ಕಾಸರಗೋಡು: ಮುಂಗಾರು ವಿಪತ್ತು ನಿರ್ವಹಣೆ ಚಟುವಟಿಕೆಗಳ ಮೌಲ್ಯಮಾಪನಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಇತರ ಜಾರಿ ಅಧಿಕಾರಿಗಳ ಆನ್‍ಲೈನ್ ಸಭೆ ನಡೆಯಿತು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯಲ್ಲಿ ಬಿರುಸಿನ ಮಳೆಯಿಂದ ವಿಪತ್ತು ನಿರ್ವಹಣಾ ಚಟುವಟಿಕೆ, ಪರಿಹಾರ ಕಾರ್ಯಗಳ ಪರಿಶೀಲಿಸಲು ಮತ್ತು ನಷ್ಟಗಳ ಅವಲೋಕನ ನಡೆಸುವ ನಿಟ್ಟಿನಲ್ಲಿ ಸಭೆ ನಡೆಸಲಾಯಿತು. ಮುಂಗಾರು ಮಳೆಗೆ ಜಿಲ್ಲೆಯಲ್ಲಿ 151 ಮನೆಗಳು ನಾಶವಾಗಿವೆ. 135 ಮನೆಗಳು ಭಾಗಶಃ ಮತ್ತು 16 ಮನೆಗಳು ಸಂಪೂರ್ಣ ನಾಶವಾಗಿವೆ. ಮಂಜೇಶ್ವರ ತಾಲೂಕಿನಲ್ಲಿ ಎರಡು ಮತ್ತು ಕಾಸರಗೋಡು ತಾಲೂಕಿನಲ್ಲಿ ಒಂದು ಸಾವು ವರದಿಯಾಗಿದೆ. ಜಲಾವೃತದಿಂದ ತೊಂದರೆ ಅನುಭವಿಸುತ್ತಿರುವ ಪನತ್ತಡಿ ಪಂಚಾಯತ್‍ನ ಒಂಬತ್ತು ಗಿರಿಜನ ಕುಟುಂಬಗಳನ್ನು ಸ್ಥಳಾಂತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಳೆಯಿಂದ ಮನೆ ಕಳೆದುಕೊಂಡವರಿಗೆ ಆರ್ಥಿಕ ನೆರವು ವಿತರಣೆ ಒಂದು ವಾರದೊಳಗೆ ಪೂರ್ಣಗೊಳ್ಳಲಿದೆ.
ಪ್ರತಿ ವರ್ಷ ಜಲಾವೃತವಾಗುತ್ತಿರುವ ಜಿಲ್ಲೆಯ ಕೆಲವೊಂದು ಪ್ರದೇಶದಲ್ಲಿ ಶಾಶ್ವತ ಪರಿಹಾರಕ್ಕೆ ತಾಂತ್ರಿಕ ಸಮಿತಿ ರಚಿಸಲಾಗುವುದು. ರಸ್ತೆ ಬದಿ, ಸಾರ್ವಜನಿಕ ಸ್ಥಳಗಳು ಮತ್ತು ಶಾಲಾ ಆವರಣದಲ್ಲಿ ಅಪಾಯಕಾರಿ ಮರಗಳನ್ನು ತಕ್ಷಣ ತೆರವುಗೊಳಿಸಲು ಟ್ರೀ ಕಮಿಟಿಗಳಿಗೆ ಸೂಚನೆ ನೀಡಲಾಗಿದೆ. ಜೂನ್ 1 ರಿಂದ ಜುಲೈ 13 ರವರೆಗೆಜಿಲ್ಲೆಯಲ್ಲಿ ಈವರೆಗೆ 606.52 ಹೆಕ್ಟೇರ್ ಬೆಳೆ ನಾಶವಾಗಿದೆ. 5,759 ರೈತರು ಮಳೆಯಿಂದಾಗಿ ಬೆಳೆ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಡಿಡಿಎಂಎ ಸದಸ್ಯರು, ವಿವಿಧ ಇಲಾಖೆಗಳ ಮುಖ್ಯಸ್ಥರು, ತಹಸೀಲ್ದಾರರು, ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿಗಳು, ನಗರಸಭೆ ಅಧ್ಯಕ್ಷರು ಸಭೆಯಲ್ಲಿ ಭಾಗವಹಿಸಿದ್ದರು.