ಕಾಸರಗೋಡು: ಕೇರಳಾದ್ಯಂತ ಆಳಸಮುದ್ರ ಮೀನುಗಾರಿಕೆಗೆ ಜೂ. 9ರಿಂದ ನಿಷೇಧ ಜಾರಿಗೊಳ್ಳಲಿದೆ. ಬುಧವಾರ ಮಧ್ಯರಾಥ್ರಿಯಿಂದ ಜಾರಿಗೆ ಬರಲಿರುವ ನಿಷೇಧಾಜ್ಞೆ ಜುಲೈ 31ರ ವರೆಗೆ ಜಾರಿಯಲ್ಲಿರಲಿದೆ. ನಿರ್ದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಮೀನುಗಾರಿಕಾ ಇಲಾಖೆ ಎಚ್ಚರಿಕೆ ನೀಡಿದೆ. ಈ ಮಧ್ಯೆ ಪರಂಪರಾಗತ ಮೀನುಗಾರಿಕೆಗೆ ಕೆಲವೊಂದು ರಿಯಾಯಿತಿ ಕಲ್ಪಿಸಲಾಗಿದೆ. ಟ್ರೋಲಿಂಗ್ ನಿಷೇಧ ಹಿನ್ನೆಲೆಯಲ್ಲಿ ಯಾಂತ್ರೀಕೃತ ದೋಣಿಗಳು ಈಗಾಘಲೇ ದಡ ಸೇರಿದೆ. ಮಳೆಗಾಲದಲ್ಲಿ ಸಮುದ್ರದಲ್ಲಿ ಮೀನು ಸಂತಾನೋತ್ಪತ್ತಿ ನಡೆಯುತ್ತಿರುವುದರಿಂದ ಈ ಕಾಲಾವಧಿಯಲ್ಲಿ ಮೀನುಗಾರಿಕೆ ನಿಷೇಧಿಸಲಾಗುತ್ತಿದೆ. ಕೇರಳದಲ್ಲಿ ಒಟ್ಟು 52ದಿವಸಗಳ ಕಾಲ ಟ್ರೋಲಿಂಗ್ ನಿಷೇಧ ಜಾರಿಯಲ್ಲಿರಲಿದೆ. ಟ್ರೋಲಿಂಗ್ ನಿಷೇಧ ಸಂದರ್ಭ ಸಮುದ್ರದಲ್ಲಿ ಹೋಗುವ ಮೀನುಕಾರ್ಮಿಕರು ಬಯೋಮೆಟ್ರಿಕ್ ಐ.ಡಿ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಬಂದರು ಮತ್ತು ಇತರೆಡೆ ಚಟುವಟಿಕೆ ನಡೆಸುತ್ತಿರುವ ಡೀಸಲ್ ಬಂಕ್‍ಗಳು ಟ್ರೋಲಿಂಗ್ ನಿಷೇಧ ಕಾಲಾವಧಿಯಲ್ಲಿ ಮುಚ್ಚುಗಡೆಗೊಳ್ಳಲಿದೆ.