ನವದೆಹಲಿ: ರಾಜ್ಯಪಾಲರ ಹುದ್ದೆ ಹಾಗೂ ರಾಜ್ಯಸಭಾ ಸದಸ್ಯರನ್ನಾಗಿ ಮಾಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ಜನರಿಗೆ ₹100 ಕೋಟಿ ವಂಚಿಸಲು ಯತ್ನಿಸುತ್ತಿತ್ತು ಎನ್ನಲಾದ ಅಂತರರಾಜ್ಯ ಜಾಲವೊಂದನ್ನು ಸಿಬಿಐ ಭೇದಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ.
ಶೋಧ ಕಾರ್ಯದ ವೇಳೆ, ಆರೋಪಿಯೊಬ್ಬ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಸದ್ಯ ಕರ್ನಾಟಕದ ಬೆಳಗಾವಿಯಲ್ಲಿ ವಾಸವಿರುವ ರವೀಂದ್ರ ವಿಠಲ ನಾಯ್ಕ, ಮಹಾರಾಷ್ಟ್ರ ಲಾತೂರಿನ ಕಮಲಾಕರ ಪ್ರೇಮಕುಮಾರ್ ಬಾಂದಗರ, ದೆಹಲಿಯ ಮಹೇಂದ್ರ ಪಾಲ್ ಅರೋರಾ, ಅಭಿಷೇಕ್ ಬೂರಾ ಹಾಗೂ ಮೊಹಮ್ಮದ್ ಏಜಾಜ್ ಖಾನ್ ಎಂಬುವವರ ಹೆಸರುಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಯ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
'ಬಾಂದಗರ, ತಾನು ಸಿಬಿಐ ಅಧಿಕಾರಿ. ತನಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಂಪರ್ಕ ಇದೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದ. ಭಾರಿ ಹಣವನ್ನು ಕೊಟ್ಟರೆ ಯಾವುದೇ ಕೆಲಸವನ್ನಾದರೂ ಮಾಡಿಕೊಡಲು ಸಿದ್ಧ ಎಂದು ಹೇಳುತ್ತಿದ್ದ ಆತ, ಹಣ ಕೊಡಲು ಸಿದ್ಧರಿರುವ ಜನರನ್ನು ಕರೆತರುವಂತೆ ಬೂರಾ, ಅರೋರಾ ಹಾಗೂ ಖಾನ್ ಅವರಿಗೆ ಸೂಚಿಸಿದ್ದ' ಎಂದು ಆರೋಪಿಸಲಾಗಿದೆ.
'ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗುವುದು, ರಾಜ್ಯಸಭಾ ಸೀಟು ಕೊಡಿಸಲಾಗುವುದು, ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಹಾಗೂ ಇಲಾಖೆಗಳಡಿ ಕಾರ್ಯ ನಿರ್ವಹಿಸುವ ಸಂಸ್ಥೆಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಲಾಗುವುದು ಎಂಬುದಾಗಿ ಸುಳ್ಳು ಭರವಸೆಗಳನ್ನು ನೀಡಿ, ಜನರಿಂದ ಕೋಟ್ಯಂತರ ರೂಪಾಯಿ ಪಡೆಯುವ ಸಂಚು ರೂಪಿಸಿದ್ದರು' ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
'ಜನರನ್ನು ನಂಬುವಂತೆ ಮಾಡುವ ಸಲುವಾಗಿ ಆರೋಪಿಗಳು ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳ ಹೆಸರುಗಳನ್ನು ಹೇಳುತ್ತಿದ್ದರು. ಇಲ್ಲವೇ, ತಮ್ಮ ಈ ಕಾರ್ಯದಲ್ಲಿ ಮಧ್ಯವರ್ತಿಯಂತೆ ಕಾರ್ಯ ನಿರ್ವಹಿಸುತ್ತಿದ್ದ ಅಭಿಷೇಕ್ ಬೂರಾ ಮೂಲಕ ಈ ಹೆಸರುಗಳನ್ನು ಹೇಳುತ್ತಿದ್ದರು' ಎಂಬ ಬಗ್ಗೆ ಸಿಬಿಐಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಜಾಡನ್ನು ಹಿಡಿದು ಶೋಧ ನಡೆಸಿದ ಅಧಿಕಾರಿಗಳು, ಈ ವಂಚನೆಯ ಜಾಲವನ್ನು ಭೇದಿಸಿದ್ದಾರೆ ಎಂದು ಮೂಲಗಳು ಹೇಳಿವೆ.