮಾಣ ಸಂಸ್ಥೆಗಳಾದ ಟೀ ಸಿರೀಸ್ ಫಿಲ್ಮ್ಸ್, ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಹಾಗು ಕರ್ಮ ಮೀಡಿಯಾ ಎಂಟರ್ಟೈನ್ಮೆಂಟ್ ಸಿಸಿಡಿ ಸಂಸ್ಥಾಪಕ ಸಿದ್ದಾರ್ಥ ಅವರ ಬಯೋಪಿಕ್ ರಚಿಸಲು ಸಜ್ಜಾಗಿವೆ.
ಉದ್ಯಮ ಲೋಕದಲ್ಲಿ ಸಾಧನೆ ಮಾಡಿದ ಸಿದ್ದಾರ್ಥ ಅವರ ಜೀವನ ದುರಂತ ಅಂತ್ಯ ಕಂಡಿದ್ದು ಮಾತ್ರ ನೋವಿನ ಸಂಗತಿ. ಆದರೆ ಅವರು ಸಾಗಿ ಬಂದ ಹಾದಿ ನಿಜಕ್ಕೂ ಕೋಟ್ಯಂತರ ಜನರಿಗೆ ಮಾದರಿ ಆಗುವಂಥದ್ದು. ಹಾಗಾಗಿ ಅವರ ಬಯೋಪಿಕ್ ಮಾಡಲು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ.
ವಿ.ಜಿ. ಸಿದ್ದಾರ್ಥ ಅವರ ಜೀವನದ ಕುರಿತು ‘ಕಾಫಿ ಕಿಂಗ್’ ಪುಸ್ತಕ ಸಿದ್ಧವಾಗುತ್ತಿದೆ. ಈ ಪುಸ್ತಕದಲ್ಲಿನ ವಿವರಗಳನ್ನು ಆಧಾರವಾಗಿ ಇಟ್ಟುಕೊಂಡು ಸಿನಿಮಾ ಮಾಡಲು ಪ್ಲ್ಯಾನ್ ರೆಡಿಯಾಗಿದೆ. ‘ಟಿ-ಸಿರೀಸ್’ ಮತ್ತು ‘ಆಲ್ಮೈಟಿ ಮೋಷನ್ ಪಿಕ್ಚರ್’ ಸಂಸ್ಥೆಗಳು ಈ ಸಿನಿಮಾಗೆ ಬಂಡವಾಳ ಹೂಡಲಿವೆ. ಅದರ ಜೊತೆಗೆ ‘ಕರ್ಮ ಮೀಡಿಯಾ ಎಂಟರ್ಟೇನ್ಮೆಂಟ್’ ಕೂಡ ಕೈ ಜೋಡಿಸುತ್ತಿದೆ. ಈ ಕುರಿತು ಟಿ-ಸಿರೀಸ್ ಸಂಸ್ಥೆಯ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಸಾಕಷ್ಟು ಅಧ್ಯಯನ ನಡೆಸಿ ‘ಕಾಫಿ ಕಿಂಗ್’ ಪುಸ್ತಕವನ್ನು ಬರೆಯಲಾಗಿದೆ. ಮಹಾನ್ ಉದ್ಯಮಿ ಸಿದ್ದಾರ್ಥ ಬದುಕಿನ ಬಗ್ಗೆ ಗೊತ್ತಿರದ ಅನೇಕ ವಿಚಾರಗಳನ್ನು ಇದು ಒಳಗೊಂಡಿದೆ’ ಎಂದು ನಿರ್ಮಾಪಕ ಪ್ರಭಲೀನ್ ಕೌರ್ ಸಂಧು ಹೇಳಿದ್ದಾರೆ. ಈ ಸಿನಿಮಾದಲ್ಲಿ ವಿ.ಜಿ. ಸಿದ್ದಾರ್ಥ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಕೆಫೆ ಕಾಫಿ ಡೇ’ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ಸಿದ್ದಾರ್ಥ ಅವರು ಸಾಲದ ಸುಳಿಗೆ ಸಿಲುಕಿದ್ದರು. ಬಿಸ್ನೆಸ್ನಲ್ಲಿ ನಷ್ಟ ಆಗಿದ್ದರಿಂದ ಅವರು ಆತ್ಯಹತ್ಯೆ ಮಾಡಿಕೊಂಡರು. 2019ರ ಜುಲೈ 31ರಂದು ತಮ್ಮ 59ನೇ ವಯಸ್ಸಿನಲ್ಲಿ ಅವರು ನಿಧನರಾದರು. ಅವರ ಜೀವನದ ಏಳು-ಬೀಳಿನ ವಿವರಗಳಿಗೆ ಸಿನಿಮಾ ರೂಪ ಸಿಗುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆಗಳು ಇದಕ್ಕಾಗಿ ಕೈ ಜೋಡಿಸಿರುವುದರಿಂದ ನಿರೀಕ್ಷೆ ಹೆಚ್ಚಿದೆ.