HEALTH TIPS

ಕನ್ನಡ ಪತ್ರಿಕೋದ್ಯಮ: 179 ವರ್ಷಗಳ ಸುಧೀರ್ಘ ಪಯಣ: ಪರಿಚಯ

 : ಕರ್ನಾಟಕದ ಪತ್ರಿಕೋದ್ಯಮಕ್ಕೆ 179 ವರ್ಷಗಳ ದೀರ್ಘ ಇತಿಹಾಸವಿದೆ. ಈ ಇತಿಹಾಸ ವಾರ್ತಾಪತ್ರಿಕೆ ಮತ್ತು ನಿಯತ ಕಾಲಿಕೆಗಳ ಬರೆವಣಿಗೆ, ಸಂಪಾದನೆ ಮತ್ತು ಪ್ರಕಟಣೆ ಅಲ್ಲದೆ, ಸುದ್ದಿ ಸಂಗ್ರಹಣ, ಪ್ರಸಾರಣ, ಪತ್ರಿಕೆಗಳ ನಿರ್ವಹಣ, ಜಾಹೀರಾತು ಮುಂತಾದ ಚಟುವಟಿಕೆಗಳನ್ನೆಲ್ಲ ಒಳಗೊಂಡಿದೆ. ಪ್ರಥಮದಲ್ಲಿ ಧರ್ಮಪ್ರಚಾರ, ಅನಂತರ ಕನ್ನಡ ನಾಡು ಮತ್ತು ನುಡಿಯ ಏಳ್ಗೆ-ಈ ಉದ್ದೇಶಗಳನ್ನಿಟ್ಟುಕೊಂಡು ಪತ್ರಿಕೆಗಳು ಪ್ರಾರಂಭವಾದುವು. ಬಹುತೇಕ ಪತ್ರಿಕೆಗಳು ಕನ್ನಡ ನವೋದಯದ ಕಾಲದಲ್ಲಿ ಊರ್ಜಿತಗೊಂಡು, ರಾಷ್ಟ್ರಬಿಡುಗಡೆಯ ಮತ್ತು ಜವಾಬ್ದಾರಿ ಸರ್ಕಾರದ ಸ್ಥಾಪನೆಯ ಕಾಲದಲ್ಲಿ ಜನರಲ್ಲಿ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಲು ಚಲದಿಂದ ನಡೆದು ಹೋರಾಟದ ಬದುಕನ್ನು ನಡೆಸಿದುವು. ಎರಡನೆಯ ಮಹಾಯುದ್ಧಾನಂತರ ಕಾಲದಲ್ಲಿ ಕರ್ನಾಟಕದ ಪತ್ರಿಕೋದ್ಯಮ ಬೃಹತ್ತಾಗಿ ಬೆಳೆದಿದೆ. ಕರ್ನಾಟಕದ ಪತ್ರಿಕೆಗಳು ಭಾರತದ ಇತರ ಭಾಷೆಗಳ ಪತ್ರಿಕೆಗಳಂತೆಯೇ ಇಲ್ಲಿಯ ಜನಜೀವನದ ವಿವಿಧ ಮುಖಗಳ ಪ್ರತಿಬಿಂಬವಾಗಿವೆ. ಈಗ ನಮಗಿರುವ ಆಧಾರಗಳ ಪ್ರಕಾರ ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ. ಇದು ಪ್ರಕಟವಾದುದು 1843 ಜುಲೈ 1ರಂದು. ಮಂಗಳೂರಿನಲ್ಲಿ ಜನಸೇವೆಯಲ್ಲಿ ತೊಡಗಿದ್ದ ಬಾಸೆಲ್ ಮಿಶನ್ನಿನ ಪಾದ್ರಿ ಹರ್ಮನ್ ಮೋಗ್ಲಿಂಗ್ ಈ ಪತ್ರಿಕೆಯ ಸಂಪಾದಕ ಹಾಗೂ ಕನ್ನಡ ಪತ್ರಿಕೋದ್ಯಮದ ಆದ್ಯ ಪ್ರವರ್ತಕ. ಈತ ಭಾರತಕ್ಕೆ ಬಂದುದು 1836ರಲ್ಲಿ ಮಂಗಳೂರಿಗೆ ಬಂದ ಬಳಿಕ ಮಂಗಳೂರು ಸಮಾಚಾರ 1844ರ ಹೊತ್ತಿಗೆ ಬಳ್ಳಾರಿಗೆ ವರ್ಗಾವಣೆಗೊಂಡಿತು. ಅಲ್ಲಿ ಕನ್ನಡ ಸಮಾಚಾರ (ನೋಡಿ) ಎಂದು ಹೆಸರು ಬದಲಿಸಿಕೊಂಡಿತು. ಎರಡು ವರ್ಷಗಳ ಬಳಿಕ ವಾಪಸ್ಸು ಮಂಗಳೂರಿಗೇ ಬಂದು ಕೆಲಕಾಲ ಮುಂದುವರಿಯಿತು.

ಮಂಗಳೂರ ಸಮಾಚಾರ ಕಲ್ಲಚ್ಚಿನಲ್ಲಿ ಮುದ್ರಣಗೊಳ್ಳುತ್ತಿತ್ತು. ನಾಲ್ಕು ಪುಟಗಳ ಈ ಪತ್ರಿಕೆಯ ಬೆಲೆ ಕೇವಲ ಒಂದು ದುಡ್ಡು. ಅದರಲ್ಲಿ ಅಂಚೆ ವೆಚ್ಚವೂ ಸೇರಿತ್ತು. ಪತ್ರಿಕೆಯ ಒಡೆತನ ಬಾಸೆಲ್ ಮಿಸಶನ್ನಿಗೆ ಸೇರಿದ್ದೆಂದು ಹೇಳಲಾಗಿದೆ. ಆದರೆ ಎಲ್ಲಿಯೂ ಅದರ ಉಲ್ಲೇಖವಿಲ್ಲ. ಹಾಗೆಯೇ ಕ್ರೈಸ್ತಧರ್ಮ ಪ್ರಸಾರಕ್ಕಾಗಿ ಈ ಪತ್ರಿಕೆಯನ್ನು ಮೋಗ್ಲಿಂಗ್ ಬಳಸಿಕೊಳ್ಳಲಿಲ್ಲ ಎಂಬುದು ಗಮನಿಸಬೇಕಾದ ವಿಚಾರ. ಹೀಗೆ ಆರಂಭವಾದ ಕನ್ನಡ ಪತ್ರಿಕೋದ್ಯಮ ದೇಶದ ಇತರ ಭಾಷಾ ಪತ್ರಿಕೆಗಳಲ್ಲಿ ಆದಂತೆ ಕನ್ನಡ ಪತ್ರಿಕೋದ್ಯಮವೂ ಆರಂಭಿಕ ತೊಂದರೆಗಳನ್ನು ದಾಟಿ ಬಂದು ಈಗ ಪ್ರೌಢಾವಸ್ಥೆ ತಲಪಿದೆ. ಪತ್ರಿಕೋದ್ಯಮದ ಮುಖ್ಯ ಕವಲಾದ ದಿನಪತ್ರಿಕೆಗಳೂ ನಿಯತಕಾಲಿಕೆಗಳೂ ಈ ಅವಧಿಯಲ್ಲಿ ಕನ್ನಡದಲ್ಲಿ ಹುಲುಸಾಗಿ ಬೆಳೆದಿವೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರ ಸಮಾಚಾರ ಪಾಕ್ಷಿಕವಾಗಿದ್ದರೆ 1849ರಲ್ಲಿ ಆರಂಭಗೊಂಡಿದ್ದ ಸುಬುದ್ಧಿ ಪ್ರಕಾಶವನ್ನು ಮೊದಲ ವಾರ ಪತ್ರಿಕೆಯೆಂದು ಗುರುತಿಸಲಾಗಿದೆ. ಅದು ಬೆಳಗಾಂವಿಯಿಂದ ಪ್ರಕಟವಾಗುತ್ತಿತ್ತು. ಕಲ್ಲಚ್ಚಿನಲ್ಲಿ ಮುದ್ರಿಸಲಾಗುತ್ತಿತ್ತು. ಕಾನರೀಸ್ ವರ್ನಾಕ್ಯುಲರ್ ಸೊಸೈಟಿಯ ಆಶ್ರಯದಲ್ಲಿ ವೆಂಕಟರಂಗೋ ಕಟ್ಟಿಯವರು 1861ರ ನವೆಂಬರ್ ತಿಂಗಳಿನಲ್ಲಿ ಹೊರಡಿಸಿದ ಕನ್ನಡ ಜ್ಞಾನಬೋಧಕ ಮೊದಲು ವಾರಪತ್ರಿಕೆಯೂ ಅನಂತರ ಮಾಸಿಕವೂ ಆಗಿತ್ತು. 1862ರಲ್ಲಿ ಬಿ.ಎಚ್.ರೈಸ್ ಬೆಂಗಳೂರಿನಲ್ಲಿ ಆರಂಭಿಸಿ 1868ರ ವರೆಗೆ ನಡೆಸಿದ ಅರುಣೋದಯ ಕನ್ನಡದ ಆದ್ಯ ಮಾಸಪತ್ರಿಕೆಗಳಲ್ಲಿ ಒಂದು.

19ನೆಯ ಶತಮಾನದಲ್ಲಿ ಪ್ರಕಟಗೊಂಡ ಕನ್ನಡ ಪತ್ರಿಕೆಗಳು ನೂರಕ್ಕಿಂತ ಕಡಿಮೆ. ಅವುಗಳಲ್ಲಿ ಮೂರ್ನಾಲ್ಕು ದಿನಪತ್ರಿಕೆಗಳನ್ನು ಬಿಟ್ಟರೆ ಉಳಿದವುಗಳೆಲ್ಲ ನಿಯತಕಾಲಿಕೆಗಳು. ಧಾರ್ಮಿಕ ವಿಷಯಗಳು, ಕನ್ನಡ ಕಾವ್ಯಗಳು, ರಾಜಕಾರಣ, ಸೃಜನಶೀಲ ಸಾಹಿತ್ಯ ಅಂದಿನ ಪತ್ರಿಕೆಗಳ ಆಸಕ್ತಿಯ ಕ್ಷೇತ್ರಗಳಾಗಿದ್ದುವು.

19ನೆಯ ಶತಮಾನದಲ್ಲಿ ಪ್ರಕಟಗೊಂಡ ಶೈಕ್ಷಣಿಕ ಆಸಕ್ತಿಯ ಪತ್ರಿಕೆಗಳ ಪೈಕಿ ಹೆಸರಿಸಬೇಕಾದುದು ಕನ್ನಡ ಶಾಲಾ ಪತ್ರಿಕೆ. 1865ರಲ್ಲಿ ಬೆಳಗಾಂವಿಯಲ್ಲಿ ಮಠಪತ್ರಿಕೆ ಎಂಬ ಹೆಸರಿನಿಂದ ಈ ಪತ್ರಿಕೆ ಹೊರಟಿತು. 1867ರ ಏಪ್ರಿಲ್ನಲ್ಲಿ ಅದು ಶಾಲಾ ಪತ್ರಿಕೆ ಎಂದು ಪುನರ್ನಾಮಕರಣಗೊಂಡಿತು. ಬೆಳಗಾಂವಿಯಿಂದ ಧಾರವಾಡದ ಟೀಚರ್ಸ್ ಟ್ರೇನಿಂಗ್ ಕಾಲೇಜಿಗೆ ಅದರ ಒಡೆತನ ವರ್ಗಾವಣೆಗೊಂಡಿತು. 1871ರಲ್ಲಿ ಅದನ್ನು ಕನ್ನಡ ಶಾಲಾಪತ್ರಿಕೆ ಎಂದು ಕರೆಯಲಾಯಿತು. ಜೀವನ ಶಿಕ್ಷಣ ಎಂಬ ಹೆಸರಿನಿಂದ ಮುಂದುವರಿದ ಈ ಪತ್ರಿಕೆಗೆ 136 ವರ್ಷಗಳ ಇತಿಹಾಸವಿದೆ. ಕನ್ನಡದಲ್ಲಿ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳಲ್ಲೆಲ್ಲ ಇದು ಹಿರಿಯದಾಗಿದೆ. ಶಿಕ್ಷಣಾಧಿಕಾರಿಯಾಗಿದ್ದ ಡೆಪ್ಯುಟಿ ಚನ್ನಬಸಪ್ಪ (ನೋಡಿ) ಆರಂಭ ಕಾಲದಲ್ಲಿ ಈ ಪತ್ರಿಕೆಯ ಬೆನ್ನೆಲುಬಾಗಿ ಬೆಳೆಸಿದರು.

