ಅಹಮದಾಬಾದ್: ಗುಜರಾತ್‌ನ ಸುರೇಂದ್ರನಗರ್ ಜಿಲ್ಲೆಯ ಗಜಾನ್ವವ್ ಗ್ರಾಮದಲ್ಲಿ 12 ವರ್ಷದ ಬಾಲಕಿಯೊಬ್ಬಳು ಕೊಳವೆ ಬಾವಿಗೆ ಬಿದ್ದಿರುವ ಪ್ರಕರಣ ಇಂದು (ಶುಕ್ರವಾರ) ಬೆಳಗ್ಗೆ 8.30ರ ಸುಮಾರಿಗೆ ವರದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿಯು ಸುಮಾರು 60 ಅಡಿ ಆಳದಲ್ಲಿ ಸಿಲುಕಿದ್ದು, ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.
ಕೊಳವೆ ಬಾವಿಯು ಸುಮಾರು 200 ಅಡಿಗಿಂತಲೂ ಹೆಚ್ಚು ಆಳ ಇರಬಹುದು ಎಂದು ಮೂಲಗಳು ತಿಳಿಸಿವೆ.
'ಸೇನೆಯ ಒಂದು ತಂಡ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಬಾಲಕಿಯ ಪೋಷಕರು ವಲಸೆ ಕಾರ್ಮಿಕರು' ಎಂದು ಧ್ರಂಗಾಧ್ರ ತಾಲ್ಲೂಕಿನ ಅಧಿಕಾರಿ ಶೋಭನಾ ಫಲ್ಡು ಹೇಳಿದ್ದಾರೆ.
ಸೇನೆಯ ತಂಡ ಮಾತ್ರವಲ್ಲದೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡವೂ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ. ಸೇನೆ, ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿದ್ದು, ಕಾರ್ಯಾಚರಣೆ ಯಶಸ್ವಿಯಾಗುವ ಭರವಸೆ ಇದೆ ಎಂದು ಮತ್ತೊಬ್ಬ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.