ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಇನ್ನೂ ಬಾಕಿಯಿದ್ದರೂ ಕೇಂದ್ರ ವಿತ್ತ ಸಚಿವಾಲಯದ ಅಧೀನದ ಆರ್ಥಿಕ ವ್ಯವಹಾರಗಳ ಇಲಾಖೆ (ಡಿಇಎ)ಯ ಇತ್ತೀಚಿನ ಅಂಕಿಅಂಶಗಳು ಬಾಂಡ್ಗಳ ಮಾರಾಟವು ಈಗ 10,000 ಕೋ.ರೂ.ಗಳ ಗಡಿಯನ್ನು ದಾಟಿದೆ ಎನ್ನುವುದನ್ನು ಬಹಿರಂಗಗೊಳಿಸಿವೆ.
ಬಾಂಡ್ಗಳನ್ನು ಖರೀದಿಸುವ ದಾನಿಗಳ ಗುರುತು ಗೋಪ್ಯವಾಗಿಯೇ ಉಳಿಯುವುದರಿಂದ ಈ ಬಾಂಡ್ಗಳ ಸುತ್ತಲಿನ 'ಅಪಾರದರ್ಶಕತೆ'ಯ ಬಗ್ಗೆ ಹಲವಾರು ಸಾಮಾಜಿಕ ಕಾರ್ಯಕರ್ತರು,ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ವರ್ಷಗಳಿಂದಲೂ ಕಳವಳಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಎಸ್ಬಿಐನ ನಿಯೋಜಿತ ಶಾಖೆಗಳಲ್ಲಿ ಈ ಬಾಂಡ್ಗಳ ಮಾರಾಟ ಮತ್ತು ನಗದೀಕರಣದ ಮೇಲೆ ನಿಗಾಯಿಟ್ಟಿರುವ ಆರ್ಟಿಐ ಕಾರ್ಯಕರ್ತ ನಿವೃತ್ತ ಕಮೊಡೋರ್ ಲೋಕೇಶ ಬಾತ್ರಾ ಅವರ ಪ್ರಕಾರ ಜು.1ರಿಂದ ಜು.10ರವರೆಗಿನ 21ನೇ ಹಂತದ ಅವಧಿಯಲ್ಲಿ ಬಾಂಡ್ಗಳ ಮಾರಾಟವು 10,000 ಕೋ.ರೂ.ಗಳ ಗಡಿಯನ್ನು ದಾಟಿದೆ.
ಡಿಇಎ ಆರ್ಟಿಐ ಕಾಯ್ದೆಯಡಿ ಬಾತ್ರಾಗೆ ನೀಡಿರುವ ಉತ್ತರದಂತೆ ಎಸ್ಬಿಐನ 29 ಅಧಿಕೃತ ಶಾಖೆಗಳ ಪೈಕಿ ಏಳರಲ್ಲಿ ಈ ಬಾಂಡ್ಗಳ ಮಾರಾಟ ಮತ್ತು ನಗದೀಕರಣ ನಡೆದಿತ್ತು. ಈವರೆಗಿನ ಎಲ್ಲ 21 ಹಂತಗಳಲ್ಲಿ ಒಟ್ಟು 10,246 ಕೋ.ಅಥವಾ ನಿಖರವಾಗಿ ಹೇಳಬೇಕೆಂದರೆ 10,246,22,51,000 ರೂ.ಮೌಲ್ಯದ ಬಾಂಡ್ಗಳು ಮಾರಾಟವಾಗಿವೆ.
ಚುನಾವಣಾ ಬಾಂಡ್ಗಳು 1,000 ರೂ.,10,000 ರೂ.,ಒಂದು ಲಕ್ಷ ರೂ.,10 ಲಕ್ಷ ರೂ. ಮತ್ತು ಒಂದು ಕೋಟಿ ರೂ.ಮುಖಬೆಲೆಗಳಲ್ಲಿ ಮಾರಾಟವಾಗುತ್ತವೆ. 2018,ಜನವರಿಯಲ್ಲಿ ಯೋಜನೆಯು ಅಧಿಸೂಚಿತಗೊಂಡಾಗಿನಿಂದ ಒಟ್ಟು 18,779 ಚುನಾವಣಾ ಬಾಂಡ್ಗಳನ್ನು ಮಾರಾಟ ಮಾಡಲಾಗಿದೆ.