ರಾಜ್ಯಪತ್ರವಾಗಿ ಪ್ರಕಟಗೊಳ್ಳುತ್ತಿರುವ ಕರ್ನಾಟಕ ಸರ್ಕಾರದ ಗೆಜೆಟ್ 19ನೆಯ ಶತಮಾನದಲ್ಲೇ ಆರಂಭಗೊಂಡು ಇನ್ನೂ ಮುಂದುವರೆದಿರುವ ಮತ್ತೊಂದು ಪತ್ರಿಕೆ. ಈಗ ರಾಜ್ಯ ಪತ್ರ ಸರ್ಕಾರದ ಅಧಿಕೃತ ಸೂಚನಾ ಪತ್ರಗಳನ್ನು ಪ್ರಕಟಿಸುವುದಕ್ಕಷ್ಟೇ ಸೀಮಿತವಾಗಿದೆ. ಈಗಿನ ರಾಜ್ಯಪತ್ರದ ಪುರ್ವರೂಪ ಮೈಸೂರು ಗೆಜೆಟ್, 1866 ಏಪ್ರಿಲ್ 7ರಂದು ಮೊದಲು ಪ್ರಕಟಗೊಂಡಿತು.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ವೆಂಕಟರಂಗೋಕಟ್ಟಿಯವರ ಪತ್ರಿಕಾ ಸಾಧನೆಯೂ ವಿಶೇಷ ಉಲ್ಲೇಖನೀಯ. ಜನರಲ್ಲಿ, ಮುಖ್ಯವಾಗಿ ಮಕ್ಕಳಲ್ಲಿ ಜ್ಞಾನ ಪ್ರಸಾರ ಮಾಡುವುದು, ಓದುವ ಹವ್ಯಾಸ ಹೆಚ್ಚಿಸುವುದು ಇವರ ಉದ್ದೇಶವಾಗಿತ್ತು. ಶೋಧಕ ಎಂಬ ಮಾಸಪತ್ರಿಕೆಯನ್ನು ಇವರು 1875-78ರ ವರೆಗೆ ನಡೆಸಿದರು. ಮೊದಲು ಬೆಳಗಾಂವಿಯಿಂದ ಪತ್ರಿಕೆ ಪ್ರಕಟವಾಗುತ್ತಿತ್ತು. ಅನಂತರ ಧಾರವಾಡದಿಂದ ಲೋಕಶಿಕ್ಷಕ ಎಂಬ ಇನ್ನೊಂದು ಪತ್ರಿಕೆಯನ್ನೂ ಪ್ರಾರಂಭಿಸಿದರು (1888).

19ನೆಯ ಶತಮಾನದ ಅಂತಿಮ ಚರಣದಲ್ಲಿ ಮೈಸೂರು ಭಾಗದ ಪತ್ರಿಕೋದ್ಯಮದ ನಾಯಕತ್ವ ವಹಿಸಿದವರು ಎಂ. ವೆಂಕಟಕೃಷ್ಣಯ್ಯ (ನೋಡಿ). ಇವರ ಸಾರ್ವಜನಿಕ ಸೇವೆಯ ಹಲವು ಮುಖಗಳಲ್ಲಿ ಪತ್ರಿಕೋದ್ಯಮವೂ ಒಂದಾಗಿತ್ತು. ತಾತಯ್ಯ ಎಂದೇ ಖ್ಯಾತರಾಗಿದ್ದ ಇವರು ಒಂದು ಸಂಸ್ಥೆಯ ರೀತಿ ಬೆಳೆದು ಹಲವು ಪತ್ರಿಕೆಗಳ ಸ್ಥಾಪಕರಾಗಿ, ಮೈಸೂರಿನ ಸಾರ್ವಜನಿಕ ಜೀವನಕ್ಕೆ ಹೇಗೋ ಪತ್ರಿಕೋದ್ಯ ಮಕ್ಕೂ ಆಧಾರಸ್ತಂಭ ವಾಗಿದ್ದರು.

ಹಿತಬೋಧಿನಿ ಮಾಸಪತ್ರಿಕೆಯ ಮೂಲಕ ಇವರು ಪತ್ರಿಕಾರಂಗ ಪ್ರವೇಶಿಸಿದರು. ಹಿತಬೋಧಿನಿ 1883ರಲ್ಲಿ ಆರಂಭಗೊಂಡು 1890ರ ವರೆಗೆ ನಡೆದು ಬಂತು. ಈ ಪತ್ರಿಕೆ ಆ ಕಾಲದಲ್ಲಿ ಅಪಾರ ಜನಮನ್ನೆಣೆ ಗಳಿಸಿತ್ತು ಎನ್ನಲಾಗಿದೆ. ವೃತ್ತಾಂತ ಚಿಂತಾಮಣಿ (1885) ಇವರ ಇನ್ನೊಂದು ಜನಪ್ರಿಯ ಪತ್ರಿಕೆ. ತೀಕ್ಷ್ಣ ಸಂಪಾದಕೀಯಗಳಿಂದ ಆಡಳಿತಗಾರರಿಗೆ ಈ ಪತ್ರಿಕೆ ಚುರುಕು ಮುಟ್ಟಿಸುತ್ತಿತ್ತು. ಮೈಸೂರು ಹೆರಾಲ್ಡ್‌ ಎಂಬ ಪತ್ರಿಕೆಯನ್ನು 1886ರಲ್ಲೂ ವೆಲ್ತ್‌ ಆಫ್ ಮೈಸೂರು ಎಂಬುದನ್ನು 1912ರಲ್ಲೂ ಸಂಪಾದಿಸಿ ಪ್ರಕಟಿಸಿದ ಖ್ಯಾತಿ ತಾತಯ್ಯ ನವರದು. ಇದಲ್ಲದೆ ಇವರ ಪತ್ರಿಕಾ ಸಾಹಸದ ಸಾಲಿಗೆ ಸೇರಬೇಕಾದ ಇತರ ಪತ್ರಿಕೆಗಳೆಂದರೆ ಸಂಪದಭ್ಯುದಯ (ಕನ್ನಡ ದಿನಪತ್ರಿಕೆ 1912), ನೇಚರ್ ಕ್ಯೂರ್ (ಇಂಗ್ಲಿಷ್ ದಿನಪತ್ರಿಕೆ) ಮತ್ತು ಸಾಧ್ವಿ (1899). ಸಾಧ್ವಿ (ನೋಡಿ) ಮೊದಲು ವಾರಪತ್ರಿಕೆಯಾಗಿ ಆರಂಭಗೊಂಡು ಅನಂತರ ದಿನಪತ್ರಿಕೆಯಾಗಿ ಬೆಳೆದು ಬಂದು, ವೆಂಕಟಕೃಷ್ಣಯ್ಯನವರ ಶಿಷ್ಯ ಅಗರಂರಂಗಯ್ಯನವರ ಸಂಪಾದಕತ್ವದಲ್ಲಿ ಈ ಪತ್ರಿಕೆ ಶತಮಾನದ ಸನಿಹ ಬದುಕಿತು. ಒಂದು ಕಾಲದಲ್ಲಿ ಮೈಸೂರಿನ ಜನಪ್ರಿಯ ಪತ್ರಿಕೆ ಗಳಲ್ಲೊಂದಾಗಿತ್ತು. ಅಗರಂ ರಂಗಯ್ಯನವರ ಕಾಲಾನಂತರ ಕೆಲಕಾಲ ನಿಂತುಹೋಗಿದ್ದ ಸಾಧ್ವಿ ಈಗ ಹೊಸ ಮಾಲೀಕತ್ವದಲ್ಲಿ ಮುಂದುವರಿದಿದೆ.

ಕನ್ನಡದಲ್ಲಿ ಪತ್ರಿಕಾ ಚಟುವಟಿಕೆಗಳು ಗರಿ ಕೆದರಿದಂತೆಲ್ಲ ಮೂರು ಮುಖ್ಯ ಪ್ರಾದೇಶಿಕ ಕೇಂದ್ರಗಳು ಪತ್ರಿಕೆಯ ದೃಷ್ಟಿಯಿಂದ ಹುಟ್ಟಿಕೊಂಡುವು. ಇವನ್ನು ಮಂಗಳೂರು, ಮೈಸೂರು ಹಾಗೂ ಧಾರಾವಾಡ ವಿಭಾಗಗಳೆಂದು ಪರಿಗಣಿಸಬಹುದು. ನಿಜಾಮರ ಆಳ್ವಿಕೆಯಲ್ಲಿದ್ದ ಹೈದರಾಬಾದು ಕರ್ನಾಟಕ ಭಾಗದಲ್ಲಿ ಕನ್ನಡ ಪತ್ರಿಕಾ ಚಟುವಟಿಕೆಗಳಿಗೆ ಪ್ರೋತ್ಸಾಹವಿರ ಲಿಲ್ಲ. ಕರ್ಕಿ ಸೂರಿ ವೆಂಕಟರಮಣಶಾಸ್ತ್ರಿ (ನೋಡಿ) ಆ ಕಾಲದಲ್ಲೇ ಮುಂಬಯಿಗೆ ತೆರಳಿ 1885ರಲ್ಲಿ ಹವ್ಯಕ ಕಾರವಾರ ಚಂದ್ರಿಕ ಎಂಬ ಸಾಪ್ತಾಹಿಕವನ್ನು ಆರಂಭಿಸಿದ್ದು ಹಾಗೂ ಅದು ಆಗ ಮುಂಬಯಿ ಪ್ರಾಂತ್ಯಕ್ಕೆ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯಲ್ಲೂ ಜನಪ್ರಿಯವಾಗಿದ್ದು ಉಲ್ಲೇಖನೀಯ. ಈ ಪತ್ರಿಕೆ ನಾಲ್ಕು ವರ್ಷ ಬಾಳಿತು. ಹಿತೋಪದೇಶ ಎಂಬ ಮಾಸಿಕವನ್ನೂ ಇವರು ಕೆಲಕಾಲ ನಡೆಸಿದರು. ಮಕ್ಕಳಿಗಾಗಿಯೂ ವಿಶೇಷ ಪತ್ರಿಕೆ ನಡೆಸಿದರು.

19ನೆಯ ಶತಮಾನದಲ್ಲಿ ಕನ್ನಡದಲ್ಲಿ ಪ್ರಕಟವಾದುದು ಬಹುಪಾಲು ನಿಯತಕಾಲಿಕೆಗಳೇ ಆದರೂ ಶತಮಾನದ ಕೊನೆಯ ಘಟ್ಟಗಳಲ್ಲಿ ದಿನಪತ್ರಿಕೋದ್ಯಮ ಕಾಲಿರಿಸುವುದನ್ನು ಕಾಣುತ್ತೇವೆ. ಪ್ರಪ್ರಥಮ ಕನ್ನಡ ದಿನಪತ್ರಿಕೆಯೆಂದು ಗುರುತಿಸಲಾಗಿರುವ ಸೂರ್ಯೋದಯ ಪ್ರಕಾಶಿಕ ಪ್ರಕಟಗೊಂಡಿದ್ದು 1888ರಲ್ಲಿ. ಈ ಪತ್ರಿಕೆಯ ಸ್ಥಾಪಕರು ಮೈಸೂರಿನ ಬಿ.ನರಸಿಂಗರಾವ್.

19ನೆಯ ಶತಮಾನದ ಅಂತ್ಯಕ್ಕೆ ಕನ್ನಡ ಪತ್ರಿಕಾ ಲೋಕ ಬಿರುಸಿನಿಂದ ಮುನ್ನಡೆಯು ತ್ತಿದ್ದುದನ್ನು ಕಾಣುತ್ತೇವೆ. ಸುದ್ದಿಯ ವಾಹಕಗಳಾದ ದಿನಪತ್ರಿಕೆಗಳು, ಮನರಂಜನೆ ಮೂಲವಾದ ನಿಯತಕಾಲಿಕೆಗಳು ಪ್ರತ್ಯೇಕ ಕವಲಾಗಿ ಬೆಳೆಯಲಾಂಭಿಸಿದುವು. ಹಾಗೆಯೇ ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಹೊರಡಿಸಲಾಗುವ ಪತ್ರಿಕೆಗಳ ಜೊತೆ, ಘೋಷಿಸಿಕೊಂಡ ವಿಶೇಷ ಆಸಕ್ತಿಗಳನ್ನೇ ಪೋಷಿಸುವ ವಿಶೇಷಾಸಕ್ತಿ ನಿಯತಕಾಲಿಕೆಗಳೂ ಚಲಾವಣೆಯಲ್ಲಿವೆ. 1860ರ ದಶಕದಲ್ಲೇ ಮಂಗಳೂರಿ ನಿಂದ ಉಭಯ ಗೊಪಾಲಕೃಷ್ಣ ಎಂಬವರು ಪ್ರಕಟಿಸಿದ ನ್ಯಾಯಸಂಗ್ರಹ ಎಂಬುದು ವಿಶೇಷಾಸಕ್ತಿ ನಿಯತಕಾಲಿಕ ಪ್ರತ್ಯೇಕ ಕವಲೊಡೆದುದಕ್ಕೆ ಸೂಚನೆ. ಇಂದಿನ ಜನಪ್ರಿಯ ನಿಯತಕಾಲಿಕೆಗಳಲ್ಲಿ ಕಂಡುಬರುವ ಕಥೆ, ಕವನ, ಪ್ರಬಂಧ, ಲೇಖನ, ವಿಜ್ಞಾನ, ರಾಜಕೀಯ ಮುಂತಾಗಿ ಎಲ್ಲ ವರ್ಗಗಳ ಆಸಕ್ತಿ ಗಮನ ದಲ್ಲಿರಿಸಿಕೊಂಡು ಓದುವ ಸಾಮಗ್ರಿಗಳನ್ನು ನೀಡುವ ಪತ್ರಿಕೆಗಳು ನೀಡುವ ಪತ್ರಿಕೆಗಳು ಆಗಲೂ ಇದ್ದುವು. ಕಾವ್ಯಕ್ಕೆ, ಸಾಹಿತ್ಯಕ್ಕೆ, ಧರ್ಮಕ್ಕೆ ಮುಂತಾಗಿ ಸೀಮಿತ ಆಸಕ್ತಿಯನ್ನು ಮಾತ್ರ ಪೋಷಿಸುವ ಪತ್ರಿಕೆಗಳೂ ಬಂದುವು. ಕನ್ನಡದ ಮೊದಲ ಸಾಹಿತ್ಯ ಪತ್ರಿಕೆಯೆಂದು ಗುರುತಿಸಬಹುದಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಗ್ಭೂಷಣ (ನೋಡಿ) ಮಾಸಪತ್ರಿಕೆ 1896ರಿಂದ ಪ್ರಕಟಣೆ ಆರಂಭಿಸಿತ್ತು. ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 1843-1900 ರ ವರೆಗಿನದು ಆರಂಭಿಕ ಘಟ್ಟ. ಕನ್ನಡಕ್ಕೆ ಆಗಿನ್ನೂ ಪತ್ರಿಕೆ ಹೊಸ ಸರಕು; ಹೊಸ ಮಾಧ್ಯಮ 1901-1950 ರವರೆಗಿನದು ಎರಡನೆಯ ಹಂತ. ಇದು ಬೆಳೆವಣೆಗೆಯ ಕಾಲ. ಹೋರಾಟದ ಕಾಲವೂ ಹೌದು. ಇಡೀ ದೇಶಕ್ಕೆ ದೇಶದ ಎಲ್ಲ ಕ್ಷೇತ್ರಗಳಿಗೆ ಈ ಅವಧಿ ಹೋರಾಟದ ಕಾಲ. ತನ್ನ ಅಸ್ತಿತ್ವವನ್ನು ಸಾಬೀತುಪಡಿಸಬೇಕಾದ ಕಾಲ. ಪತ್ರಿಕೋದ್ಯಮ ಇದಕ್ಕೆ ಹೊರತಾಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಒತ್ತು ನೀಡುವ, ಕನ್ನಡ ರಾಜ್ಯವನ್ನು ಸ್ಥಾಪಿಸುವ, ಹೋರಾಟದ ಜೊತೆ ತನ್ನ ಕಾಲ ಮೇಲೆ ತಾನು ನಿಲ್ಲಲು ಪತ್ರಿಕೆಗಳು ಹೋರಾಡಿದ ಕಾಲ 20ನೆಯ ಶತಮಾನದ ಮೊದಲರ್ಧದ್ದು.

