ಬೆಂಗಳೂರು: ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಗುರುವಾರ ಬೆಂಗಳೂರಿನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಇಂಡಿಗೋ ವಿಮಾನಕ್ಕೆ ಲ್ಯಾಂಡ್ ಆಗಲು ಅನುಮತಿ ನೀಡದ ಕಾರಣ ವಿಮಾನ ವಾಪಸ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮರಳಿದೆ.
ವಿಮಾನ ಸಂಖ್ಯೆ 6ಇ 131, ಏIಂ ಯಿಂದ ನಿಗದಿತ ಸಮಯಕ್ಕಿಂತ 15 ನಿಮಿಷಗಳ ಮುನ್ನ 6.30 ಕ್ಕೆ ನಿರ್ಗಮಿಸಿತು. ಅದು ನಿಗದಿತ ಆಗಮನದ ಸಮಯವಾದ 7.10 ಕ್ಕೆ ಮಂಗಳೂರನ್ನು ತಲುಪಿತು. ಆದರೆ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗಲಿಲ್ಲ. "ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಲ್ಯಾಂಡ್ ಮಾಡಲು ಅನುಮತಿ ಸಿಕ್ಕಿಲ್ಲ. ಹೀಗಾಗಿ ಮಂಗಳೂರು ವಿಮಾನ ನಿಲ್ದಾಣದ ಮೇಲೆ ಕೆಲಕಾಲ ಹಾರಾಡಿದ ಇಂಡಿಗೋ ವಿಮಾನ ವಾಪಸ್ ಬೆಂಗಳೂರಿಗೆ ಮರಳಿದೆ" ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.
ಈ ವಿಮಾನವು ಮಂಗಳೂರಿನ ಆಕಾಶದಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಡುತ್ತಿತ್ತು ಎಂದು ಮೂಲಗಳು ತಿಳಿಸಿವೆ.
6ಇ 131 ವಿಮಾನವನ್ನು ವಾಪಸ್ ಕಳುಹಿಸಲಾಗಿದೆ ಎಂದು ಮಂಗಳೂರು ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.