ಕಾಸರಗೋಡು: ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಮಂಜೂರುಗೊಳಿಸಿರುವ 200 ಕೋಟಿ ರೂ.ಗಳಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ 30ರವರೆಗೆ 2972 ಸಂತ್ರಸ್ತರಿಗೆ 111.46 ಕೋಟಿ ರೂ. ಮೊತ್ತವನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ತಿಳಿಸಿದ್ದಾರೆ.
ಎಂಡೋಸಲ್ಫಾನ್ ಸಂತ್ರಸ್ತರಲ್ಲಿ ಇನ್ನೂ 430 ಸಂತ್ರಸ್ತರು ಅರ್ಜಿ ಸಲ್ಲಿಸಲು ಬಾಕಿಯಿದ್ದಾರೆ. ಅಗತ್ಯ ದಾಖಲೆಗಳೊಂದಿಗೆ ತಕ್ಷಣ ಅಕ್ಷಯ ಕೇಂದ್ರದ ಮೂಲಕ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಗ್ರಾಮ ಕಚೇರಿಯಿಂದ ಪಡೆಯಬಹುದಾಗಿದೆ. ಇನ್ನೂ ಅರ್ಜಿ ಸಲ್ಲಿಸದವರಿಗೆ ಸಾಮಾನ್ಯ ಮಾಹಿತಿ ನೀಡುವ ಬಗ್ಗೆ ಜುಲೈ 7ರಂದು ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗುವುದು.
ಸಂತ್ರಸ್ತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದು, ಆರ್ಥಿಕ ನೆರವು ಅಗತ್ಯವಿಲ್ಲದಿರುವವರು ಲಿಖಿತವಾಗಿ ಮಾಹಿತಿ ನೀಡಿ ಗ್ರಾಮ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಸಂತ್ರಸ್ತರ ಪಟ್ಟಿಯಲ್ಲಿರುವ 5ರಿಂದ ಹತ್ತು ಶೇ. ಜನರ ವಿಳಾಸ ಲಭ್ಯವಾಗದ ಕಾರಣ ಇವರನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಇವರ ಪತ್ತೆಗಾಗಿ ಸಂಬಂಧಿಸಿದ ಪಂಚಾಯಿತಿ ಪ್ರತಿನಿಧಿಗಳಿಗೆ ಪಟ್ಟಿ ಯನ್ನುನೀಡಲಾಗಿದ್ದು, ಆಶಾ ಕಾರ್ಯಕರ್ತೆಯರು ಲಭ್ಯವಿರುವ ಮನೆ ವಿಳಾಸಕ್ಕೆ ತೆರಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಕೆಲವು ವಿಳಾಸ ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಂತ್ರಸ್ತರ ಸಾವಿನ ಪ್ರಕರಣಗಳಲ್ಲಿ, ಕಾನೂನು ಹಕ್ಕು ಪ್ರಮಾಣಪತ್ರ ಹೊಂದಿದ್ದಲ್ಲಿ ಕಾನೂನು ಅಧಿಕಾರಿಗಳ ಸಲಹೆಯೊಂದಿಗೆ ಹಣಕಾಸಿನ ನೆರವು ನೀಡಲಾಗುವುದು.ಎಂದು ತಿಳಿಸಿದ್ದಾರೆ.