ಕನ್ನಡ ಪತ್ರಿಕೆಗಳ ದೃಷ್ಟಿಯಿಂದ 20ನೆಯ ಶತಮಾನದ ಆರಂಭ ಕಾಲ ಮೈಸೂರು ಸಂಸ್ಥಾನದ ವ್ಯಾಪ್ತಿಯ ಪತ್ರಿಕೆಗಳಿಗೆ ಉತ್ತೇಜಕವಾದ ಕಾಲವಾಗಿರಲಿಲ್ಲ. ದಿವಾನ್ ರಂಗಾಚಾರ್ಲು ಅವರ ತರುವಾಯ ಮೈಸೂರು ಸಂಸ್ಥಾನದ ದಿವಾನರಾದ ಕೆ. ಶೇಷಾದ್ರಿ ಅಯ್ಯರ್ ಪತ್ರಿಕೆಗಳ ಬಗ್ಗೆ ತೀವ್ರ ಅಸಹನೆ ಹೊಂದಿದವರಾಗಿದ್ದರು. ಅದೇ ಹೊತ್ತಿಗೆ ಚಾಮರಾಜ ಒಡೆಯರ್ ನಿಧನರಾಗಿ ಅಪ್ರಾಪ್ತ ವಯಸ್ಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಪಟ್ಟಕ್ಕೆ ಬಂದರು. ಇದು ದಿವಾನರ ಪ್ರಭುತ್ವವನ್ನು ಹೆಚ್ಚಿಸಿತ್ತು. ಶೇಷಾದ್ರಿ ಅಯ್ಯರ್ ಬಳಿಕ ದಿವಾನರಾಗಿ ಬಂದ ವಿ.ಪಿ. ಮಾಧವರಾಯರು ಪತ್ರಿಕೆಗಳ ಮೇಲೆ ಕೆಂಗಣ್ಣು ಬೀರಿದರು. ಇವರ ಅನಂತರ ಬಂದ ದಿವಾನ್ ಪಿ.ಎನ್. ಕೃಷ್ಣಮೂರ್ತಿಯವರಂತೂ ಮೈಸೂರು ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರತಿನಿಧಿಯನ್ನು ಪ್ರಜಾಪ್ರತಿನಿಧಿ ಸಭೆಯಿಂದ ಹೊರಗಟ್ಟಿ ಪತ್ರಿಕೆಗಳಿಗೆ ಪಾಠ ಕಲಿಸುವುದಾಗಿ ಎಚ್ಚರಿಸಿದ್ದರು. ನಿರಂತರವಾಗಿ ದಿವಾನರುಗಳ ದುರಾಗ್ರಹಕ್ಕೆ ತುತ್ತಾಗಿ ಪತ್ರಿಕೆಗಳು ಅನುಭವಿಸಿದ ಶಿಕ್ಷೆಯೆಂದರೆ 1908ರ ಮೈಸೂರು ಸಂಸ್ಥಾನದ ಪತ್ರಿಕಾ ಪ್ರತಿಬಂಧಕ ಶಾಸನ. ಈ ಶಾಸನಕ್ಕನುಗುಣವಾಗಿ ಮೈಸೂರ ಸಂಸ್ಥಾನದಲ್ಲಿ ಪತ್ರಿಕೆ ಪ್ರಕಟಿಸುವವರು ಸರ್ಕಾರದ ಪುರ್ವಾನುಮತಿಯನ್ನು ಪಡೆಯಬೇಕಿತ್ತು. ಸರ್ಕಾರ ಯಾವ ಸಮಯದಲ್ಲಿ ಬೇಕಾದರೂ ಯಾವುದೇ ಪತ್ರಿಕೆಗೆ ನೀಡಿದ್ದ ಅನುಮತಿಯನ್ನು ವಾಪಸ್ಸು ಪಡೆಯಬಹುದಿತ್ತು. ಅನುಮತಿ ಪಡೆಯದೇ ಅಥವಾ ಅನುಮತಿ ರದ್ದಾದ ಬಳಿಕವೂ ಪತ್ರಿಕೆ ಹೊರಡಿಸುವವರು ಶಿಕ್ಷೆಗೆ ಗುರಿಯಾಗಬೇಕಿತ್ತು. ರಾಜ್ಯದಿಂದ ಅಂಥವರನ್ನು ಗಡಿಪಾರು ಮಾಡಲಿಕ್ಕೂ ಕಾನೂನಿನಲ್ಲಿ ಅವಕಾಶವಿತ್ತು. ಹೀಗೆ ಸರ್ಕಾರದ ದುರಾಗ್ರಹಕ್ಕೆ ತುತ್ತಾದವರಲ್ಲಿ ಕನ್ನಡ ನಡೆಗನ್ನಡಿ ಪತ್ರಿಕೆಯ ಸಂಪಾದಕರಾಗಿದ್ದ ಎಂ. ಗೋಪಾಲ ಅಯ್ಯಂಗಾರ್ ಮತ್ತು ಎಂ. ಶ್ರೀನಿವಾಸ ಅಯ್ಯಂಗಾರ್ ಸಹೋದರರನ್ನು ಹೆಸರಿಸಬೇಕು. 1895ರಲ್ಲೇ ಆರಂಭವಾಗಿದ್ದ ಇವರ ಪತ್ರಿಕೆ 1908ರ ಪತ್ರಿಕಾ ಶಾಸನಕ್ಕೆ ಪ್ರತೀಕಾರವಾಗಿ ಬೆಂಗಳೂರಿನಿಂದ ಅನಿವಾರ್ಯವಾಗಿ ಮದರಾಸಿಗೆ ವರ್ಗಾವಣೆಗೊಳ್ಳಬೇಕಾಯ್ತು. ಈ ಅವಧಿಯಲ್ಲಿ ಆದ ಸಾಮಾಜಿಕ ಸಂಘಟನೆಗಳ ಫಲವಾಗಿ ಕೆಲವು ಸಮುದಾಯಗಳು ತಮ್ಮ ಮುಖವಾಣಿಯಾಗಿ ಪತ್ರಿಕೆಗಳನ್ನು ಹೊರತಂದವು. ಅವುಗಳಲ್ಲಿ ಬೆಂಗಳೂರಿನಿಂದ ಒಕ್ಕಲಿಗರ ಸಂಘದವರು ಹೊರತಂದ ಒಕ್ಕಲಿಗರ ಪತ್ರಿಕೆ (1906) ನಗರದಲ್ಲಿ ಬೇಗ ಜನಪ್ರಿಯತೆ ಗಳಿಸಿತು.

ಕನ್ನಡದ ಹೆಸರಾಂತ ಲೇಖಕ ಡಿ.ವಿ. ಗುಂಡಪ್ಪ (ನೋಡಿ) ಭಾರತಿ ಎಂಬ ರಾಷ್ಟ್ರೀಯ ದಿನಪತ್ರಿಕೆಯನ್ನು 1907ರಲ್ಲಿ ಆರಂಭಿಸಿದರು. 1908ರ ಕರಾಳ ಪತ್ರಿಕಾ ಶಾಸನಕ್ಕೆ ಪ್ರತಿರೋಧವಾಗಿ ಭಾರತಿಯ ಪ್ರಕಟಣೆ ನಿಲ್ಲಿಸಿದರು. ವಿಶ್ವಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ತಿರುಮಲೆ ತಾತಾಚಾರ್ಯ ಶರ್ಮರು ತಮ್ಮ ಸಂಪಾದಕೀಯ ಅಂಕಣವನ್ನು ಖಾಲಿ ಬಿಡುವ ಮೂಲಕ ಶಾಸನಕ್ಕೆ ತಮ್ಮ ಪ್ರತಿಭಟನೆ ಸೂಚಿಸಿದರು. ವೆಂಕಟಕೃಷ್ಣಯ್ಯ ನವರೂ ತಮ್ಮ ಪ್ರಕಟಣೆಗಳನ್ನು ನಿಲ್ಲಿಸಿ ಈ ಶಾಸನಕ್ಕೆ ವಿರೋಧ ವ್ಯಕ್ತಪಡಿಸಿದರು. ಮುಂದೆ ಮೈಸೂರು ಸಂಸ್ಥಾನಕ್ಕೆ ಎಂ. ವಿಶ್ವೇಶ್ವರಯ್ಯ ದಿವಾನರಾಗಿ ಬಂದ ಬಳಿಕ ಪರಿಸ್ಥಿತಿ ಬದಲಾಯಿತು. ಇವರ ಕಾಲದಲ್ಲಿ ಶಾಸನಕ್ಕೆ ತಿದ್ದುಪಡಿ ಮಾಡ ಲಾಯಿತು. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಪುರ್ಣ ಗೌರವವಿದ್ದ ವಿಶ್ವೇಶ್ವರಯ್ಯನವರಿಂದಾಗಿ ಮೈಸೂರು ಸಂಸ್ಥಾನದಲ್ಲಿ ಕಮರಿಹೋಗಿದ್ದ ಕನ್ನಡ ಪತ್ರಿಕೆಗಳು ಮತ್ತೆ ಚಿಗುರಲು ಅನುಕೂಲ ವಾಯಿತು. ಪತ್ರಿಕೋದ್ಯಮಕ್ಕೆ ಪುರಕವಾದ ಈ ವಾತಾವರಣದಲ್ಲಿ ಕನ್ನಡದ ಉತ್ಕೃಷ್ಟ ಪತ್ರಕರ್ತರಾಗಿ ಬೆಳೆದ ಡಿ. ವಿ. ಗುಂಡಪ್ಪನವರು 1907ರಲ್ಲೇ ಬೆಂಗಳೂರಿನಿಂದ ಸಮಾಚಾರ ಸಂಗ್ರಹವೆಂಬ ದಿನಪತ್ರಿಕೆ ಹೊರಡಿಸಿದ್ದರು. ಇವರ ಇನ್ನಿತರ ಪತ್ರಿಕಾ ಸಾಹಸಗಳೆಂದರೆ ಸುಮತಿ (1909) ಎಂಬ ವಾರಪತ್ರಿಕೆ. ಕರ್ನಾಟಕ (1913-21) ಎಂಬ ಅರ್ಧವಾರ ಪತ್ರಿಕೆ, ಕರ್ನಾಟಕ ಜೀವನ ಎಂಬ (1916) ಮಾಸಪತ್ರಿಕೆ ಹಾಗೂ ಕರ್ನಾಟಕ ಜನಜೀವನ ಮತ್ತು ಅರ್ಥಸಾಧಕ ಪತ್ರಿಕೆಗಳು (1909-23).

