ನವದೆಹಲಿ: ದೇಶದಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಳ ಆಗುತ್ತಿರುವ ಹಿನ್ನಲೆಯಲ್ಲಿ ಮಾಸ್ಕ್ ಧಾರಣೆಗೆ ಕೇಂದ್ರ ಸರ್ಕಾರ ಒತ್ತು ನೀಡಿದ್ದು, ಮಾಸ್ಕ್ ಧರಿಸದ ಪ್ರಯಾಣಿಕನನ್ನು ಮುಲಾಜಿಲ್ಲದೇ ಕೆಳಿಗಿಳಿಸಿ ಎಂದು ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಖಡಕ್ ಎಚ್ಚರಿಕೆ ನೀಡಿದೆ.
ದೇಶದಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿದ್ದು, ಆಡಳಿತಗಳು ಕೋವಿಡ್ ನಿಯಮಗಳನ್ನು ಮತ್ತೆ ಕಡ್ಡಾಯಗೊಳಿಸುತ್ತಿವೆ. ಆದಾಗ್ಯೂ ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಮಾನಗಳಲ್ಲಿ ಕೆಲವು ಬೇಜವಾಬ್ದಾರಿ ಪ್ರಯಾಣಿಕರು ಮಾಸ್ಕ್ ಧರಿಸಲು ನಿರಾಕರಿಸುತ್ತಿದ್ದಾರೆ. ಹೀಗಾಗಿ, ಮಾಸ್ಕ್ ಧರಿಸದ ಪ್ರಯಾಣಿಕರನ್ನು ವಿಮಾನ ಟೇಕ್ ಆಫ್ ಆಗುವ ಮುನ್ನ ಕೆಳಗಿಳಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ಸೂಚನೆ ನೀಡಿದ್ದು, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕಣ್ಣಿಡಿ ಎಂದು ಸಿಐಎಸ್‌ಎಫ್ ಪಡೆಗೂ ಡಿಜಿಸಿಎ ತಾಕೀತು ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ದೆಹಲಿ ಹೈಕೋರ್ಟ್ ಕೂಡಾ ವಿಮಾನ ನಿಲ್ದಾಣಗಳಲ್ಲಿ ಹಾಗೂ ವಿಮಾನಗಳಲ್ಲಿ ಮಾಸ್ಕ್ ಧರಿಸದ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮಾನಯಾನ ನಿರ್ದೇಶನಾಲಯಕ್ಕೆ ಛಾಟಿ ಬೀಸಿತ್ತು. ಈ ಹಿನ್ನೆಲೆಯಲ್ಲಿ ಡಿಜಿಸಿಎ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಮಹಾ ನಿರ್ದೇಶಕರು ಈ ಸಂಬಂಧ ಆದೇಶ ಹೊರಡಿಸಿದ್ದು, ವಿಮಾನ ಟೇಕ್ ಆಫ್ ಮುನ್ನ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರುವುದನ್ನು ಖಚಿತಪಡಿಸಿಕೊಳ್ಳಿ ಎಂದು ವಿಮಾನಯಾನ ಸಂಸ್ಥೆಗಳಿಗೆ ತಾಕೀತು ಮಾಡಿದ್ದಾರೆ.
ಒಂದು ವೇಳೆ ಯಾರಾದರೂ ಕೋವಿಡ್ ನಿಯಮಾವಳಿ ಉಲ್ಲಂಘಿಸಿದರೆ, ಅವರಿಗೆ ಎಚ್ಚರಿಕೆ ನೀಡಿ. ಒಂದು ವೇಳೆ ಅವರು ನಿಯಮ ಪಾಲಿಸದಿದ್ದರೆ ಬೇಜವಾಬ್ದಾರಿ ಪ್ರಯಾಣಿಕರು ಎಂದು ಪರಿಗಣಿಸಿ ಅವರನ್ನು ವಿಮಾನದಿಂದ ಕೆಳಗಿಳಿಸಿ ಎಂದು ಸೂಚನೆ ನೀಡಿದೆ. ಏರ್‌ಪೋರ್ಟ್ ಸಿಬ್ಬಂದಿ ಕೂಡಾ ವಿಮಾನ ನಿಲ್ದಾಣಗಳಲ್ಲಿ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಿ ಪ್ರಯಾಣಿಕರ ಮೇಲೆ ಕಣ್ಣಿಡಬೇಕೆಂದು ಸೂಚನೆ ನೀಡಿದೆ. ಒಂದು ವೇಳೆ ಮಾಸ್ಕ್ ಧರಿಸದೆ ಇದ್ದರೆ ಅವರಿಗೆ ದಂಡ ವಿಧಿಸಿ ಎಂದು ಭದ್ರತಾ ಏಜೆನ್ಸಿಗಳಿಗೂ ಡಿಜಿಸಿಎ ಆದೇಶಿಸಿದೆ.
ಕೋರ್ಟ್ ಆದೇಶ
ಕೊರೊನಾ ಸೋಂಕು ಇನ್ನೂ ಮುಗಿದಿಲ್ಲ. ಈಗಲೂ ಹರಡುತ್ತಲೇ ಇದೆ. ಹೀಗಾಗಿ ಕಡ್ಡಾಯವಾಗಿ ನಿಯಮಾವಳಿ ಪಾಲನೆ ಮಾಡಬೇಕೆಂದು ಜೂನ್ 3 ರಂದು ಕೂಡಾ ಆದೇಶ ಹೊರಡಿಸಲಾಗಿತ್ತು. ಆರೋಗ್ಯ ಇಲಾಖೆ ಹಾಗೂ ಡಿಜಿಸಿಎ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಸೂಚನೆ ನೀಡಲಾಗಿತ್ತು. ಒಂದು ವೇಳೆ ಯಾರಾದರೂ ಮಾಸ್ಕ್ ಧರಿಸದೆ ಇದ್ದರೆ ಅವರನ್ನು ವಿಮಾನದಿಂದ ಕೆಳಗಿಳಿಸಿ, ಭದ್ರತಾ ಪಡೆ ವಶಕ್ಕೆ ಒಪ್ಪಿಸಿ ಎಂದು ಈ ಹಿಂದೆ ನ್ಯಾಯಾಲಯ ಕೂಡಾ ಹೇಳಿತ್ತು. ಹೈಕೋರ್ಟ್‌ನ ನ್ಯಾಯಮೂರ್ತಿಗಳೇ ವಿಮಾನದಲ್ಲಿ ತಮಗೆ ಆದ ಅನುಭವವನ್ನು ಅರ್ಜಿಯೊಂದರ ವಿಚಾರಣೆ ವೇಳೆ ಹೇಳಿಕೊಂಡಿದ್ದರು.
ಕೊರೊನಾ ಸೋಂಕು ಇನ್ನೂ ಕಾಡುತ್ತಲೇ ಇದೆ. ಮಹಾ ಮಾರಿ ಯಾವಾಗ ಬೇಕಾದರೂ ತನ್ನ ಕರಾಳ ಮುಖ ಪ್ರದರ್ಶನ ಮಾಡಬಹುದು. ಹೀಗಾಗಿ, ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆಯಂಥಾ ನಿಯಮಗಳ ಸಮೇತ ಕೋವಿಡ್ ಮಾರ್ಗಸೂಚಿಯ ಕಡ್ಡಾಯ ಪಾಲನೆ ಆಗಬೇಕಿದೆ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು.