ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಸರ್ದಾರ್ ಸಾಹಿಬ್ ಗುರುದ್ವಾರಕ್ಕೆ ಕರ್ತಾರ್‌ಪುರ ಕಾರಿಡಾರ್ ಮೂಲಕ 1,10,670 ಭಾರತೀಯರು ಮತ್ತು ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಹೊಂದಿದ ನಾಗರಿಕರು ಭೇಟಿ ನೀಡಿದ್ದಾರೆ ಎಂದು ಶುಕ್ರವಾರ ಭಾರತ ಸರ್ಕಾರ ತಿಳಿಸಿದೆ.
ಭಾರತದ ಪಂಜಾಬ್ ರಾಜ್ಯದ ಗುರುದಾಸ್‌ಪುರದಲ್ಲಿರುವ ಡೇರಾ ಬಾಬಾ ಸಾಹಿಬ್ ಗುರುದ್ವಾರದೊಂದಿಗೆ ಸರ್ದಾರ್ ಸಾಹಿಬ್ ಗುರುದ್ವಾರಕ್ಕೆ ಸಂಪರ್ಕವಿದೆ. ಈ ಎರಡು ಗುರುದ್ವಾರಗಳ ನಡುವಿನ ಮಾರ್ಗವನ್ನು ಕರ್ತಾರ್‌ಪುರದಲ್ಲಿ ನವೆಂಬರ್ 2019ರಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ
'ನವೆಂಬರ್ 2019ರಿಂದ ಕರ್ತಾರ್‌ಪುರ ಕಾರಿಡಾರ್ ಮೂಲಕ ಸಾಹಿಬ್ ಗುರುದ್ವಾರಕ್ಕೆ 1,10,670ಕ್ಕೂ ಹೆಚ್ಚು ಭಾರತೀಯರು ಮತ್ತು ಭಾರತದ ಸಾಗರೋತ್ತರ ಪೌರತ್ವ ಕಾರ್ಡ್ ಹೊಂದಿರುವ ನಾಗರಿಕರು ಭೇಟಿ ನೀಡಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಕರ್ತಾರ್‌ಪುರದ ಸರ್ದಾರ್ ಸಾಹಿಬ್ ಗುರುದ್ವಾರವು ಡೇರಾ ಬಾಬಾ ನಾನಕ್ ಗುರುದ್ವಾರದಿಂದ, 4 ಕಿ.ಮೀ. ದೂರದಲ್ಲಿ ಪಾಕಿಸ್ತಾನದ ನರೋವಾಲ್ ಜಿಲ್ಲೆಯ ರಾವಿ ನದಿಯ ದಂಡೆಯಲ್ಲಿದೆ.
'ಯಾತ್ರಾರ್ಥಿಗಳ ಇಚ್ಛೆಗೆ ಮಣಿದು, ಕರ್ತಾರ್‌ಪುರ ಮಾರ್ಗದ ಮೂಲಕ ಗುರುದ್ವಾರಕ್ಕೆ ಭೇಟಿ ನೀಡುವವರಿಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಭಾರತ ನಿರಂತರವಾಗಿ ಪಾಕಿಸ್ತಾನವನ್ನು ಒತ್ತಾಯಿಸುತ್ತಿದೆ. ಆದರೂ ಪಾಕಿಸ್ತಾನವು ಪ್ರತಿ ಭೇಟಿಗೆ ತಲಾ ₹1586.2 ರಷ್ಟು ಶುಲ್ಕವನ್ನು (20 ಯುಎಸ್ ಡಾಲರ್) ವಿಧಿಸುತ್ತಿದೆ' ಎಂದು ಸಚಿವರು ಹೇಳಿದರು.