20ನೆಯ ಶತಮಾನದ ಆರಂಭದಲ್ಲಾಗಲೇ ಕನ್ನಡದ ಪತ್ರಿಕೋದ್ಯಮವನ್ನೂ ಸೇರಿಸಿ ಇಡೀ ಭಾರತೀಯ ಪತ್ರಿಕೋದ್ಯಮಕ್ಕೆ ಸ್ವಾತಂತ್ರ್ಯ ಹೋರಾಟದ ಗಾಳಿ ಬೀಸತೊಡಗಿತ್ತು. 1884ರಲ್ಲೇ ಸ್ಥಾಪನೆಗೊಂಡ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಂಪುರ್ಣ ಸ್ವರಾಜ್ಯ ತನ್ನ ಗುರಿಯೆಂದು ಘೋಷಿಸಿತ್ತು. ಬಾಲ ಗಂಗಾಧರ ಟಿಳಕ, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ್ ಘೋಷ್ ಮೊದಲಾದ ಕಾಂಗ್ರೆಸ್ಸಿನ ನಾಯಕರು ಬ್ರಿಟಿಷರ ಜೊತೆ ಸಂಗ್ರಾಮಕ್ಕೆ ಇಳಿದಿದ್ದರು. ವಿಶೇಷವೆಂದರೆ ಈ ನಾಯಕರೆಲ್ಲರಿಗೂ ಒಂದಿಲ್ಲೊಂದು ಪತ್ರಿಕೆಯ ಜೊತೆ ಸಂಪರ್ಕವಿತ್ತು. ಇದು ಕಾರಣವಾಗಿ ಭಾರತೀಯ ದೇಶಭಾಷಾ ಪತ್ರಿಕೋದ್ಯಮವೇ ನೇರವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದಂತೆ ಭಾಸವಾಗತೊಡಗಿತ್ತು. ಆಂಗ್ಲರ ಒಡೆತನವಿದ್ದ ಇಂಗ್ಲಿಷ್ ಪತ್ರಿಕೆಗಳನ್ನು ಹೊರತುಪಡಿಸಿ ಇತರ ಎಲ್ಲಾ ದೇಶ ಭಾಷಾ ಪತ್ರಿಕೆಗಳು ಸ್ವಾತಂತ್ರ್ಯದ ಪರವಾಗಿದ್ದುವು. ಸ್ವಾತಂತ್ರ್ಯ ಚಳವಳಿಗೆ ಒತ್ತುಕೊಟ್ಟು ವರದಿಗಳನ್ನು ಪ್ರಕಟಿಸುತ್ತಿದ್ದುವು. 1920ರ ಬಳಿಕ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿ ಹಿಡಿದ ಮಹಾತ್ಮಾ ಗಾಂಧಿ ಸ್ವತಃ ಶ್ರೇಷ್ಠ ಪತ್ರಕರ್ತರಾಗಿದ್ದರು. ಕಾಂಗ್ರೆಸ್ಸಿನ ಮೊದಲ ಸಾಲಿನ ನಾಯಕರಾದ ಜವಾಹರಲಾಲ್ ನೆಹರೂ ಪತ್ರಿಕೆ ನಡೆಸುತ್ತಿದ್ದರು. ಆ ಕಾಲದ ಹಿರಿಯ ಕಾಂಗ್ರೆಸ್ ನಾಯಕರಿಗೆಲ್ಲ ಪತ್ರಿಕಾ ಸಂಪರ್ಕವಿತ್ತೆಂದು ಸಾಮಾನ್ಯವಾಗಿ ಅಭಿಪ್ರಾಯ ಪಡಬಹುದು.

ದೇಶ ಭಾಷಾ ಪತ್ರಿಕೆಗಳಲ್ಲಿ ಕಂಡುಬಂದ ಈ ಪರಿಸ್ಥಿತಿಯಿಂದ ಕನ್ನಡ ಪತ್ರಿಕೋದ್ಯಮ ಭಿನ್ನವಾಗಿರಲಿಲ್ಲ. ಆಗಿನ ಕಾಲದಲ್ಲಿ ಪ್ರಕಟಗೊಂಡ ಪತ್ರಿಕೆಗಳ ಹೆಸರನ್ನು ಗಮನಿಸಿದರೆ ಅವುಗಳಿಗಿದ್ದ ಸ್ವರಾಜ್ಯದ ಕನಸು, ನವ ಆರಂಭದ ಹುಮ್ಮಸ್ಸು, ದೇಶ ಸಾಕಾರಗೊಳ್ಳಬೇಕೆಂಬ ಆಸೆ ವ್ಯಕ್ತವಾಗುತ್ತದೆ. ಮೈಸೂರಿನ ದೇಶಾಭಿಮಾನಿ (1898), ತಾಯಿನಾಡು (1926), ಶಿವಮೊಗ್ಗದ ಶುಭೋದಯ (1914), ಬೆಂಗಳೂರಿನ ಭಾರತೀ (1902), ನವಜೀವನ (1929), ಉಡುಪಿಯ ಸತ್ಯಾಗ್ರಹ (1921), ಉದಯ ಭಾರತ (1927), ಉಡುಪಿಯ ದೇಶಬಂಧು (1926), ಮಂಗಳೂರಿನ ದೇಶಭಕ್ತ (1980), ಬಿಜಾಪುರದ ನವೀನ ಭಾರತ (1922), ಹುಬ್ಬಳ್ಳಿಯ ದೇಶಬಂಧು (1930), ಮಂಡ್ಯದ ಭಾರತ ವರ್ಷ (1909), ತುಮಕೂರಿನ ಭಾರತ ಸಂದೇಶ (1927)- ಹೀಗೆ 20ನೆಯ ಶತಮಾನದ ಮೊದಲ ಮೂರು ದಶಕಗಳಲ್ಲಿ ಪ್ರಕಟಗೊಂಡ ಪತ್ರಿಕೆಗಳಲ್ಲಿ ಸ್ವರಾಜ್ಯದ ಹೊಸ ದೇಶದ ಕನಸು ನಿಚ್ಚಳವಾಗಿ ಪ್ರಕಟವಾಗುತ್ತದೆ.

ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಹೊತ್ತಿನಲ್ಲೇ ಕನ್ನಡಿಗರು ಇನ್ನೊಂದು ಹೋರಾಟದಲ್ಲಿ ತೊಡಗಿಕೊಂಡಿದ್ದರು. ಅದು ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ಭಾಗಗಳನ್ನೆಲ್ಲ ಒಂದು ಆಡಳಿತಾಂಗವಾಗಿ ಕಟ್ಟಿ ಹೊಸ ಕನ್ನಡ ರಾಜ್ಯವನ್ನು ರಚಿಸಬೇಕೆಂಬ ಕನಸು. ಅನೇಕರಿಗೆ ಭಾರತದ ಉದಯದಷ್ಟೇ ಕರ್ನಾಟಕ ಏಕೀಕರಣ (ನೋಡಿ) ಮುಖ್ಯವಾಗಿತ್ತು. ಅದಕ್ಕಾಗಿ ಪ್ರಾಣತೆರಲೂ ಜನ ಸಿದ್ಧವಿದ್ದರು. ಈ ಭಾವನೆಯನ್ನು ಆ ಕಾಲದ ಪತ್ರಿಕೆಗಳ ಹೆಸರುಗಳಲ್ಲೇ ಕಾಣುತ್ತೇವೆ. ಬಿಜಾಪುರದ ಕರ್ನಾಟಕ ಭಾಷಾ ಸೇವಕ (1894), ಕರ್ನಾಟಕ ವೃತ್ತ (1892), ಕರ್ನಾಟಕ ವೈಭವ (1892, ಬೆಂಗಳೂರಿನ ಕರ್ನಾಟಕ (1913-21), ಕರ್ನಾಟಕ ಜೀವನ (1916), ಬೆಳಗಾಂವಿಯ ಸಂಯುಕ್ತ ಕರ್ನಾಟಕ (1929), ನಂಜನಗೂಡಿನ ಕರ್ನಾಟಕ ನಂದಿನಿ (1916)- ಹೀಗೆ ಸರ್ವವೂ ಕರ್ನಾಟಕಮಯವಾಗಿದ್ದ ಕಾಲವದು. ಹಾಗೆಯೇ ಮಂಗಳೂರಿನ ಕನ್ನಡ ಕೋಗಿಲೆ (1916), ಬೆಂಗಳೂರಿನ ಕನ್ನಡ ಜ್ಯೋತಿ (1937), ಕನ್ನಡ ವಾಣಿ (1933), ಮಂಗಳೂರಿನ ಕನ್ನಡ ಕೇಸರಿ (1885) ಮುಂತಾಗಿ ಕನ್ನಡ ಪ್ರಜ್ಞೆ ಜಾಗೃತಗೊಳ್ಳ್ಳುತ್ತಿರುವುದನ್ನು ಪತ್ರಿಕೆಗಳ ಹೆಸರುಗಳ ಮೂಲಕವೇ ಗುರುತಿಸಬಹುದು.

ಸುದೀರ್ಘ ಹೋರಾಟದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತು. ಕನ್ನಡಿಗರ ಒತ್ತಾಸೆಯ ಫಲವಾಗಿ, ಭಾಷಾವಾರು ಪ್ರಾಂತ್ಯಗಳ ರಚನೆಯ ವೇಳೆ ಕನ್ನಡ ರಾಜ್ಯವೂ ಉದಯವಾಯಿತು. ವಿಶೇಷವೆಂದರೆ ಪ್ರಜೆಗಳ ಅಭೀಪ್ಸೆ ಸಾಕಾರಗೊಂಡು ಭಾರತ ಸರ್ಕಾರ ಮೈಸೂರು ರಾಜ್ಯ ರಚಿಸಿ ಪ್ರಜೆಗಳ ಆಶಯಕ್ಕೆ ಮಾನ್ಯತೆ ಬಂದುದರ ಪ್ರತಿಬಿಂಬವೋ ಎನ್ನುವಂತೆ 1930 ರಿಂದ 60ರ ಅವಧಿಯಲ್ಲಿ ಪ್ರಕಟವಾದ ಅನೇಕ ಪತ್ರಿಕೆಗಳ ಹೆಸರುಗಳಿವೆ. ಉದಾಹರಣೆಗೆ ಕನ್ನಡದಲ್ಲಿ ಹಿರಿಯ ದಿನಪತ್ರಿಕೆ ಪ್ರಜಾವಾಣಿ ಪ್ರಾರಂಭವಾದುದು 1948ರಲ್ಲಿ. ಪ್ರಜಾಬಂಧು (1932), ಪ್ರಜಾಮತ (1931)- ಈ ಪತ್ರಿಕೆಗಳು ಈ ಮೊದಲು ಪ್ರಕಟವಾಗುತ್ತಿದ್ದವು.

20ನೆಯ ಶತಮಾನ ಆದಿಯಿಂದ ಸುಮಾರು ಐದು ದಶಕಗಳ ಕಾಲದವರೆಗೆ ಕನ್ನಡ ಪತ್ರಿಕೋದ್ಯಮದಲ್ಲಿ ಮಹತ್ತರ ಸಾಧನೆ ಮಾಡಿದ ಅನೇಕ ಪತ್ರಿಕೆಗಳು ಜೀವ ತಳೆದುವು. ಹಾಗೆಯೇ ಕರ್ನಾಟಕ ಸಂದರ್ಭಕ್ಕೆ ಬಹುಮುಖ್ಯ ಕೊಡುಗೆಗಳನ್ನು ನೀಡಿದ ಅನೇಕ ಮಹನೀಯರೂ ಈ ಅವಧಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದು ಉಲ್ಲೇಖನೀಯ. ಈ ಅವಧಿಯಲ್ಲಿ ಹುಟ್ಟಿದ್ದ ಹೆಚ್ಚಿನ ಪತ್ರಿಕೆಗಳು ಈಗ ಇಲ್ಲ. ಪತ್ರಕರ್ತರೂ ಇಲ್ಲ. ಆದರೆ ಕನ್ನಡ ಪತ್ರಿಕಾ ಚರಿತ್ರೆಯಲ್ಲಿ ದಾಖಲಾಗಲೇಬೇಕಾದ ಕೆಲವು ಹೆಸರುಗಳಿವೆ. ಪಿ. ಆರ್. ರಾಮಯ್ಯನವರ ತಾಯಿನಾಡು (1926), ಎನ್.ಎಸ್. ಸೀತಾರಾಮಶಾಸ್ತ್ರಿಗಳ ದೇಶಬಂಧು (1931), ಎಂ. ಸೀತಾರಾಮ ಶಾಸ್ತ್ರಿಗಳ ವೀರಕೇಸರಿ (1928), ತಿರುಮಲೆ ತಾತಾಚಾರ್ಯ ಶರ್ಮರ ವಿಶ್ವಕರ್ನಾಟಕ (1925), ಬಿ.ಎನ್. ಗುಪ್ತರ ಪ್ರಜಾಮತ (1931), ಆಲೂರು ವೆಂಕಟರಾಯರ ಜಯಕರ್ನಾಟಕ (1922), ಕಡೆಂಗೋಡ್ಲು ಶಂಕರ ಭಟ್ಟರ ರಾಷ್ಟ್ರಬಂಧು (1928), ಎಚ್.ಕೆ. ವೀರಣ್ಣಗೌಡರ ಚಿತ್ರಗುಪ್ತ (1928), ಪಿ.ಶೇಷಪ್ಪನವರ ಕಿಡಿ (1949)-ಇವು ಈ ಅವಧಿಯಲ್ಲಿ ಬಹು ಪಾಲು ಕನ್ನಡ ಪತ್ರಿಕೋದ್ಯಮ ನಾಯಕತ್ವ ವಹಿಸಿದ್ದವು.

