ನವದೆಹಲಿ: ಭಾರತ ಮತ್ತು ಚೀನಾ ನಡುವಿನ 16ನೇ ಸುತ್ತಿನ ಮಿಲಿಟರಿ ಮಾತುಕತೆ ಆರಂಭವಾಗಿದೆ. ಲಡಾಖ್ ನಲ್ಲಿ ಈ ಮಹತ್ವದ ನಡೆಯುತ್ತಿದೆ. ಕಮಾಂಡರ್ ಮಟ್ಟದ ಮಾತುಕತೆಯಲ್ಲಿ ಡೆಪ್ಸಾಂಗ್ ಮತ್ತು ಡೆಮ್ ಚೋಕನ್ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಎಲ್ಲಾ ಘರ್ಷಣೆಯ ಹಂತಗಳಲ್ಲಿ ತ್ವರಿತವಾಗಿ ಸೈನ್ಯವನ್ನು ಹಿಂತೆಗೆದುಕೊಳ್ಳುವಂತೆ ಭಾರತ ಚೀನಾದ ಮೇಲೆ ಒತ್ತಡ ಹೇರಲಿದೆ.
ದ್ವಿಪಕ್ಷೀಯ ಸಂಬಂಧಗಳು ಪ್ರಗತಿಯಾಗಬೇಕಾದರೆ ಗಡಿಯಲ್ಲಿ ಶಾಂತಿ ಅಗತ್ಯ ಎಂದು ಭಾರತ ಪ್ರತಿಪಾದಿಸುತ್ತಿದೆ. ಗಡಿ ವಿವಾದವನ್ನು ಬಗೆಹರಿಸುವಲ್ಲಿ ಭಾರತವು ಚೀನಾ ಸೇನೆ ಹಿಂತೆಗೆತಕ್ಕೆ ಈ ಹಿಂದೆ ಹಲವು ಬಾರಿ ಮಾತನಾಡಿದೆ. ಆದರೆ, ಚೀನಾ ಯಾವುದೇ ಕ್ರಮ ಕೈಗೊಂಡಿಲ್ಲ. 14ನೇ ಕಾರ್ಪ್ಸ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್ ಗುಪ್ತಾ ಮತ್ತು ಚೀನಾದ ಮೇಜರ್ ಜನರಲ್ ಯಾಂಗ್ ಲಿನ್ ಮಧ್ಯೆ ನಡೆಯುತ್ತಿರುವ ಸಭೆಯಲ್ಲಿ ಮೂರು ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆಯಿದೆ.
ಇವುಗಳಲ್ಲಿ ಪಿಪಿ15 ಮೊದಲನೇಯದಾಗಿದ್ದು, ಡೆಪ್ಸಾಂಗ್ ಎರಡನೇಯದು ಹಾಗೂ ಡೆಮ್ಚೋಕ್ ಮೂರನೇಯದ್ದಾಗಿದೆ. ಪಿಪಿ 15 ಭಾರತೀಯ ಸೇನೆಯು 2020 ವರೆಗೆ ಗಸ್ತು ತಿರುಗುತ್ತಿದ್ದ ಸ್ಥಳವಾಗಿದೆ. ಇದರೊಂದಿಗೆ ಯಥಾಸ್ಥಿತಿ ಸ್ಥಾಪಿಸಲು ಭಾರತವು ಚೀನಾದ ಮೇಲೆ ಒತ್ತಡ ಹೇರಬಹುದು. ಡೆಮ್ಚೋಕ್ ನಾಳೆ ಬಳಿ ಚೀನಾದ ಸೈನಿಕರು 2018ರಿಂದ ಮೂರು ಟೆಂಟ್ ಹಾಕಿದ್ದಾರೆ. ಇದು ನಾಲೆಯಿಂದ ಕೇವಲ 200 ಮೀಟರ್ ದೂರದಲ್ಲಿದೆ. ಈ ಡೇರೆಗಳನ್ನು ತೆಗೆಯುವಂತೆ ಭಾರತ ಆಗ್ರಹಿಸುತ್ತಿದೆ.