ನವದೆಹಲಿ: ರಾಷ್ಟ್ರೀಯ ಭದ್ರತೆಯ ಮೇಲೆ ಊಹಿಸಲಾಗದ ಮತ್ತು ದೂರಗಾಮಿ ಪರಿಣಾಮಗಳನ್ನು ಉಂಟು ಮಾಡಬಹುದಾದ್ದರಿಂದ ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಟಿವಿ ಮೇಲಿನ ನಿಷೇಧದ ಹಿಂದಿನ ಕಾರಣಗಳನ್ನು ತಾನು ಬಹಿರಂಗಗೊಳಿಸುವಂತಿಲ್ಲ ಎಂದು ಕೇಂದ್ರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಕೇಂದ್ರವು 'ಭದ್ರತಾ ಕಾರಣಗಳನ್ನು 'ಉಲ್ಲೇಖಿಸಿ ನಿಷೇಧವನ್ನು ಹೇರಿದ ಬಳಿಕ ಮೀಡಿಯಾ ಒನ್ ಟಿವಿ ಜ.31ರಿಂದ ಪ್ರಸಾರವನ್ನು ಸ್ಥಗಿತಗೊಳಿಸಿದೆ. ವಾಹಿನಿಯು 2019ರಲ್ಲಿ ಐದು ವರ್ಷಗಳ ಅವಧಿಗೆ ಕೇಂದ್ರದಿಂದ 'ಕಾನೂನುಬಾಹಿರ 'ಎಂದು ಘೋಷಿಸಲ್ಪಟ್ಟಿರುವ ಸಾಮಾಜಿಕ-ರಾಜಕೀಯ ಸಂಘಟನೆ ಜಮಾತೆ ಇಸ್ಲಾಮಿಯ ಕೇರಳ ಘಟಕದ ಬೆಂಬಲವನ್ನು ಹೊಂದಿದೆ ಎನ್ನಲಾಗಿದೆ.
ರಾಷ್ಟ್ರೀಯ ಭದ್ರತೆಯನ್ನು ಉಲ್ಲೇಖಿಸಿ ಮಿಡಿಯಾ ಒನ್ ಟಿವಿ ಮೇಲಿನ ಕೇಂದ್ರದ ನಿಷೇಧವನ್ನು ಕೇರಳ ಉಚ್ಚ ನ್ಯಾಯಾಲಯವು ಮಾ.2ರಂದು ಎತ್ತಿಹಿಡಿದಿತ್ತು. ವಾಹಿನಿಯು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನೊಡ್ಡಿದೆ ಎನ್ನುವುದನ್ನು ಕೇಂದ್ರವು ಒದಗಿಸಿದ್ದ ಕೆಲವು ರಹಸ್ಯ ಕಡತಗಳು ತಮಗೆ ಮನವರಿಕೆ ಮಾಡಿವೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದರು.
ಇದನ್ನು ಪ್ರಶ್ನಿಸಿ ವಾಹಿನಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು. ಸುದ್ದಿವಾಹಿನಿಯ ಪರವಾನಿಗೆ ನವೀಕರಣವನ್ನು ನಿರಾಕರಿಸಲು ಆಧಾರವಾಗಿದ್ದ ಕಡತಗಳನ್ನು ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶ ನೀಡಿತ್ತು. ಬಂದ್ ಲಕೋಟೆಯಲ್ಲಿ ಸಲ್ಲಿಸಲಾಗಿದ್ದ ಕಡತಗಳನ್ನು ಪರಿಶೀಲಿಸಿದ ಬಳಿಕ ನ್ಯಾಯಾಲಯವು ನಿಷೇಧದ ಮೇಲೆ ತಡೆಯಾಜ್ಞೆಯನ್ನು ವಿಧಿಸಿತ್ತು.
ವಾಹಿನಿಯು ತನ್ನನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುವಂತೆ ನಿಷೇಧದ ಹಿಂದಿನ ಕಾರಣಗಳನ್ನು ಅದಕ್ಕೆ ತಿಳಿಸಬೇಕು ಎಂದೂ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ಸೂಚಿಸಿತ್ತು.
ಆದಾಗ್ಯೂ ಬುಧವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅಫಿಡವಿಟ್ನಲ್ಲಿ ಕಾರಣಗಳನ್ನು ಬಹಿರಂಗಗೊಳಿಸಲು ನಿರಾಕರಿಸಿರುವ ಕೇಂದ್ರವು,ಭದ್ರತಾ ಅನುಮತಿಗೆ ನಿರಾಕರಣೆಯು ಸೂಕ್ಷ್ಮ ಮತ್ತು ರಹಸ್ಯ ಗುಪ್ತಚರ ಮಾಹಿತಿಗಳನ್ನು ಆಧರಿಸಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯವು ತಿಳಿಸಿದೆ. ಆದ್ದರಿಂದ ನೀತಿ ವಿಷಯವಾಗಿ ಮತ್ತು ದೇಶ ಹಾಗೂ ಅದರ ಸಂಸ್ಥೆಗಳ ಸುರಕ್ಷತೆಯ ಹಿತಾಸಕ್ತಿಯ ದೃಷ್ಟಿಯಿಂದ ಸಚಿವಾಲಯವು ನಿರಾಕರಣೆಗೆ ಕಾರಣಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಹೇಳಿದೆ. ಅಗತ್ಯವಾದರೆ ಕಡತಗಳನ್ನು ಮತ್ತೊಮ್ಮೆ ಬಂದ್ ಲಕೋಟೆಯಲ್ಲಿ ಸಲ್ಲಿಸುವುದಾಗಿ ಕೇಂದ್ರವು ನ್ಯಾಯಾಲಯಕ್ಕೆ ತಿಳಿಸಿತು.
ಸಾಮಾನ್ಯ ಪದ್ಧತಿಯಂತೆ ಸರಕಾರ ಮತ್ತು ಅದರ ಸಂಸ್ಥೆಗಳು ದಾಖಲೆಗಳನ್ನು ಬಂದ್ ಲಕೋಟೆಗಳಲ್ಲಿ ನ್ಯಾಯಾಧೀಶರಿಗೆ ಸಲ್ಲಿಸುತ್ತವೆ. ಬಂದ್ ಲಕೋಟೆಯಲ್ಲಿನ ದಾಖಲೆಗಳ ವಿಷಯಗಳನ್ನು ಎದುರು ಪಕ್ಷದೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ. ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾ.ಡಿ.ವೈ.ಚಂದ್ರಚೂಡ ನೇತೃತ್ವದ ಪೀಠವು ಬಂದ್ ಲಕೋಟೆಗಳ ಪದ್ಧತಿಯನ್ನು ಟೀಕಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.
ಪರವಾನಿಗೆಗಳ ನವೀಕರಣಕ್ಕೆ ಭದ್ರತಾ ಅನುಮತಿಯ ಅಗತ್ಯವಿಲ್ಲ ಎಂಬ ವಾಹಿನಿಯ ಪ್ರತಿಪಾದನೆಯನ್ನೂ ಕೇಂದ್ರವು ಬುಧವಾರ ತಿರಸ್ಕರಿಸಿತು.