20ನೆಯ ಶತಮಾನದ ಪುರ್ವಾರ್ಧದಲ್ಲಿ ಆರಂಭವಾಗಿ ಇಂದಿಗೂ ಪ್ರಕಟಣೆಯಲ್ಲಿದ್ದು ಕನ್ನಡ ಪ್ರಮುಖ ದಿನಪತ್ರಿಕೆಗಳೆನಿಸಿರುವ ಎರಡು ಪತ್ರಿಕೆಗಳ ಬಗ್ಗೆ ಇಲ್ಲಿ ಪ್ರತ್ಯೇಕ ಉಲ್ಲೇಖ ಅಗತ್ಯ. ಅದರಲ್ಲಿ ಮೊದಲಿನದು ಸಂಯುಕ್ತ ಕರ್ನಾಟಕ (ನೋಡಿ)ವಾದರೆ ಇನ್ನೊಂದು ಪ್ರಜಾವಾಣಿ. ಈಗ ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯನ್ನೂ ಬೆಂಗಳೂರಿನಲ್ಲಿ ಇನ್ನೊಂದು ಆವೃತ್ತಿಯನ್ನೂ ಹೊಂದಿರುವ ಸಂಯುಕ್ತ ಕರ್ನಾಟಕ, ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕೆ. ಇದು ಸ್ವಾತಂತ್ರ್ಯ ಹೋರಾಟದಲ್ಲೂ ಉತ್ತರ ಕರ್ನಾಟಕದಲ್ಲಿ ಮುಂಚೂಣಿಯಲ್ಲಿತ್ತು. ಇಂದಿಗೂ ಕನ್ನಡದ ಐದು ದೊಡ್ಡ ದಿನಪತ್ರಿಕೆಗಳ ಪೈಕಿ ಅತ್ಯಂತ ಹಿರಿಯ ಪತ್ರಿಕೆ. ಕರ್ಮವೀರ 1921ರ ವೇಳೆಗೆ ಧಾರವಾಡದಲ್ಲಿ ಪ್ರಾರಂಭವಾಗಿದ್ದ ವಾರಪತ್ರಿಕೆ. ರಂಗನಾಥ ದಿವಾಕರರು ಸಂಪಾದಕರಾಗಿದ್ದಾಗ ಕರ್ಮವೀರ (ನೋಡಿ) ಸಂಯುಕ್ತ ಕರ್ನಾಟಕದ ಸೋದರ ಪತ್ರಿಕೆಯಾಗಿ ಬೆಳೆಯಿತು. ಲೋಕ ಶಿಕ್ಷಣ ಟ್ರಸ್ಟ್‌ ಇನ್ನೊಂದು ಪ್ರಕಟಣೆ ಕಸ್ತೂರಿ (ನೋಡಿ) ಮಾಸಿಕ. ಕಳೆದ ಐದು ದಶಕಗಳಿಂದ ತನ್ನತನವನ್ನು ಉಳಿಸಿಕೊಂಡಿರುವ ಕಸ್ತೂರಿ ಕನ್ನಡಿಗರ ರೀಡರ್ಸ್ ಡೈಜೆಸ್ಟ್‌ ಎನಿಸಿದೆ. ಕರ್ಮವೀರ ಮಧ್ಯದಲ್ಲಿ ಸ್ಥಗಿತ ಕಂಡಿದ್ದರೂ ಪುನರಾರಂಭಗೊಂಡಿತು. ಕನ್ನಡದಲ್ಲಿ ಆಧುನಿಕ ವೃತ್ತಿಪರ ಪತ್ರಿಕೋದ್ಯಮ ಆರಂಭಗೊಂಡಿದ್ದು ಪ್ರಜಾವಾಣಿ (ನೋಡಿ) ಪತ್ರಿಕೆ ಎಂದು ಅನೇಕರು ಗುರುತಿಸುತ್ತಾರೆ. ಪ್ರಜಾವಾಣಿ 1948ರಲ್ಲಿ ಡೆಕ್ಕನ್ ಹೆರಾಲ್ಡ್‌ ಇಂಗ್ಲಿಷ್ ಪತ್ರಿಕೆಯ ಸಹೋದರಿ ಪ್ರಕಟಣೆಯಾಗಿ ಆರಂಭಗೊಂಡಿತು. ಬೆಂಗಳೂರಿನಲ್ಲಿ ಆ ಕಾಲದ ಹಿರಿಯ ಸಮಾಜ ಕಾರ್ಯಕರ್ತರಾಗಿದ್ದ ನೆಟ್ಟಕಲ್ಲಪ್ಪ ಪ್ರಜಾವಾಣಿಯ ಸ್ಥಾಪಕರು. ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಪ್ರಕಾಶನ ಸಂಸ್ಥೆಯಡಿ ಪ್ರಜಾವಾಣಿ ಪ್ರಕಟಗೊಳ್ಳುತ್ತಿದ್ದು ಪ್ರಜಾವಾಣಿಯ ಸ್ಥಾಪಕ ಸಂಪಾದಕರು ಬಿ.ಪುಟ್ಟಸ್ವಾಮಯ್ಯ (ನೋಡಿ), ಅನಂತರ ಟಿ.ಎಸ್. ರಾಮಚಂದ್ರರಾವ್ (ನೋಡಿ), ಖಾದ್ರಿ ಶಾಮಣ್ಣ (ನೋಡಿ), ಟಿ.ಎನ್. ಕೃಷ್ಣಮೂರ್ತಿ (ನೋಡಿ),ಎಂ.ಬಿ.ಸಿಂಗ್ (ನೋಡಿ) ಇವರ ಮಾರ್ಗದರ್ಶನದಲ್ಲಿ ಪ್ರಜಾವಾಣಿ ಕನ್ನಡದ ಮುಂಚೂಣಿಯ ಪತ್ರಿಕೆಯಾಗಿ ಬೆಳೆಯಿತು. ಪ್ರಜಾವಾಣಿಯ ಜೊತೆ ಸುಧಾ ವಾರಪತ್ರಿಕೆ ಹಾಗೂ ಮಯೂರ ಮಾಸಿಕಗಳು ದಿ ಪ್ರಿಂಟರ್ಸ್ ಮೈಸೂರು ಪ್ರಕಾಶನದ ಕೊಡುಗೆಗಳಾಗಿವೆ.

ಕನ್ನಡದ ದೊಡ್ಡ ದಿನಪತ್ರಿಕೆಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚಿನ ಚರಿತ್ರೆಯಿರುವ ಇನ್ನೊಂದು ಪತ್ರಿಕೆ ಕನ್ನಡ ಪ್ರಭ (ನೋಡಿ). ದೇಶದ ಪ್ರಮುಖ ಪತ್ರಿಕಾ ಸಮೂಹಗಳಲ್ಲಿ ಒಂದೆನಿಸಿರುವ ಇಂಡಿಯನ್ ಎಕ್ಸ್‌ಪ್ರಸ್ ಗುಂಪಿಗೆ ಸೇರಿದ ಕನ್ನಡ ಪತ್ರಿಕೆ. ಇದು ಆರಂಭಗೊಂಡಿದ್ದು 1957ರಲ್ಲಿ. ಆಗಿನ ಕಾಲದ ಹಿರಿಯ ಪತ್ರಕರ್ತರಾಗಿದ್ದ ಎನ್.ಎಸ್. ಸೀತಾರಾಮಶಾಸ್ತ್ರಿಗಳು ಕನ್ನಡ ಪ್ರಭದ ಸ್ಥಾಪಕ ಸಂಪಾದಕರು.

ಕರಾವಳಿ ಕರ್ನಾಟಕದ ಜನಪ್ರಿಯ ದೈನಿಕ ಉದಯವಾಣಿ (ನೋಡಿ), ಕನ್ನಡದ ಇನ್ನೊಂದು ದೊಡ್ಡ ದಿನಪತ್ರಿಕೆ. 1941ರಲ್ಲಿ ಮಂಗಳೂರಿನಲ್ಲಿ ನವಭಾರತ ಎಂಬ ದೈನಿಕ ಆರಂಭವಾಯಿತು. ವಿ.ಎಸ್. ಕುಡ್ವರು ಈ ಪತ್ರಿಕೆಯ ಸಂಪಾದಕರಾಗಿದ್ದರು. ಕರಾವಳಿಯಲ್ಲಿ ನವಭಾರತ ಅತ್ಯಂತ ಜನಪ್ರಿಯವಾಗಿದ್ದ ವೇಳೆ ಅದಕ್ಕೆ ಪ್ರತಿಸ್ಪರ್ಧಿಯೆಂಬಂತೆ ಉದಯವಾಣಿ ಆರಂಭವಾಗಿದ್ದು 1970ರಲ್ಲಿ. ಉದಯವಾಣಿ ಮಣಿಪಾಲ ಸಮೂಹದ ಕೊಡುಗೆ. ಮಣಿಪಾಲ ಸಮೂಹದಿಂದ ಉದಯವಾಣಿ ದೈನಿಕವಲ್ಲದೆ ತರಂಗ ವಾರಪತ್ರಿಕೆ, ತುಷಾರ ಮಾಸಿಕ, ರೂಪತಾರಾ ಪಾಕ್ಷಿಕಗಳೂ ಪ್ರಕಟ ಗೊಳ್ಳು ತ್ತಿವೆ. ತರಂಗ ವಾರಪತ್ರಿಕೆಗೆ ಸ್ಥಾಪಕ ಸಂಪಾದಕರು ಸಂತೋಷಕುಮಾರ ಗುಲ್ವಾಡಿ. 1983ರಲ್ಲಿ ತರಂಗ ಅತ್ಯಂತ ವೇಗವಾಗಿ ತನ್ನ ಪ್ರಸಾರವನ್ನು ಹೆಚ್ಚಿಸಿ ಕೊಂಡಿತು. ಕೇಂದ್ರ ಸರ್ಕಾರ ಕಾಲದಿಂದ ಕಾಲಕ್ಕೆ ಪತ್ರಿಕೆಗಳನ್ನು ಸಣ್ಣ, ಮಧ್ಯಮ ಮತ್ತು ದೊಡ್ಡ ಪತ್ರಿಕೆಗಳೆಂದು ವಿಂಗಡಿಸುತ್ತದೆ. ಈ ರೀತಿಯ ವರ್ಗೀಕರಣಕ್ಕೆ ಪತ್ರಿಕೆಗಳ ಪ್ರಸಾರ ಸಂಖ್ಯೆಯೇ ಆಧಾರ. ಈಗ ಚಾಲ್ತಿಯಲ್ಲಿರುವ ನಿಯಮದ ಪ್ರಕಾರ 25 ಸಾವಿರ ಪ್ರತಿಗಳವರೆಗೆ ಪ್ರಸಾರವಿರುವ ಪತ್ರಿಕೆಗಳನ್ನು ಸಣ್ಣ ಪತ್ರಿಕೆಗಳೆಂದೂ 25,000 ದಿಂದ 50,000 ವರೆಗಿನ ಪ್ರಸಾರ ಹೊಂದಿರುವ ಪತ್ರಿಕೆಗಳನ್ನು ಮದ್ಯಮ ಪ್ರಮಾಣದ ಪತ್ರಿಕೆಗಳೆಂದೂ 75 ಸಾವಿರಕ್ಕೂ ಹೆಚ್ಚು ಪ್ರಸಾರವಿರುವ ಪತ್ರಿಕೆಗಳನ್ನು ದೊಡ್ಡ ಪತ್ರಿಕೆಗಳೆಂದೂ ಗುರುತಿಸಲಾಗುತ್ತದೆ. ಇಂಡಿಯಾ 2000 ವರದಿಯ ಪ್ರಕಾರ ಕನ್ನಡದಲ್ಲಿ ನಿಖರವಾಗಿ ಪತ್ರಿಕೆಗಳ ಪ್ರಸಾರ ಎಷ್ಟೆಂದು ಪತ್ರಿಕಾ ರಿಜಿಸ್ಟ್ರಾರ್ ಅವರಿಗೆ ವರದಿ ಸಲ್ಲಿಸಿದ ಪತ್ರಿಕೆಗಳು 72 ಮಾತ್ರ. ಈ 72 ಪತ್ರಿಕೆಗಳ ಪೈಕಿ 8 ಪತ್ರಿಕೆಗಳು ದೊಡ್ಡ ಪ್ರಮಾಣದವು, 21 ಪತ್ರಿಕೆಗಳು ಮಧ್ಯಮ ಪ್ರಮಾಣದವು, 43 ಪತ್ರಿಕೆಗಳು ಸಣ್ಣ ಪತ್ರಿಕೆಗಳು ಎಂದು ಗುರುತಿಸಲಾಗಿದೆ. ಈಗ ಕರ್ನಾಟಕದಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆಗಳ ಒಟ್ಟು ಸಂಖ್ಯೆ 1455. ಇವುಗಳಲ್ಲಿ 72 ಪತ್ರಿಕೆಗಳ ಪ್ರಸಾರವನ್ನು ಮಾತ್ರ ನಿಖರವಾಗಿ ಗುರುತಿಸಲು ಸಾಧ್ಯವಾಗಿರುವುದರಿಂದ ಅವುಗಳಲ್ಲಿ ಮಾತ್ರ ಪತ್ರಿಕೆಗಳ ವರ್ಗೀಕರಣ ಮಾಡಬೇಕಾಗುತ್ತದೆ. ಉಳಿದ ಬಹುಸಂಖ್ಯಾತ ಪತ್ರಿಕೆಗಳು ಸಣ್ಣ ಪತ್ರಿಕೆಗಳೇ ಆಗಿದ್ದು ಇವುಗಳ ಪ್ರಸಾರದ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಪತ್ರಿಕಾ ರಿಜಿಸ್ಟ್ರಾರ್ ಅವರ ಬಳಿಯೂ ಇಂಥ ಮಾಹಿತಿ ಲಭ್ಯವಿರುವುದಿಲ್ಲ. ಪ್ರಸಾರದ ಮಟ್ಟಿಗೆ ಆಯಾ ಪತ್ರಿಕಾ ಸಂಪಾದಕರ ಹೇಳಿಕೆಗಳನ್ನೇ ಅವಲಂಬಿಸಬೇಕಾಗುತ್ತದೆ.

ಕನ್ನಡದ 72 ಪತ್ರಿಕೆಗಳಲ್ಲಿ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಉದಯವಾಣಿ, ಕನ್ನಡ ಪ್ರಭ, ಸುಧಾ, ತರಂಗ- ಈ ಪತ್ರಿಕೆಗಳು ದೊಡ್ಡ ಪತ್ರಿಕೆಗಳು. ಇವುಗಳ ಪೈಕಿ ಒಂದು ಲಕ್ಷಕ್ಕೂ ಹೆಚ್ಚು ಪ್ರಸಾರವಿರುವ ದಿನಪತ್ರಿಕೆ ಒಂದೇ ಒಂದು. ಆದರೆ ನಿಯತಕಾಲಿಕೆಗಳು ಮೂರು. ಹಾಗೆಯೇ 75 ಸಾವಿರಕ್ಕೂ ಹೆಚ್ಚು ಪ್ರಸಾರವಿರುವ ದಿನಪತ್ರಿಕೆಗಳು ಮೂರು ಹಾಗೂ ನಿಯತಕಾಲಿಕ ಒಂದು ಮಾತ್ರ. ಈಗ ಈ ಪತ್ರಿಕೆಗಳ ಒಟ್ಟು ಪ್ರಸಾರ ಸು. 960 ಸಾವಿರ ಪ್ರತಿಗಳು.

ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ಸಾಕಷ್ಟು ಬೆಳೆದಿದೆ, ಬದಲಾಗಿದೆ. ಹೊಸನೀರು ಬಂದು ಹಳೆನೀರು ಕೊಚ್ಚಿ ಹೋಗಿದೆ. ಆ ವೇಳೆಗಾಗಲೇ ಗಟ್ಟಿಯಾಗಿ ಬೇರೂರಿದ್ದ ಸಂಯುಕ್ತ ಕರ್ನಾಟಕವೂ ಸ್ವಾತಂತ್ರ್ಯದ ಜೊತೆಯೇ ಬಂತೆನ್ನಬಹುದಾದ ಪ್ರಜಾವಾಣಿಯೂ ಈ ಅವಧಿಯಲ್ಲಿ ವಿಶಾಲ ಕರ್ನಾಟಕದಲ್ಲಿ ಪ್ರಸಾರ ಹೆಚ್ಚಿಸಿಕೊಂಡು ಬೆಳೆದು, ಇವುಗಳನ್ನು ಅನುಸರಿಸಿ ಬಂದ ಕನ್ನಡ ಪ್ರಭ ಮತ್ತು ಉದಯವಾಣಿ ಹಾಗೂ ಈಗ ಪ್ರಕಟವಾಗುತ್ತಿರುವ ವಿಜಯ ಕರ್ನಾಟಕ -ಇವು ಕನ್ನಡ ದಿನಪತ್ರಿಕೆಗಳ ಏಕಪ್ರಾಬಲ್ಯವನ್ನು ಹೋಗಲಾಡಿಸಿದುವು. ಉದ್ಯಮಿ ವಿಜಯ ಸಂಕೇಶ್ವರ ವಿಜಯಾನಂದ ಪ್ರಿಂಟರ್ಸ್ ಮತ್ತು ಪಬ್ಲಿಷರ್ಸ್‌ ಸಂಸ್ಥೆಯ ವಿಜಯಕರ್ನಾಟಕ ಎಂಟು ಆವೃತ್ತಿಗಳೊಡನೆ ಪ್ರಕಟವಾಗುತ್ತಿದೆ. ಇದರ ಪ್ರಸಾರ ಸಂಖ್ಯೆ ನಾಲ್ಕು ಲಕ್ಷ. ಕನ್ನಡ ಪತ್ರಿಕೆಗಳ ಮಧ್ಯೆ ಈವರೆಗೆ ಕಾಣದಿದ್ದ ಬೆಲೆಯುದ್ಧವನ್ನೂ ವಿಜಯ ಕರ್ನಾಟಕ ಹುಟ್ಟುಹಾಕಿದೆ. ಅತಿ ಕಡಿಮೆ ಅವಧಿಯಲ್ಲಿ ವಿಜಯಕರ್ನಾಟಕ ಬೆಳೆದಿದೆ. 1942ರಲ್ಲಿ ಹುಬ್ಬಳ್ಳಿಯಲ್ಲಿ ಆರಂಭವಾದ ವಿಶಾಲ ಕರ್ನಾಟಕ ಇಂದಿಗೂ ಪ್ರಭಾವೀ ಪತ್ರಿಕೆಯಾಗಿ ಮುಂದುವರಿದಿದೆ. ಕನ್ನಡದ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ಪಾಟೀಲ ಪುಟ್ಟಪ್ಪ (ನೋಡಿ) ಕಳೆದ ಐದು ದಶಕ ನಡೆಸಿರುವ ವಾರಪತ್ರಿಕೆ ಪ್ರಪಂಚ. ಈ ಪತ್ರಿಕೆ ನನ್ನ ಹೃದಯದಿಂದ ನಿಮ್ಮ ಹೃದಯಕ್ಕೆ ಎಂಬ ಸಂಪಾದಕೀಯಕ್ಕಾಗಿ ಪ್ರಸಿದ್ಧವಾಗಿದೆ. ತುರ್ತು ಪರಿಸ್ಥಿತಿಯ ಅನಂತರ ಕನ್ನಡ ಪತ್ರಿಕೋದ್ಯಮದಲ್ಲಿ ದಾಖಲಿಸ ಬೇಕಾದ ಮುಖ್ಯ ಬೆಳೆವಣಿಗೆಗಳೆಂದರೆ ಟ್ಯಾಬ್ಲಾಯ್ಡ್‌ ಪತ್ರಿಕೆಗಳ ಉದಯ, ವಿಪುಲವಾದ ನಿಯತಕಾಲಿಕೆಗಳ ಪ್ರಕಟಣೆ. ಕನ್ನಡ ಪತ್ರಿಕೋದ್ಯಮಕ್ಕೆ ವಸ್ತು, ವಿನ್ಯಾಸ, ನಿರೂಪಣೆಗಳ ದೃಷ್ಟಿಯಿಂದ ತಿರುವನ್ನು ನೀಡಿದ್ದು ಲಂಕೇಶ್ ಪತ್ರಿಕೆಯ ಪ್ರಕಟಣೆ. ಕನ್ನಡದ ಸೃಜನಶೀಲ ಬರೆಹಗಾರರು ಹಾಗೂ ಅಂಕಣಕಾರರಾಗಿ ಹೆಸರು ಮಾಡಿದ್ದ ಪಿ.ಲಂಕೇಶ್ (ನೋಡಿ) 1983ರಲ್ಲಿ ಕನ್ನಡಕ್ಕೆ ಹೊಚ್ಚ ಹೊಸತೆನ್ನಿಸಿದ ಈ ಪತ್ರಿಕೆಯನ್ನು ಆರಂಭಿಸಿ ದರು. ಇದನ್ನು ಕನ್ನಡದ ಜಾಣ-ಜಾಣೆಯರ ಪತ್ರಿಕೆ ಎಂಬುದಾಗಿ ಕರೆದರು. ಆವರೆಗೂ ಪತ್ರಿಕೆಗಳು ಮಡಿವಂತಿಕೆಯಿಂದಾಗಿ ಬಳಸದಿದ್ದ ಆಡುಮಾತಿನ ನುಡಿಗಟ್ಟುಗಳನ್ನು ಬಳಕೆಗೆ ತಂದು ಪತ್ರಿಕಾ ಭಾಷೆಯನ್ನು ಲಂಕೇಶ್ ಬದಲಿಸಿದರು. ಬಂ (ಬಂಗಾರಪ್ಪ), ಗುಂ (ಗುಂಡೂರಾವ್) ಎಂಬ ವಿಶಿಷ್ಟ ಸಂಕೇತಾಕ್ಷರಗಳನ್ನೂ ಶಬ್ದಗಳನ್ನೂ ಸೃಷ್ಟಿಸಿ ಪತ್ರಿಕಾ ಭಾಷೆಯನ್ನು ಚುರುಕುಗೊಳಿಸಿದರು.

ಲಂಕೇಶ್ ಪತ್ರಿಕೆಯನ್ನು ಅನುಸರಿಸಿ ನೂರಾರು ಪತ್ರಿಕೆಗಳು ಕನ್ನಡದಲ್ಲಿ ಬಂದುಹೋಗಿದೆ. ಕೆಲವು ಪತ್ರಿಕೆಗಳು ಜನರನ್ನು ಬ್ಲಾಕ್ಮೇಲ್ ಮಾಡುವ ಹಳದಿ ಪತ್ರಿಕೋದ್ಯಮಕ್ಕೂ ಇಳಿದದ್ದುಂಟು. 1995ರಲ್ಲಿ ಆರಂಭಗೊಂಡಿರುವ ಹಾಯ್ ಬೆಂಗಳೂರು ಎಂಬ ಟ್ಯಾಬ್ಲಾಯ್ಡ್‌ ಪತ್ರಿಕೆ ಲಂಕೇಶ್ ಪತ್ರಿಕೆ ಯನ್ನೂ ಮೀರಿ ಓದುಗರಿಗೆ ಲಗ್ಗೆ ಇಟ್ಟಿದೆ. ಇದರ ಸಂಪಾದಕ- ಪ್ರಕಾಶರು ರವಿ ಬೆಳೆಗೆರೆ. ಇವುಗಳನ್ನನುಸರಿಸಿ ಇಂದು ಅಗ್ನಿ, ಕನ್ನಡ ಟೈಮ್ಸ್‌ ಮುಂತಾದ ಅನೇಕ ಟ್ಯಾಬ್ಲಾಯ್ಡ್‌ಗಳು ಪ್ರಕಟವಾಗುತ್ತಿವೆ.

80ರ ದಶಕದಲ್ಲಿ ಕನ್ನಡ ಪತ್ರಿಕೋದ್ಯಮದಲ್ಲಿ ಕಂಡುಬಂದ ಇನ್ನೊಂದು ಮುಖ್ಯ ಬೆಳೆವಣಿಗೆ ನಿಯತಕಾಲಿಕಗಳ ಸುಗ್ಗಿ. ಸಾಲುಸಾಲಾಗಿ ನಿಯತಕಾಲಿಕೆಗಳು ಹೆಚ್ಚಾಗಿ ಬೆಂಗಳೂರು ಕೇಂದ್ರವಾಗಿ ಪ್ರಕಟಗೊಂಡವು. ಸುದ್ದಿಸಂಗಾತಿ, ಸಂಕೇಶ, ಮನ್ವಂತರ ಮುಂತಾದವು ವಾರಪತ್ರಿಕೆಗಳು. ವೈಜ್ಞಾನಿಕವಾಗಿ ಲೈಂಗಿಕ ಜ್ಞಾನವನ್ನು ಜನತೆಗೆ ಕೊಡಹೊರಟ ರತಿವಿಜ್ಞಾನದಂಥ ಅನೇಕ ಮಾಸಿಕಗಳೂ ಸಾಲುಸಾಲಾಗಿ ಪ್ರಕಟಗೊಂಡಿವೆ. ಆದರೆ ಈ ಉತ್ಸಾಹ ಒಂದು ದಶಕವೂ ಉಳಿಯಲಿಲ್ಲ. ಆರಂಭಗೊಂಡ ಹಾಗೆ ಈ ನಿಯತಕಾಲಿಕೆಗಳು ಒಂದೊಂದಾಗಿ ನಿಂತುಹೋದವು ಮಾತ್ರವಲ್ಲ ಇಂಥ ಈ ಉತ್ಸಾಹ ಮೊದಲೇ ಪ್ರಕಟಗೊಳ್ಳುತ್ತಿದ್ದ ಪ್ರಜಾಮತದಂಥ ಹಳೇ ಪತ್ರಿಕೆಗಳನ್ನೂ ಆಪೋಶನ ತೆಗೆದುಕೊಂಡಿತು.

ಜಿಲ್ಲಾ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮ ರಂಗಕ್ಕೆ ಅಪಾರವಾಗಿ ಕೊಡುಗೆ ನೀಡಿವೆ. ರಾಜ್ಯ ಮಟ್ಟದ ಪತ್ರಿಕೆಗಳ ಆಯಾ ಪ್ರದೇಶದ ಪ್ರಸಾರವನ್ನು ಮೀರಿಸುವಷ್ಟು ಈ ಪತ್ರಿಕೆಗಳ ಪ್ರಸಾರವಿದೆ. ಒಂದೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದೊಂದು ಪತ್ರಿಕೆಯಾದರೂ ಸ್ಥಳೀಯವಾಗಿ ಪ್ರಬಲವಾಗಿ ಬೆಳೆದಿರುವುದು ಕನ್ನಡದ ವಿಶೇಷ. ಬೆಂಗಳೂರು, ಮೈಸೂರು, ಶಿವಮೊಗ್ಗ, ಮಂಗಳೂರು, ಬೆಳಗಾಂವಿ, ದಾವಣಗೆರೆ, ಹಾಸನ, ಹುಬ್ಬಳ್ಳಿಗಳಲ್ಲಿ ಈ ಬಗೆಯ ಪತ್ರಿಕೆಗಳು ಮಧ್ಯಮ ಪ್ರಮಾಣದ ಪ್ರಸಾರವನ್ನೂ ಹೊಂದಿದೆ. ಒಂದೊಂದು ಕಡೆಯಲ್ಲಿ ಒಂದಕ್ಕಿಂತ ಹೆಚ್ಚು ಪತ್ರಿಕೆಗಳು ಪ್ರವರ್ಧಮಾನಕ್ಕೆ ಬಂದಿವೆ.

ಪ್ರತಿಯೊಂದೂ ಜಿಲ್ಲೆಯಲ್ಲಿ ಪ್ರಬಲವಾಗಿ ಬೇರೂರಿರುವ ಸ್ಥಳೀಯ ಪತ್ರಿಕೆಗಳು ಪ್ರಶಂಸಾರ್ಹ ಕೆಲಸ ಮಾಡುತ್ತಿವೆ. ಅನೇಕ ಸುದ್ದಿಗಳು ಮೊದಲು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡು ಅನಂತರ ರಾಜ್ಯದ ಹಾಗೂ ದೇಶದ ಗಮನ ಸೆಳೆಯುತ್ತವೆ. ಸ್ಥಳೀಯ ಮಟ್ಟದಲ್ಲಿ ಅವುಗಳ ಪ್ರಭಾವದಿಂದಾಗಿ ರಾಜಕಾರಣಿಗಳು ಹಾಗೂ ಅಧಿಕಾರಸ್ಥರು ಕೂಡ ಈ ಪತ್ರಿಕೆಗಳನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಸಣ್ಣ ಹಾಗೂ ಸ್ಥಳೀಯ ಮಟ್ಟದ ಪತ್ರಿಕೆಗಳು ಕನ್ನಡ ಪತ್ರಿಕೋದ್ಯಮದ ಅವಿಭಾಜ್ಯ ಅಂಗಗಳಾಗಿವೆ. ಸಣ್ಣ ಪತ್ರಿಕೆಗಳನ್ನು ಬಲಗೊಳಿಸುವುದಕ್ಕಾಗಿ ಪತ್ರಕರ್ತರಿಗೆ ತರಬೇತಿ, ಸಾಲ ಸೌಲಭ್ಯ ಮುಂತಾಗಿ ಪ್ರೋತ್ಸಾಹಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಂಗನಾಥ ದಿವಾಕರ, ಎಂ.ಬಿ.ಸಿಂಗ್ ಹಾಗೂ ಪಿ.ಆರ್.ರಾಮಯ್ಯ ಅವರ ನೇತೃತ್ವದ ಸಮಿತಿಗಳು ಮುಖ್ಯವಾಗಿ ಸಣ್ಣ ಪತ್ರಿಕೆಗಳ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ವರದಿ ನೀಡಿವೆ.

