ನವದೆಹಲಿ: ಹೆದ್ದಾರಿಗಳಲ್ಲಿ ಕಾರಿನ ಗಾಜು ಒರೆಸುವ ಸೋಗಿನಲ್ಲಿ ಬರುವ ಮಂದಿ ಫಾಸ್ಟ್ ಟ್ಯಾಗ್ ಹಣವನ್ನು ದೋಚುತ್ತಾರೆ ಎಂಬ ಅಂಶ ವಿಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಡಿತ್ತು.
ಈ ಬಗ್ಗೆ ಎನ್ ಪಿಸಿಐ ಸ್ಪಷ್ಟನೆ ನೀಡಿದ್ದು ಪೇಮೆಂಟ್ ಮೂಲಸೌಕರ್ಯ (payment infrastructure) ವ್ಯಕ್ತಿಯಿಂದ ವ್ಯಕ್ತಿಗೆ ವಹಿವಾಟು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಹೆದ್ದಾರಿಗಳಲ್ಲಿ ಕಾರಿನ ಗಾಜು ಒರೆಸುವ ಸೋಗಿನಲ್ಲಿ ಬರುವ ಮಂದಿ ಫಾಸ್ಟ್ ಟ್ಯಾಗ್ ಹಣದ ವಿಡಿಯೋಗಳು ಆಧಾರ ರಹಿತವಾಗಿದ್ದು, ಸುಳ್ಳು ಮಾಹಿತಿ ಹರಡುತ್ತಿವೆ ಎಂದು ರಾಷ್ಟ್ರೀಯ ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ (ಎನ್ ಪಿಸಿಐ) ಟ್ವಿಟರ್ ಮೂಲಕ ಸ್ಪಷ್ಟನೆ ನೀಡಿದೆ.
ಎನ್ಇಟಿಸಿ ಫಾಸ್ಟ್ ಟ್ಯಾಗ್ ವ್ಯಕ್ತಿಯಿಂದ-ವ್ಯಾಪಾರಿ (ಪಿ2ಎಂ) ವಹಿವಾಟುಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ವ್ಯಕ್ತಿಯಿಂದ ವ್ಯಕ್ತಿ (ಪಿ2ಪಿ) ವಹಿವಾಟು ನಡೆಸುವುದಕ್ಕೆ ಎನ್ಇಟಿಸಿ ಫಾಸ್ಟ್ ಟ್ಯಾಗ್ ನೆಟ್ವರ್ಕ್ ನಲ್ಲಿ ಸೌಲಭ್ಯ ಕಲ್ಪಿಸಿಲ್ಲ, ಇದರ ಅರ್ಥ ಯಾವುದೇ ವ್ಯಕ್ತಿಯೋರ್ವ ಎನ್ಇಟಿಸಿ ಫಾಸ್ಟ್ ಟ್ಯಾಗ್ ವ್ಯವಸ್ಥೆಯಿಂದ ಹಣ ತೆಗೆಯಲು ಸಾಧ್ಯವಿಲ್ಲ. ಕೇವಲ ಅಧಿಕೃತ ಸಿಸ್ಟಮ್ ಇಂಟಿಗ್ರೇಟರ್ಗಳು (ಎಸ್ಐ) ಗಳು ಮಾತ್ರ ಹಣ ಸ್ವೀಕರಿಸಲು ಸಾಧ್ಯವಿದೆ ಎಂದು ಎನ್ ಪಿಸಿಐ ಹೇಳಿದೆ.
ಟೋಲ್ ಪ್ಲಾಜಾ ಡೇಟಾ ಕೇಂದ್ರ/ ಸರ್ವರ್ ರೂಮ್ ಗಳನ್ನು ಹಾರ್ಡ್ ವೇರ್ ಸೆಕ್ಯುರಿಟಿ ಮಾಡ್ಯೂಲ್ (ಹೆಚ್ ಎಸ್ಎಂ) ಮೂಲಕ ಕ್ರಿಪ್ಟೋಗ್ರಾಫಿಕವಾಗಿ ಸುರಕ್ಷಿತವಾಗಿರಿಸಲಾಗಿದೆ. ಪ್ರತಿ ಮರ್ಚೆಂಟ್ ಗೆ ವಿಶಿಷ್ಟ ಪ್ಲಾಜಾ ಕೋಡ್ ನೀಡಲಾಗಿರುತ್ತದೆ. ಪ್ರತಿ ವಹಿವಾಟುಗಳೂ ಓಪನ್ ಇಂಟರ್ನೆಟ್ ಕನೆಕ್ಟಿವಿಟಿ ಮೂಲಕ ಕಾರ್ಯಗತಗೊಳಿಸಲಾಗಿದೆ ಹಾಗೂ ಯಾವುದೇ ಹಣಕಾಸಿನ ವಹಿವಾಟುಗಳನ್ನು ಪಟ್ಟಿ ಮಾಡಲಾದ ಪೂರ್ವಾಪೇಕ್ಷಿತಗಳು ಇಲ್ಲದೇ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಎನ್ ಪಿಸಿಐ ಸ್ಪಷ್ಟಪಡಿಸಿದೆ.