ದರ್ಭಾಂಗ: ಬಿಹಾರದ ದರ್ಭಾಂಗ ಜಿಲ್ಲೆಯ ಲಲಿತ್ ನಾರಾಯಣ್ ಮಿಥಿಲಾ ವಿಶ್ವವಿದ್ಯಾಲಯ (ಎಲ್‌ಎನ್‌ಎಂಯು) ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗೆ ರಾಜ್ಯಶಾಸ್ತ್ರ ವಿಷಯದಲ್ಲಿ 100 ಅಂಕಗಳಿಗೆ 150 ಅಂಕ ನೀಡಿ, ಅಚ್ಚರಿ ಮೂಡಿಸಿದೆ. ಹಾಗೆಯೇ ಬಿ.ಕಾಂ ವಿದ್ಯಾರ್ಥಿಗೆ ವಿಷಯವೊಂದರಲ್ಲಿ ಶೂನ್ಯ ನೀಡಿದೆ.
'ರಾಜ್ಯಶಾಸ್ತ್ರ ವಿಷಯದ ಭಾಗ-2ರ ಪತ್ರಿಕೆ-4ರಲ್ಲಿ ಈ ಅಂಕಗಳು ಲಭಿಸಿವೆ' ಎಂದು ಬಿ.ಎ ಓದುತ್ತಿರುವ ವಿದ್ಯಾರ್ಥಿ ಖಚಿತಪಡಿಸಿದ್ದಾನೆ.
'ಫಲಿತಾಂಶ ನೋಡಿ ನಿಜಕ್ಕೂ ಅಚ್ಚರಿಯಾಯಿತು. ಇದು ತಾತ್ಕಾಲಿಕ ಅಂಕ ಪಟ್ಟಿಯಾದರೂ ಫಲಿತಾಂಶ ಪ್ರಕಟಿಸುವ ಮೊದಲು ಅಧಿಕಾರಿಗಳು ಪರಿಶೀಲಿಸಬೇಕಿತ್ತು' ಎಂದು ವಿದ್ಯಾರ್ಥಿ ಪ್ರತಿಕ್ರಿಯಿಸಿದ್ದಾನೆ.
ಬಿಬಿಎಂ ಭಾಗ-2 ಪರೀಕ್ಷೆಯ ಅಕೌಂಟಿಂಗ್ ಮತ್ತು ಫೈನಾನ್ಸ್ ವಿಷಯದ ಪ್ರಶ್ನೆಪತ್ರಿಕೆ-4ರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಶೂನ್ಯ ಅಂಕ ನೀಡಿ, ಮುಂದಿನ ಗ್ರೇಡ್‌ಗೆ ಬಡ್ತಿಯನ್ನೂ ಕೊಡಲಾಗಿದೆ.
'ಇದು ಮುದ್ರಣದ ತಪ್ಪಿನಿಂದಾದ ಪ್ರಮಾದ'ವೆಂದು ವಿಶ್ವವಿದ್ಯಾಲಯ ಒಪ್ಪಿಕೊಂಡಿದೆ. ಅಲ್ಲದೇ, ಪರಿಷ್ಕೃತ ಅಂಕಪಟ್ಟಿ ನೀಡಿದೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.
'ಎರಡೂ ಅಂಕ ಪಟ್ಟಿಗಳಲ್ಲಿ ಅಂಕ ನಮೂದಿಸುವಾಗ ತಪ್ಪಾಗಿದೆ. ಇದರಲ್ಲಿ ಬೇರೇನೂ ಇಲ್ಲ. ಇಬ್ಬರಿಗೂ ಮುದ್ರಣ ದೋಷ ಸರಿಪಡಿಸಿದ ಪರಿಷ್ಕೃತ ಅಂಕಪಟ್ಟಿಗಳನ್ನು ನೀಡಲಾಗಿದೆ' ಎಂದು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಮುಷ್ತಾಕ್ ಅಹ್ಮದ್ ಸ್ಪಷ್ಟನೆ ನೀಡಿದ್ದಾರೆ.