ಹೀಗೆ ಕಳೆದ ಒಂದೂವರೆ ಶತಮಾನದಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಮಾನವನ ಆಸಕ್ತಿಯ ಕ್ಷೇತ್ರಗಳನ್ನೂ ಆಧುನಿಕ ಪ್ರವೃತ್ತಿಗಳನ್ನೂ ಪ್ರತಿನಿಧಿಸುವ ಹಾಗೆ ವೈವಿಧ್ಯಮಯ ಆಸಕ್ತಿಯ ಪತ್ರಿಕೆಗಳು ಪ್ರಕಟ ಗೊಂಡಿವೆ. ಇವುಗಳಲ್ಲಿ ಸಾಹಿತ್ಯ ಪತ್ರಿಕೆಗಳದ್ದೇ ಪ್ರತ್ಯೇಕ ಕವಲು. ಆರಂಭದಿಂದಲೂ ಪತ್ರಿಕೆ ಎಂದ ಮೇಲೆ ಅದರಲ್ಲಿ ಸಾಹಿತ್ಯಕ್ಕೆ ಸ್ಥಾನ ಇದ್ದೇ ಇದೆ. ಆಗಿನ್ನೂ ಕನ್ನಡದ ಆಧುನಿಕ ಕತೆ, ಕಾವ್ಯದ ಕಾಲ ಆರಂಭವಾಗಿರಲಿಲ್ಲ. ಆದರೂ 19ನೆಯ ಶತಮಾನದ ಮಧ್ಯ ಭಾಗದಲ್ಲಿ ಬಂದ ಪತ್ರಿಕೆಗಳಲ್ಲೇ ಪ್ರಬಂಧದ ಮಾದರಿಯ ಬರೆಹಗಳನ್ನು ಕಾಣಬಹುದಾಗಿದೆ. ಕನ್ನಡದ ಆರಂಭ ಕಾಲದ ಪತ್ರಿಕೆಗಳು ಸಾಹಿತ್ಯ ಪತ್ರಿಕೆಗಳೆಂದು ತಮ್ಮನ್ನು ಕರೆದುಕೊಳ್ಳದಿದ್ದರೂ ಸಾಹಿತ್ಯಿಕ ಬರೆಹಗಳಿಗೆ ಒತ್ತು ನೀಡುತ್ತಿದ್ದುವು. ವಿಶೇಷವೆಂದರೆ 19ನೆಯ ಶತಮಾನದ ಅಂತ್ಯದ ವೇಳೆಗೆ ಹಳೆಯ ಕನ್ನಡ ಕಾವ್ಯಗಳನ್ನು ಪ್ರಕಟಿಸು ವುದಕ್ಕಾಗಿಯೇ ಪತ್ರಿಕೆಗಳು ಹುಟ್ಟಿಕೊಂಡುವು. ಇವನ್ನು ಒಂದು ರೀತಿಯಲ್ಲಿ ಕನ್ನಡ ಸಾಹಿತ್ಯ ಪತ್ರಿಕೆಗಳ ಪುರ್ವ ರೂಪಗಳು, ಸಾಹಿತ್ಯ ಪತ್ರಿಕೆಗಳಿಗೆ ಭೂಮಿಕೆ ಸಿದ್ಧಮಾಡಿದ ಪತ್ರಿಕೆಗಳು ಎಂದು ಕರೆಯಬಹುದು. ಕರ್ನಾಟಕ ಭಾಷಾ ಸೇವಕ (1891), ಕರ್ನಾಟಕ ಕಾವ್ಯಮಂಜರಿ (1892), ಕರ್ನಾಟಕ ಗ್ರಂಥಮಾಲಾ (1893), ಕಾವ್ಯ ಕಲ್ಪದ್ರುಮ (1897) ಮೊದಲಾದ ಪತ್ರಿಕೆಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಕರ್ನಾಟಕ ಭಾಷಾ ಸೇವಕದಲ್ಲಿ ಪ್ರಾಚೀನ ಕಾವ್ಯಗಳ ಕನ್ನಡ ಭಾಷಾಂತರ ಅಥವಾ ರೂಪಾಂತರಗಳ ಜೊತೆಗೆ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಿಷಯಗಳು ಪ್ರಕಟಗೊಳ್ಳು ತ್ತಿದ್ದುವು. ಕರ್ನಾಟಕ ಕಾವ್ಯಮಂಜರಿ ಪ್ರಾಚೀನ ಕಾವ್ಯಗಳ ಪ್ರಕಟಣೆಗೇ ಮೀಸಲಾದ ಪತ್ರಿಕೆಯಾಗಿತ್ತು. ಕರ್ನಾಟಕ ಗ್ರಂಥಮಾಲ ಇಂಗ್ಲಿಷ್, ಬಂಗಾಲಿ, ಸಂಸ್ಕೃತ ಗ್ರಂಥಗಳನ್ನು ಅನುವಾದಿಸಿ ಗ್ರಂಥಮಾಲೆ ರೂಪದಲ್ಲಿ ಪ್ರಕಟಿಸುತ್ತಿತ್ತು. ಕಾವ್ಯಕಲ್ಪಧ್ರುಮ, ಸಂಸ್ಕೃತ ಮತ್ತು ಕನ್ನಡದಲ್ಲಿ ಪ್ರಕಟಗೊಳ್ಳುತ್ತಿತ್ತು. ಸಂಸ್ಕೃತ ಕಾವ್ಯ, ನಾಟಕಗಳ ಪ್ರಕಟಣೆ ಹಾಗೂ ಅನುವಾದ ಇದರ ಉದ್ದೇಶವಾಗಿತ್ತು. ಈ ಪತ್ರಿಕೆಗಳಿಗೆ ಸಾಹಿತ್ಯದೊಂದಿಗೆ ಅವಿನಾಭಾವ ಸಂಬಂಧವಿತ್ತು. ಇಂದಿನ ಅರ್ಥದಲ್ಲಿ ಅವುಗಳಿಗೆ ನಿಯತಕಾಲಿಕತೆ ಹಾಗೂ ಮುಂದುವರಿಕೆ ಇರಲಿಲ್ಲ. ಹೀಗಾಗಿ ಇವುಗಳನ್ನು ಪುರ್ಣಪ್ರಮಾಣದ ಸಾಹಿತ್ಯ ನಿಯತಕಾಲಿಕೆಗಳೆಂದು ಕರೆಯಲಾಗದು.

ಸುವಾಸಿನಿ (1900) ದಕ್ಷಿಣ ಕನ್ನಡ ಜಿಲ್ಲೆಯ ಮೇಲ್ಮಟ್ಟದ ಸಾಹಿತ್ಯಕ ಪತ್ರಿಕೆ. ಈ ಪತ್ರಿಕೆಗೆ ನಾಡಿನ ನಾನಾ ಭಾಗಗಳಿಂದ ಲೇಖಕರು ಬರೆಯುತ್ತಿ ದ್ದರು. ಕನ್ನಡದ ಸಣ್ಣಕಥೆ ಎಂಬ ಸಾಹಿತ್ಯ ಪ್ರಕಾರ ಉಗಮಿಸಿದ್ದು ಈ ಪತ್ರಿಕೆಯಲ್ಲಿ. ಕನ್ನಡ ಸಣ್ಣಕಥೆಗಳ ಜನಕರಲ್ಲೊಬ್ಬರೆಂದು ಹೆಸರಾಗಿರುವ ಪಂಜೆ ಮಂಗೇಶರಾಯರ ಸಣ್ಣಕಥೆಗಳು, ಬಿ. ವೆಂಕಟಾಚಾರ್ಯರ ಕಾದಂಬರಿ ಈ ಪತ್ರಿಕೆಯಲ್ಲಿ ಬೆಳಕು ಕಂಡವು. ಕನ್ನಡ ನವೋದಯ ಕಾವ್ಯದ ಆರಂಭದಲ್ಲಿ ಎರಡು ಪತ್ರಿಕೆಗಳು ಅಲ್ಪಕಾಲ ಪ್ರಕಟವಾದರೂ ಅವುಗಳನ್ನು ವಿಶೇಷವಾಗಿ ಗಮನಿಸಬೇಕು. ಪ್ರಭಾತ (1918) ಮತ್ತು ಕವಿತಾ (1919) ತದ್ರೂಪಿ ಪತ್ರಿಕೆಗಳು. ಇಡೀ ಪತ್ರಿಕೆ ಕವನಕ್ಕೇ ಮೀಸಲಾಗಿ, ಸಂಪಾದಕೀಯ, ಜಾಹೀರಾತು ಹಾಗೂ ಇತರ ಪ್ರಕಟಣೆಗಳೂ ಕವನದಲ್ಲೇ ಇದ್ದುವು. ಪ್ರಭಾತದಲ್ಲಿ ಆ ಕಾಲದ ಖ್ಯಾತ ಲೇಖಕರಾಗಿದ್ದ ಶಾಂತಕವಿಗಳು, ಕಾವ್ಯಾನಂದ ಪುಣೇಕರ, ವಲ್ಲಭ ಮಹಾಲಿಂಗ ಕಟ್ಟೆ, ಬಸವಾರ್ಯ, ಕಿತ್ತೂರ ಕನ್ನಡ ವಾಮನ, ಕರಿಬಸವಶಾಸ್ತ್ರಿ, ಎಂ.ಎನ್.ರೈನಾಪುರ, ಶ್ರೀನಿವಾಸ ಕಟ್ಟೆ, ದ.ರಾ.ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ ಮೊದಲಾದವರೆಲ್ಲರೂ ಕವಿತೆಗಳನ್ನು ಬರೆಯುತ್ತಿದ್ದರು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದೀರ್ಘಕಾಲದಿಂದ ಸಾಹಿತಿಗಳ ವೇದಿಕೆ ಯಾಗಿ, ಆಧುನಿಕ ಕನ್ನಡ ಸಾಹಿತ್ಯದ ಭಾಗವಾಗಿರುವ ಎರಡು ಪತ್ರಿಕೆಗಳು ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ (ನೋಡಿ) ಮತ್ತು ಪ್ರಬುದ್ಧ ಕರ್ಣಾಟಕ (ನೋಡಿ). ಈ ಪತ್ರಿಕೆಗಳು ಈಗಲೂ ತಮ್ಮ ಪ್ರಕಟಣೆಯನ್ನು ಮುಂದುವರಿಸಿವೆ. ಕನ್ನಡ ಸಾಹಿತ್ಯ 20ನೆಯ ಶತಮಾನ ಮೂರನೆಯ ದಶಕದಲ್ಲಿ ಮುಂದು ವರಿದಂತೆ ಕೋಟ ಶಿವರಾಮ ಕಾರಂತರ ವಸಂತ (1921), ಪಂಡಿತ ತಾರಾನಾಥರ ಪ್ರೇಮ (1923), ಆಲೂರು ವೆಂಕಟರಾಯರ ಜಯಕರ್ನಾಟಕ (1923), ಮಂಜೇಶ್ವರ ಅನಂತರಾಯರ ಕರ್ನಾಟಕ ಕೇಸರೀ (1928), ಅ.ನ.ಕೃಷ್ಣರಾಯರ ಕಥಾಂಜಲಿ (1929) ಮುಂತಾದ ಪತ್ರಿಕೆಗಳು ದಾಖಲಾದವು. ತಿಳಿನಗೆಯ ಲೇಖನಗಳಿಗೆ ಮೀಸಲಾದ ಕೊರವಂಜಿ (1942), ಇಂಗ್ಲಿಷ್ನ ರೀಡರ್ಸ್ ಡೈಜೆಸ್ಟ್‌ ಮಾದರಿಯ ಪುಸ್ತಕ ಪ್ರಪಂಚ (1943), ನವಚೇತನ (1944), ಶಕ್ತಿ (1950), ಹಂಸ (ಕೈಬರಹದ ಪತ್ರಿಕೆ 1951), ಲೇಖಕ (1953) - ಇವುಗಳು 20ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಪ್ರಕಟಣೆಯಲ್ಲಿದ್ದ ಮುಖ್ಯ ಸಾಹಿತ್ಯಕ ಪತ್ರಿಕೆಗಳು (ನೋಡಿ; ಕಥಾಂಜಲಿ, ಕೊರವಂಜಿ, ಪುಸ್ತಕ ಪ್ರಪಂಚ).

