ಲಂಡನ್: ಇಂಗ್ಲೆಂಡ್- ಭಾರತ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾರತ ಎದುರಾಳಿ ತಂಡದ ವಿರುದ್ಧ 10 ವಿಕೆಟ್ ಗಳ ಜಯ ಗಳಿಸಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಟೀಂ ಇಂಡಿಯಾ ವೇಗಿ ಜಸ್ ಪ್ರೀತ್ ಬುಮ್ರಾ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಮೊದಲ ಏಕದಿನ ಪಂದ್ಯದಲ್ಲಿ 110 ರನ್ ಗಳಿಗೆ ಆಲೌಟ್ ಆಗಿತ್ತು.
111 ರನ್ ಗಳ ಸುಲಭದ ರನ್ ಚೇಸಿಂಗ್ ನಲ್ಲಿ ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ( 58 ಎಸೆತಗಳಲ್ಲಿ 76 ರನ್) ಶಿಖರ್ ಧವನ್ (54 ಎಸೆತಗಳಲ್ಲಿ 31 ರನ್) ಗಳ 18 ನೇ ಶತಕದ ಜೊತೆಯಾಟದ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು.
ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೇ 18.4 ಓವರ್ ಗಳಿಗೆ ಗೆಲುವನ್ನು ದಕ್ಕಿಸಿಕೊಂಡಿತು. ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಜೇಸನ್ ರಾಯ್ ಶೂನ್ಯ ಸುತ್ತಿದರೆ, ಜಾನಿ ಬೇರ್ ಸ್ಟೋ 7 ರನ್ ಗಳಿಸಿ ಬುಮ್ರಾ ಬೌಲಿಂಗ್ ನಲ್ಲಿ ಔಟಾದರು. ಜೋ ರೂಟ್ ಕೂಡ ಬುಮ್ರಾ ಬೌಲಿಂಗ್ ನಲ್ಲೇ ಶೂನ್ಯಕ್ಕೆ ನಿರ್ಗಮಿಸಿದ್ದು ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಟೀಂ ಇಂಡಿಯಾ ಪರ ಬೌಲಿಂಗ್ ನಲ್ಲಿ ಬುಮ್ರಾ 6 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ 3 ಹಾಗೂ ಪ್ರಸಿದ್ಧ್ ಕೃಷ್ಣ 1 ವಿಕೆಟ್ ಪಡೆದಿದ್ದಾರೆ.