ನವದೆಹಲಿ :ಹದಿನೇಳು ವರ್ಷಗಳ ಹಿಂದೆ ಕಪ್ಪು ಹಣ ಬಿಳುಪು ತಡೆ ಕಾಯ್ದೆಯು ಅನುಷ್ಠಾನಗೊಂಡ ಬಳಿಕ ಜಾರಿ ನಿರ್ದೇಶನಾಲಯವು 5422 ಪ್ರಕರಣಗಳಲ್ಲಿ ಕೇವಲ 23 ಮಂದಿಯನ್ನು ಮಾತ್ರವೇ ದೋಷಿಗಳೆಂದು ಪರಿಗಣಿಸಿತ್ತೆಂದು ಕೇಂದ್ರ ಸರಕಾರವು ಸೋಮವಾರ ಲೋಕಸಭೆಗೆ ತಿಳಿಸಿದೆ.
2020-21ನೇ ಸಾಲಿನಲ್ಲಿ 1,180 ಪ್ರಕರಣಗಳು ದಾಖಲಾಗಿದ್ದು, ಇದು ಕಳೆದ ಹತ್ತು ವರ್ಷಗಳಲ್ಲೇ ಅತ್ಯಧಿಕವೆಂದು ಕೇಂದ್ರ ಸಹಾಯಕ ವಿತ್ತ ಸಚಿವ ಪಂಕಜ್ ಚೌಧರಿ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
''2022ರ ಮಾರ್ಚ್ 31ರ ತನಕ ಜಾರಿ ನಿರ್ದೇಶನಾಲಯವು 5422 ಪ್ರಕರಣಗಳನ್ನು ಕಪ್ಪುಹಣ ಬಿಳುಪು ತಡೆ ಕಾಯ್ದೆಯಡಿ ದಾಖಲಿಸಿಕೊಂಡಿದ್ದು, ಅಂದಾಜು 1,04,702 ಕೋಟಿ ರೂ. ವೌಲ್ಯದ ಹಣವನ್ನು ಮುಟ್ಟುಗೋಲು ಹಾಕಿದೆ ಹಾಗೂ 992 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿಯನ್ನು ದಾಖಲಿಸಿದೆ ಮತ್ತು 869.31 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ ಹಾಗೂ 23 ಮಂದಿಯನ್ನು ದೋಷಿಗಳೆಂದು ಪರಿಗಣಿಸಿರುವುದಾಗಿ ಚೌಧರಿ ಸದನಕ್ಕೆ ತಿಳಿಸಿದರು.
ಈ ವರ್ಷದ ಮಾರ್ಚ್ 31ರವರೆಗೆ ಏಜೆನ್ಸಿಯು 30,716 ಪ್ರಕರಣಗಳನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ದಾಖಲಿಸಲಾಗಿದ್ದು, ಇವುಗಳಿಗೆ ಸಂಬಂಧಿಸಿ 8109 ಶೋಕಾಸ್ ನೋಟಿಸ್ಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರಕಾರ ಲೋಕಸಭೆಗೆ ಅಂಕಿಅಂಶಗಳನ್ನು ನೀಡಿದೆ.
ಕಪ್ವುಹಣ ಬಿಳುಪು ತಡೆ ಕಾಯ್ದೆ (ಪಿಎಂಎಲ್‌ಎ)ಯನ್ನು2002ರಲ್ಲಿ ರೂಪಿಸಲಾಗಿದ್ದು,2005ರಲ್ಲಿ ಜಾರಿಗೆ ತರಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದಕದ್ರವ್ಯ ಹಾಗೂ ಅಮಲುಪದಾರ್ಥಗಳ ಅಕ್ರಮ ವಹಿವಾಟಿನಿಂದ ಹರಿದುಬರುವ ಕಪ್ಪುಹಣವನ್ನು ಬಿಳುಪುಗೊಳಿಸುವ ದಂಧೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಆದಾಗ್ಯೂ ಕಳೆದ ಕೆಲವು ವರ್ಷಗಳಿಂದ ಈ ಕಾಯ್ದೆಗೆೆ ತಿದ್ದುಪಡಿಗಳನ್ನು ಮಾಡುವ ಮೂಲಕ ಹಲವಾರು ಅಪರಾಧ ಕೃತ್ಯಗಳನ್ನು ಅದರವ್ಯಾಪ್ತಿಗೆ ತರಲಾಗಿದೆ. ಇದರಿಂದಾಗಿ ಈ ಕಾಯ್ದೆಯಡಿ ಕಾನೂನು ಕ್ರಮಗಳನ್ನು ಕೈಗೊಳ್ಳಲು ಜಾರಿ ನಿರ್ದೇಶನಾಲಯಕ್ಕೆ ಇರುವ ಅಧಿಕಾರದ ವ್ಯಾಪ್ತಿಯು ಹೆಚ್ಚಿದೆ.
ಹಕ್ಕುಪ್ರತಿಗಳ ಕಾಯ್ದೆ ಉಲ್ಲಂಘನೆ ಹಾಗೂ ನಕಲಿ ಟ್ರೇಡ್ ಮಾರ್ಕ್ ಗಳ ಅಳವಡಿಕೆಯಂತಹ ಕಡಿಮೆ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಕೂಡಾ ಈ ಅಪರಾಧ ಕಾಯ್ದೆಯ ವ್ಯಾಪ್ತಿಗೆ ತರಬೇಕೆಂದು ಕೆಲವು ನ್ಯಾಯವಾದಿಗಳು ಆಗ್ರಹಿಸಿದ್ದಾರೆ.