ಅಹಮದಾಬಾದ್: ಗುಜರಾತ್‌ನ 17 ಜಿಲ್ಲೆಗಳಿಗೆ ಚರ್ಮಗಂಟು ರೋಗ ವ್ಯಾಪಿಸಿದ್ದು, ಈವರೆಗೂ 1,240ಕ್ಕೂ ಅಧಿಕ ಜಾನುವಾರುಗಳು ಮೃತಪಟ್ಟಿವೆ.
'ರಾಜ್ಯ ಸರ್ಕಾರವು ಸೋಂಕು ನಿಯಂತ್ರಣಕ್ಕೆ ಮುಂದಾಗಿದ್ದು, ಬಾಧಿತ ಜಿಲ್ಲೆಗಳಲ್ಲಿ ಚಿಕಿತ್ಸಾ ಸೌಕರ್ಯಗಳನ್ನು ಹೆಚ್ಚಿಸಿದೆ.
ಲಸಿಕೀಕರಣವನ್ನೂ ನಡೆಸುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಾನುವಾರು ಮೇಳಗಳನ್ನು ನಿಷೇಧಿಸಿದೆ' ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
'ಶನಿವಾರದವರೆಗೆ 1,240ಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ. ಈವರೆಗೂ 5.74 ಲಕ್ಷಕ್ಕೂ ಅಧಿಕ ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಕಚ್, ಜಾಮ್‌ನಗರ, ದೇವಭೂಮಿ ದ್ವಾರಕ, ರಾಜ್‌ಕೋಟ್, ಪೋರಬಂದರ್, ಮೊರ್ಬಿ, ಸುರೇಂದ್ರನಗರ, ಅಮ್ರೇಲಿ, ಭಾವ್‌ನಗರ, ಬೋಟಾದ್, ಜುನಾಘಡ, ಗಿರ್ ಸೋಮನಾಥ, ಬನಸ್‌ಕಾಂತ, ಪಠಾಣ್, ಸೂರತ್, ಅರಾವಳಿ ಮತ್ತು ಪಂಚಮಹಲ್ ಜಿಲ್ಲೆಗಳಲ್ಲಿ ರೋಗ ಉಲ್ಬಣಿಸಿದೆ' ಎಂದು ಕೃಷಿ ಮತ್ತು ಪಶುಸಂಗೋಪನಾ ಸಚಿವ ರಾಘವ್‌ಜೀ ಪಟೇಲ್ ತಿಳಿಸಿದ್ದಾರೆ.
'1,746 ಹಳ್ಳಿಗಳಲ್ಲಿ 50,328 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ. ರೋಗ ನಿಯಂತ್ರಣ ಸಂಬಂಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿಗಳನ್ನೂ ರಚಿಸಲಾಗಿದೆ. 10 ಹಳ್ಳಿಗಳಿಗೆ ಒಂದರಂತೆ ಸಂಚಾರಿ ಪಶು ಚಿಕಿತ್ಸಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
'ಮುನ್ನೆಚ್ಚರಿಕೆ ದೃಷ್ಟಿಯಿಂದ ಆಗಸ್ಟ್ 21ರವರೆಗೂ ಜಾನುವಾರುಗಳ ಸಾಗಾಟ, ಮಾರಾಟ ಮತ್ತು ಮೇಳವನ್ನು ನಿಷೇಧಿಸಲಾಗಿದೆ. ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದೆ. ಜಾನುವಾರುಗಳ ಮೃತದೇಹವನ್ನು ಬಯಲು ಪ್ರದೇಶದಲ್ಲಿ ಬಿಸಾಡುವುದನ್ನೂ ನಿರ್ಬಂಧಿಸಲಾಗಿದೆ' ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
'ಸರ್ಕಾರವು ಜಾನುವಾರುಗಳನ್ನು ಕಳೆದುಕೊಂಡಿರುವ ರೈತರಿಗೆ ಪರಿಹಾರ ಒದಗಿಸಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ.