ನವದೆಹಲಿ :ದೇಶಾದ್ಯಂತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಪಡೆಗಳಲ್ಲಿಯ ಸಿಬ್ಬಂದಿಗಳ ಒಟ್ಟು ಸಂಖ್ಯೆ 10 ವರ್ಷಗಳಲ್ಲಿ (2010-2020) ಶೇ.32ರಷ್ಟು ಹೆಚ್ಚಿದೆಯಾದರೂ ಮಹಿಳೆಯರ ಪಾಲು ಕೇವಲ ಶೇ.10.5ರಷ್ಟಿದೆ ಮತ್ತು ಪ್ರತಿ ಮೂರು ಪೊಲೀಸ್ ಠಾಣೆಗಳಲ್ಲಿ ಒಂದು ಮಾತ್ರ ಸಿಸಿಟಿವಿ ಸೌಲಭ್ಯವನ್ನು ಹೊಂದಿದೆ ಎಂದು ಇಂಡಿಯಾ ಜಸ್ಟೀಸ್ ರಿಪೋರ್ಟ್ (ಐಜೆಆರ್) ಬಯಲುಗೊಳಿಸಿದೆ.
2019ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡ ಐಜೆಆರ್ ಅನ್ನು ನ್ಯಾಯ ಕ್ಷೇತ್ರದಲ್ಲಿ ಸುಧಾರಣೆಗಾಗಿ ಶ್ರಮಿಸುತ್ತಿರುವ ಸಂಸ್ಥೆಗಳ ಸಮೂಹವು ಸಂಕಲಿಸಿದೆ. ಸೆಂಟರ್ ಫಾರ್ ಸೋಷಿಯಲ್ ಜಸ್ಟೀಸ್, ಕಾಮನ್ ಕಾಸ್, ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್, ದಕ್ಷ್, ಟಿಐಎಸ್‌ಎಸ್-ಪ್ರಯಾಸ್, ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿ ಮತ್ತು ಹೌ ಇಂಡಿಯಾ ಲಿವ್ಸ್ ಈ ಸಂಸ್ಥೆಗಳಲ್ಲಿ ಸೇರಿವೆ.
ವಾರ್ಷಿಕವಾಗಿ ಪ್ರಕಟಗೊಳ್ಳುವ ವರದಿಯಂತೆ ಜನವರಿ 2021ಕ್ಕೆ ಇದ್ದಂತೆ ದೇಶದಲ್ಲಿಯ ಶೇ.41ರಷ್ಟು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರಿಗಾಗಿ ಹೆಲ್ಪ್ ಡೆಸ್ಕ್ ಗಳಿರಲಿಲ್ಲ. ತ್ರಿಪುರಾ ಎಲ್ಲ ಪೊಲೀಸ್ ಠಾಣೆಗಳಲ್ಲಿ ಇಂತಹ ಡೆಸ್ಕ್ ಗಳನ್ನು ಹೊಂದಿರುವ ಏಕೈಕ ರಾಜ್ಯವಾಗಿದ್ದರೆ ಅರುಣಾಚಲ ಪ್ರದೇಶದ ಯಾವುದೇ ಪೊಲೀಸ್ ಠಾಣೆಯಲ್ಲಿ ಇಂತಹ ಡೆಸ್ಕ್ ಗಳು ಇಲ್ಲ. ಒಂಭತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.90ಕ್ಕೂ ಅಧಿಕ ಪೊಲೀಸ್ ಠಾಣೆಗಳು ಮಹಿಳೆಯರಿಗಾಗಿ ಹೆಲ್ಪ್ ಡೆಸ್ಕ್ ಗಳನ್ನು ಹೊಂದಿವೆ.
ಅಧಿಕೃತ ಅಂಕಿಅಂಶಗಳು ಮತ್ತು ತನ್ನದೇ ಆದ ಅಧ್ಯಯನಗಳನ್ನು ಆಧರಿಸಿ ಸಿದ್ಧಗೊಳಿಸಲಾಗಿರುವ ವರದಿಯು ಪೊಲೀಸ್ ಪಡೆಯಲ್ಲಿ ಮಹಿಳಾ ಪ್ರಾತಿನಿಧ್ಯವು ಶೇ.3.3ರಿಂದ ಶೇ.10.5ಕ್ಕೆ ಏರಲು 15 ವರ್ಷಗಳು (2006-2020) ಬೇಕಾಗಿದ್ದವು ಎಂದು ತಿಳಿಸಿದೆ.
