ಕಾಸರಗೋಡು: ಮಂಜೇಶ್ವರ ವಿಧಾನಸಭಾ ಕ್ಷೇತ್ರ ಚುನಾವಣೆಯ ಲಂಚ ಪ್ರಕರಣಕ್ಕೆ ಸಂಬಂಧಿಸಿದ ವಾದ ಆಲಿಕೆಯನ್ನು ನ್ಯಾಯಾಲಯ ಜುಲೈ 11ಕ್ಕೆ ಮುಂದೂಡಿದೆ.ಬಿಜೆಪಿ ಮುಖಂಡ, ಪ್ರಕರಣದ ಐದನೇ ಆರೋಪಿ ವಿ.ಬಾಲಕೃಷ್ಣ ಶೆಟ್ಟಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ಮೇಲಿನ ವಾದ ಮುಂದುವರಿಸುವ ನಿಟ್ಟಿನಲ್ಲಿ ಪ್ರಕರಣದ ಪ್ರಮುಖ ಸಾಕ್ಷಿ ಸುಂದರ ನ್ಯಾಯಾಲಯಕ್ಕೆ ಹಾಜರಾಗಿ, ಬಾಲಕೃಷ್ಣ ಶೆಟ್ಟಿ ಅವರಿಗೆ ಜಾಮೀನು ಮಂಜೂರುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದರು.
ಮಂಜೇಶ್ವರದಲ್ಲಿ ಈ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‍ಪಿ ಅಭ್ಯರ್ಥಿಯಾಗಿದ್ದ ಕೆ.ಸುಂದರ ಅವರಿಗೆ ಲಂಚದ ಆಮಿಷವೊಡ್ಡಿ, ಬೆದರಿಸಿ ಅವರ ನಾಮಪತ್ರ ಹಿಂತೆಗೆದುಕೊಳ್ಳಲಾಗಿದೆ ಎಂಬ ಆರೋಪದನ್ವಯ, ಬಿಜೆಪಿ ಅಭ್ಯರ್ಥಿ, ಪಕ್ಷದ ರಾಜ್ಯಾಧ್ಯಕ್ಷ ಕೆ. ಸಉರೇಂದ್ರನ್ ಸಏರಿದಂತೆ ಹಲವರ ವಿರುದ್ಧ ಪ.ಜಾತಿ-ಪ.ವರ್ಗ ಅತಿಕ್ರಮಣ ತಡೆ ಕಾನೂನಿನನ್ವಯ ಕೇಸು ದಾಖಲಾಗಿತ್ತು. ಮಂಜೇಶ್ವರ ಮಂಡಲದಲ್ಲಿ ಎಡರಂಗ ಅಭ್ಯರ್ಥಿಯಾಗಿ ಸಪರ್ಧಿಸಿದ್ದ ವಿ.ವಿ ರಮೇಶನ್ ಅವರ ದೂರಿನನ್ವಯ ಸ್ಥಳೀಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ನಂತರ ಪ್ರಕರಣವನ್ನು ಕ್ರೈಂ ಬ್ರಾಂಚ್ ವಹಿಸಿಕೊಂಡಿತ್ತು.