ಹಿಮ್ಮತ್‌ನಗರ, ಗುಜರಾತ್: ಪೆಟ್ರೊಲ್ ಜತೆಗೆ ಎಥನಾಲ್ ಮಿಶ್ರಣ ಕಳೆದ ಎಂಟು ವರ್ಷಗಳಿಂದ ಹತ್ತು ಪಟ್ಟು ಹೆಚ್ಚಾಗಿದ್ದು, ರೈತರ ಆದಾಯವನ್ನು ಹೆಚ್ಚಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದರು.
ಉತ್ತರ ಗುಜರಾತ್‌ನ ಸಾಬರ್‌ಕಂಠ ಜಿಲ್ಲೆಯ ಹಿಮ್ಮತ್‌ನಗರ ಸಮೀಪದ ಸಬರ್ ಡೈರಿ ಬಳಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ ನಂತರ ನೆರೆದಿದ್ದ ಅಪಾರ ಜನಸ್ತೋಮ ಉದ್ದೇಶಿಸಿ ಅವರು ಮಾತನಾಡಿದರು.
ಕಬ್ಬು ಮತ್ತು ಜೋಳದಿಂದ ಉತ್ಪಾದಿಸುವ ಎಥನಾಲ್ ಅನ್ನು ಪೆಟ್ರೋಲ್ ಜತೆಗೆ ಶೇ 10ರಷ್ಟು ಪ್ರಮಾಣದಲ್ಲಿ ಮಿಶ್ರಣ ಮಾಡಲಾಗುತ್ತಿದೆ. ಇದು 2014ರ ಹಿಂದೆ 40 ಕೋಟಿ ಲೀಟರ್‌ಗೂ ಕಡಿಮೆ ಇತ್ತು. ಈಗ 400 ಕೋಟಿ ಲೀಟರ್‌ಗಳಿಗೆ ಮೀರಿ ಏರಿಕೆಯಾಗಿದೆ ಎಂದು ಮೋದಿ ಹೇಳಿದರು.
2014ರ ನಂತರ ನಾವು ಅಧಿಕಾರಕ್ಕೆ ಬಂದ ಮೇಲೆ ನಮ್ಮ ಸರ್ಕಾರ ಸುಸ್ಥಿರ ಪ್ರಗತಿಗೆ ಶ್ರಮಿಸುತ್ತಿದೆ. ರೈತರ ಆದಾಯ ಹೆಚ್ಚಿಸಲು ಕಳೆದ ಎಂಟು ವರ್ಷಗಳಿಂದ ಹಾಕಿದ ಶ್ರಮ ಈಗ ಫಲಿತಾಂಶ ತೋರಿಸುತ್ತಿದೆ ಎಂದು ಹೇಳಿದರು.