ಆರು ಕೇಂದ್ರಾಡಳಿತ ಪ್ರದೇಶಗಳು ಮತ್ತು 11 ರಾಜ್ಯಗಳು ಪೊಲೀಸ್ ಪಡೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿಯ ಗುರಿಯನ್ನು ಹೊಂದಿವೆ. ಬಿಹಾರ ಶೇ.38,ಅರುಣಾಚಲ ಪ್ರದೇಶ,ಮೇಘಾಲಯ ಮತ್ತು ತ್ರಿಪುರಾ ಶೇ.10ರಷ್ಟು ಗುರಿಯನ್ನು ಹೊಂದಿದ್ದರೆ,ಏಳು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯಾವುದೇ ಮೀಸಲಾತಿಯನ್ನು ಹೊಂದಿಲ್ಲ.
ಆದರೆ 2020ಕ್ಕೆ ಇದ್ದಂತೆ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲ. ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳ ಪೈಕಿ ತಮಿಳುನಾಡು (ಶೇ.10.4),ಬಿಹಾರ (ಶೇ.17.4) ಮತ್ತು ಗುಜರಾತ್ (ಶೇ.16) ಅತ್ಯಂತ ಹೆಚ್ಚಿನ ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಹೊಂದಿರುವ ರಾಜ್ಯಗಳಲ್ಲಿ ಸೇರಿವೆ. ಆದರೆ ಇವು ಅನುಕ್ರಮವಾಗಿ ಶೇ.30,ಶೇ.38 ಮತ್ತು ಶೇ.33ರ ತಮ್ಮ ನಿಗದಿತ ಗುರಿಗಳನ್ನು ಸಾಧಿಸುವಲ್ಲಿ ವಿಫಲಗೊಂಡಿವೆ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡಿಗಡ ಶೇ.22.1ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿಗಳೊಂದಿಗೆ ಅಗ್ರಸ್ಥಾನದಲ್ಲಿದೆ.
ಆಂಧ್ರಪ್ರದೇಶವು ಶೇ.6.3ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿಗಳೊಂದಿಗೆ ಕನಿಷ್ಠ ಸ್ಥಾನದಲ್ಲಿದ್ದು,ತಲಾ ಶೇ.6.6ರೊಂದಿಗೆ ಜಾರ್ಖಂಡ್ ಮತ್ತು ಮಧ್ಯಪ್ರದೇಶ ಅದಕ್ಕಿಂತ ಮೇಲಿನ ಸ್ಥಾನದಲ್ಲಿವೆ.
ಬಿಹಾರ ಮತ್ತು ಹಿಮಾಚಲ ಪ್ರದೇಶ ಪೊಲೀಸ್ ಪಡೆಯಲ್ಲಿ ಮಹಿಳಾ ಪ್ರಾತಿನಿಧ್ಯದ ತೀವ್ರ ಕುಸಿತಕ್ಕೆ ಸಾಕ್ಷಿಯಾಗಿವೆ. ಬಿಹಾರದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳ ಪ್ರಮಾಣ 2019ರಲ್ಲಿದ್ದ ಶೇ.25.3 ರಿಂದ ಶೇ.17.4ಕ್ಕೆ ಇಳಿದಿದ್ದರೆ,ಹಿಮಾಚಲ ಪ್ರದೇಶದಲ್ಲಿ ಶೇ.19.2ರಿಂದ ಶೇ.13.5ಕ್ಕೆ ಕುಸಿದಿದೆ.
ತನ್ನ ಅಧ್ಯಯನಗಳ ಆಧಾರದಲ್ಲಿ ಐಜೆಆರ್,ದೇಶದ ಪೊಲೀಸ್ ಪಡೆಗೆ ಶೇ.33ರ ಮಹಿಳಾ ಮೀಸಲಾತಿಯ ತನ್ನ ಇಚ್ಛಿತ ಗುರಿಯನ್ನು ಸಾಧಿಸಲು 33 ವರ್ಷ ಬೇಕಾಗುತ್ತವೆ ಎಂದು ಬೆಟ್ಟು ಮಾಡಿದೆ. ದೊಡ್ಡರಾಜ್ಯಗಳ ಪೈಕಿ ಒಡಿಶಾಕ್ಕೆ 48 ವರ್ಷ,ಬಿಹಾರಕ್ಕೆ ಎಂಟು ವರ್ಷ ಮತ್ತು ದಿಲ್ಲಿಗೆ 31 ವರ್ಷಗಳು ಬೇಕಾದರೆ,ಮಿಜೋರಾಮ್ಗೆ ತನ್ನ ಗುರಿಯನ್ನು ತಲುಪಲು 585 ವರ್ಷಗಳು ಬೇಕಾಗುತ್ತವೆ.
ರಾಷ್ಟ್ರೀಯ ಮಟ್ಟದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗಳ ಶೇಕಡಾವಾರು ಪ್ರಮಾಣ ಇನ್ನೂ ಕಡಿಮೆ,ಅಂದರೆ ಶೇ.8.2ರಷ್ಟಿದೆ ಹಾಗೂ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ.5 ಅಥವಾ ಅದಕ್ಕಿಂತ ಕಡಿಮೆಯಿದೆ.
ತಮಿಳುನಾಡು ಮತ್ತು ಮಿಜೋರಾಮ್ ಗರಿಷ್ಠ ಶೇ.20.2ರಷ್ಟು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ಹೊಂದಿದ್ದರೆ ಜಮ್ಮು-ಕಾಶ್ಮೀರದಲ್ಲಿ ಅವರ ಪ್ರಮಾಣ ಕನಿಷ್ಠ,ಅಂದರೆ ಶೇ.2ರಷ್ಟಿದೆ. ಇದು ಕೇರಳದಲ್ಲಿ ಶೇ.3 ಮತ್ತು ಪ.ಬಂಗಾಳದಲ್ಲಿ ಶೇ.4.2ರಷ್ಟಿದ್ದರೆ ಲಕ್ಷದ್ವೀಪದಲ್ಲಿರುವ 18 ಪೊಲೀಸ್ ಅಧಿಕಾರಿಗಳಲ್ಲಿ ಮಹಿಳೆಯರ ಪಾಲು ಶೂನ್ಯವಾಗಿದೆ ಎಂದು ವರದಿಯು ತಿಳಿಸಿದೆ.
ಭಾರತದಲ್ಲಿಯ 17,233 ಪೊಲೀಸ್ ಠಾಣೆಗಳ ಪೈಕಿ 5,396 ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಒಡಿಶಾ,ತೆಲಂಗಾಣ ಮತ್ತು ಪುದುಚೇರಿಗಳಲ್ಲಿ ಪ್ರತಿ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಒಂದಾದರೂ ಸಿಸಿಟಿವಿ ಇದ್ದರೆ,ಮಣಿಪುರ,ಲಡಾಖ್ ಮತ್ತು ಲಕ್ಷದ್ವೀಪಗಳ ಯಾವುದೇ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಇಲ್ಲ. 894 ಪೊಲೀಸ್ ಠಾಣೆಗಳನ್ನು ಹೊಂದಿರುವ ರಾಜಸ್ಥಾನದಲ್ಲಿ ಒಂದು ಠಾಣೆಯಲ್ಲಿ ಮಾತ್ರ ಸಿಸಿಟಿವಿ ಸೌಲಭ್ಯವಿದೆ.
ಕರ್ನಾಟಕವನ್ನು ಹೊರತುಪಡಿಸಿ ಇತರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಎಸ್ಸಿ,ಎಸ್ಟಿ ಮತ್ತು ಒಬಿಸಿ ನೇಮಕಾತಿ ಕೋಟಾಗಳನ್ನು ಪೂರ್ಣಗೊಳಿಸುವಲ್ಲಿ ವಿಫಲಗೊಂಡಿವೆ. ಕಾನ್ಸ್ಟೇಬಲ್ ಮಟ್ಟದಲ್ಲಿ ಗುಜರಾತ ಗುರಿಯನ್ನು ಸಾಧಿಸಿರುವ ಏಕೈಕ ರಾಜ್ಯವಾಗಿದೆ.
ಜನವರಿ 2021ಕ್ಕೆ ಇದ್ದಂತೆ ಭಾರತೀಯ ಪೊಲೀಸ್ ಪಡೆಯಲ್ಲಿ 5,62 ಲ.ಖಾಲಿ ಹುದ್ದೆಗಳಿದ್ದವು. 2010ರಲ್ಲಿ 15.6 ಲ.ದಷ್ಟಿದ್ದ ಒಟ್ಟು ಪೊಲೀಸ್ ಸಿಬ್ಬಂದಿಗಳ ಸಂಖ್ಯೆ 2020ರಲ್ಲಿ ಶೇ.32ರಷ್ಟು ವೃದ್ಧಿಯಾಗಿ 20.7 ಲ.ಕ್ಕೆ ತಲುಪಿತ್ತಾದರೂ ಕಾನಸ್ಟೇಬಲ್ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ನಿಶ್ಚಲವಾಗಿತ್ತು ಎಂದು ವರದಿಯು ತಿಳಿಸಿದೆ.