`ಕವಿತಾ' ಕವನ ಮತ್ತು ಕಾವ್ಯ ವಿಮರ್ಶೆಗಳ ಋತು ಪತ್ರಿಕೆಯೆಂದು ಘೋಷಿಸಿಕೊಂಡು ಒಂದು ದಶಕಕ್ಕೂ ಹೆಚ್ಚು ಕಾಲ ಬದುಕಿತ್ತು. ಇದರ ಪ್ರಧಾನ ಸಂಪಾದಕರು ಬಾ.ಕಿ.ನ. ಎರಡು ವರ್ಷಗಳ ಬಳಿಕ ಕವಿತಾ ಪತ್ರಿಕೆ ಸಾಗರಕ್ಕೆ ವರ್ಗಾವಣೆಗೊಂಡು ಸಾಗರದಿಂದ ಗೋಪಾಲಕೃಷ್ಣ ಅಡಿಗರು ಹೊರತರುತ್ತಿದ್ದ ಸಾಕ್ಷಿಯೊಂದಿಗೆ ಲೀನವಾಗಿ ಸಾಕ್ಷಿ ಮತ್ತು ಕವಿತಾ ಆಯಿತು. ಮತ್ತೆ ಕೆಲವರ್ಷ ಪ್ರಕಟಗೊಂಡು ದಶಕ ಪುರೈಸಿ ಕವಿತಾ ನಿಂತು ಹೋಯಿತು. ಲಹರಿ-ನವ್ಯದ ಸೃಜನಶೀಲರೇ ಸಾರಥ್ಯ ವಹಿಸಿಕೊಂಡ ಇನ್ನೊಂದು ಪತ್ರಿಕೆ. ಮೈಸೂರಿನಿಂದ ಪುರ್ಣಚಂದ್ರ ತೇಜಸ್ವಿ ಹಾಗೂ ಬಿ.ಎಸ್. ಶ್ರೀರಾಮ ಅವರ ಸಂಪಾದಕತ್ವದಲ್ಲಿ ಇದರ ಮಾಸಿಕ ಆರು ಸಂಚಿಕೆಗಳು ಪ್ರಕಟಗೊಂಡವು.

`ಸಂಕ್ರಮಣ' ಕನ್ನಡ ಸಾಹಿತ್ಯದಲ್ಲಿ ಬೆಳ್ಳಿ ಹಬ್ಬವನ್ನು ಕಂಡ ಕೆಲವೇ ಪತ್ರಿಕೆಗಳಲ್ಲಿ ಒಂದು. ನವ್ಯದ ಸಂದರ್ಭದಲ್ಲಿ ಅಂದರೆ 1965ರಲ್ಲಿ ಹುಟ್ಟಿದ ಈ ಪತ್ರಿಕೆ ನವ್ಯೋತ್ತರ ಸಾಹಿತ್ಯ ಸಂದರ್ಭದಲ್ಲಿ ನೀಡಿದ ಕೊಡುಗೆ ಮಹತ್ತ್ವವಾದುದು. ಸಂಕ್ರಮಣವನ್ನು ಧಾರವಾಡದಲ್ಲಿ ಹುಟ್ಟುಹಾಕಿದವರಲ್ಲಿ ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ ಹಾಗೂ ಸಿದ್ಧಲಿಂಗ ಪಟ್ಟಣ ಶೆಟ್ಟಿಯವರು ಪ್ರಮುಖರು. ಕಾಲಾನುಕ್ರಮದಲ್ಲಿ ಗಿರಡ್ಡಿ ಗೋವಿಂದರಾಜ ಮತ್ತು ಸಿದ್ಧಲಿಂಗ ಪಟ್ಟಣಶೆಟ್ಟಿಯವರು ಹಿಂದೆ ಸರಿದು ಚಂದ್ರಶೇಖರ ಪಾಟೀಲರು ಅದರ ಸಾರಥ್ಯ ವಹಿಸಿದರು. ಪಾಟೀಲರ ಹೆಂಡತಿ ನೀಲಾ ಪಾಟೀಲರು ಸಂಪಾದಕಿ ಯಾಗಿರುವ ಈ ಪತ್ರಿಕೆಯನ್ನು ಚಂಪಾ ರವರ ಪತ್ರಿಕೆಯೆಂದೇ ಗುರುತಿಸಲಾಗುತ್ತದೆ. ಸಮೀಕ್ಷಕ (1965), ಆನಂದ (1966), ಪ್ರಜ್ಞೆ (1968), ಅಜಂತ (1969), ಸಂಕೀರ್ಣ (1970)- ಈ ಅವಧಿಯಲ್ಲಿ ಪ್ರಕಟವಾದ ಇತರ ಸಾಹಿತ್ಯಕ ಪತ್ರಿಕೆಗಳು. `ಸಮನ್ವಯ' ವಿಭಿನ್ನ ಸಾಹಿತ್ಯ ಪ್ರಕಾರಗಳಿಗೆ ಸಮಾನ ವೇದಿಕೆಯಾಗುವ ಆಶಯದಿಂದ 1968ರಲ್ಲಿ ಬೆಂಗಳೂರಿನಿಂದ ಪ್ರಕಟಗೊಂಡ ತ್ರೈಮಾಸಿಕ ಪತ್ರಿಕೆ. ಇದರ ಸಂಪಾದಕರು ಪ.ಸು.ಭಟ್ಟ. `ಪ್ರತೀಕ' ರಾಯಚೂರಿನಿಂದ 1968ರಲ್ಲಿ ಪ್ರಕಾಶನಗೊಂಡರೆ `ಚಿಗುರೆಲೆ' ಮಂಡ್ಯದಿಂದ 1969ರಲ್ಲಿ ಬೆಳಕು ಕಂಡಿತು. ಚಿಗುರೆಲೆಗೆ ಪಂಡಿತ ಮ. ಮಲ್ಲಪ್ಪ ಸಂಪಾದಕರು. ಪ್ರತೀಕ ನವ್ಯ ಸಾಹಿತ್ಯಕ್ಕೆ ಒತ್ತುಕೊಟ್ಟು ಆ ಭಾಗದ ಲೇಖಕರನ್ನು ಪರಿಚಯಿಸಿತು. `ಮುಂಗಾರು' ಎಪ್ಪತ್ತರ ದಶಕದಲ್ಲಿ ಮಂಗಳೂರಿನಲ್ಲಿ ಮಿಂಚಿ ಮಾಯವಾದ ಸಾಹಿತ್ಯ ಪತ್ರಿಕೆ. ಆಗಸ್ಟ್‌ 1972ರಲ್ಲಿ ಈ ತ್ರೈಮಾಸಿಕದ ಮೊದಲ ಸಂಚಿಕೆ ಪ್ರಕಟವಾಯಿತು. ಪರಂಪರೆ (1972), ಕಾವ್ಯ (1973), ನೇತಿ (1973), ದಲಿತ (1974), ಮಣ್ಣಿನ ಬದುಕು (1974), ವರ್ತಮಾನ (1978) ಮುಂತಾದವು ಈ ಅವಧಿಯಲ್ಲಿ ಬೆಳಕು ಕಂಡ ಹಾಗೂ ರಮ್ಯ-ನವ್ಯ-ನವ್ಯೋತ್ತರದ ಚರ್ಚೆಗಳಿಗೆ ವೇದಿಕೆಯಾದ ಪತ್ರಿಕೆಗಳು. ಇದೇ ಹೊತ್ತಿಗೆ ಬೆಂಗಳೂರು ವಿಶ್ವವಿದ್ಯಾಲಯದ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಸಾಧನೆ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಅರ್ಧವಾರ್ಷಿಕ ಸಾಹಿತ್ಯ ಪತ್ರಿಕೆ ಕರ್ನಾಟಕ ಭಾರತೀ ಪ್ರಕಟಣೆ ಆರಂಭಿಸಿದುವು. ಮೈಸೂರು ವಿಶ್ವವಿದ್ಯಾನಿಲಯ ಪ್ರಬುದ್ಧ ಕರ್ಣಾಟಕದ ಪ್ರಕಟಣೆಯೊಂದಿಗೆ ವಿಜ್ಞಾನ ಕರ್ಣಾಟಕ ಮತ್ತು ಮಾನವಿಕ ಕರ್ಣಾಟಕಗಳೆಂಬ ಎರಡು ಶಾಸ್ತ್ರೀಯ ಅಧ್ಯಯನಕ್ಕೆ ಮೀಸಲಾದ ತ್ರೈಮಾಸಿಕಗಳನ್ನು ಪ್ರಾರಂಭಿಸಿತು. ಕನ್ನಡ ವಿಶ್ವವಿದ್ಯಾಲಯ ವಿವಿಧ ವಿಷಯಗಳನ್ನಾಧರಿಸಿ ನಿಯತಕಾಲಿಕೆಗಳನ್ನು ಹೊರತರುತ್ತಿರುವುದಲ್ಲದೆ ಕನ್ನಡ ಪ್ರಕಟಣೆಗಳ ಸೂಚಿಯನ್ನು ಪ್ರಕಟಿಸುತ್ತಿದೆ. ಮಹಿಳಾ ಅಧ್ಯಯನ ವೆಂಬ ವಿಶಿಷ್ಟ ನಿಯತಕಾಲಿಕವೂ ಇವುಗಳಲ್ಲಿ ಒಂದು. ಮುಕ್ತ ಚರ್ಚೆಗಾಗಿ ಶೂದ್ರ ಎಂಬ ತಿಂಗಳ ಪತ್ರಿಕೆ 1975ರಲ್ಲಿ ಆರಂಭಗೊಂಡಿತು. ಈ ಪತ್ರಿಕೆಯಿಂದಾಗಿ ಅದೇ ಹೆಸರು ಪಡೆದ ಶೂದ್ರ ಶ್ರೀನಿವಾಸ ಇದರ ಸಂಪಾದಕರು. ವೈಯಕ್ತಿಕ ಪ್ರಯತ್ನವಾಗಿಯೂ ಎರಡು ದಶಕಕ್ಕೂ ಹೆಚ್ಚು ಕಾಲ ಜೀವಂತವಿದ್ದ ಸಾಹಿತ್ಯ ಪತ್ರಿಕೆಗಳಲ್ಲಿ ಇದು ಒಂದಾಗಿತ್ತು. ಒಡನಾಡಿ (1975), ಕಾದಂಬರಿ (1977), ಬದುಕು (1977), ಪುಸ್ತಕ ಪುರವಣಿ (1977), ಗ್ರಂಥಲೋಕ ಈ ಅವಧಿಯಲ್ಲಿ ದಾಖಲಾದ ಕೆಲ ಪತ್ರಿಕೆಗಳು. 80ರ ದಶಕದಲ್ಲಿ ಕನ್ನಡದಲ್ಲಿ ಬಂಡಾಯ-ದಲಿತ ಚಳವಳಿ ಹುಟ್ಟಿಕೊಂಡು ಅನೇಕ ಸಾಹಿತ್ಯ ಪತ್ರಿಕೆಗಳ ಹುಟ್ಟಿಗೂ ಕಾರಣವಾದವು. ಈ ಪತ್ರಿಕೆಗಳು ದಲಿತ-ಬಂಡಾಯ ಚಳವಳಿಯನ್ನೂ ಬೆಳೆಸಿದುವು. ಬಂಡಾಯ ಸಾಹಿತ್ಯ (1983), ಸೃಜನವೇದಿ (1984), ಅನ್ವೇಷಣೆ (1984), ಅಂತರ (1986), ಸಂವಾದ (1986), ಕವಿಮಾರ್ಗ (1987), ಸಾಹಿತ್ಯ ಸಂಗಾತಿ (1989), ಒಡಲಾಳ (1990), ಚ. ಏಕಾಕ್ಷರ ಪತ್ರಿಕೆ (1992),ಸಾಹಿತ್ಯ ಸಂಘರ್ಷ (1992), ಹೊಸದಿಕ್ಕು (1992), ಪ್ರಜ್ಞೆ (1993) - ಇವು ಮುಖ್ಯವಾಗಿ ಇಪ್ಪತ್ತನೆಯ ಶತಮಾನದ ಕೊನೆಯ ಎರಡು ದಶಕಗಳಲ್ಲಿ ದಲಿತ - ಬಂಡಾಯ ಸಾಹಿತ್ಯ ಚಳವಳಿಗೆ ನೀರೆರೆದು ಪೋಷಿಸಿದ, ಅವುಗಳ ಸಾಧನೆ ಸೋಲುಗಳಿಗೆ ಸಾಕ್ಷಿಯಾದ ಪತ್ರಿಕೆಗಳು.

ಇದೇ ವೇಳೆಗೆ ದಲಿತ ಬಂಡಾಯಕ್ಕೆ ಸೀಮಿತವೆನಿಸಿಕೊಳ್ಳದ ಯಾವುದೇ ಚಳವಳಿಗೆ ವೇದಿಕೆಯಾಗದೇ ಶುದ್ಧ ಸಾಹಿತ್ಯಕ ವೇದಿಕೆಯಾದ ಅನೇಕ ಪತ್ರಿಕೆಗಳೂ ಇದ್ದುವು. ಉದಾಹರಣೆಗೆ ಕನ್ನಡ ಸಾಹಿತ್ಯ ಪತ್ರಿಕೆಗಳ ಪೈಕಿ ವಿಶಿಷ್ಟ ಸ್ಥಾನ ಪಡೆದ `ರುಜುವಾತು' ಆರಂಭಗೊಂಡಿದ್ದು 1982ರಲ್ಲಿ. `ಸೃಜನಶೀಲ ಹೊಸ ಪ್ರಯೋಗಗಳಿಗಾಗಿ, ಹೊಸ ದಿಕ್ಕಿನ ಹುಡುಕಾಟಕ್ಕಾಗಿ ನಮ್ಮ ಸಾಮಾಜಿಕ, ಸಾಂಸ್ಕೃತಿಕ ಸಂದರ್ಭದ ಶೋಧಕ್ಕಾಗಿ' ಎಂಬುದು ರುಜುವಾತಿನ ಘೋಷಣೆ. ಕನ್ನಡದ ಹಿರಿಯ ಸಾಹಿತಿ, ವಿಮರ್ಶಕ ಯು.ಆರ್. ಅನಂತಮೂರ್ತಿ (ನೋಡಿ) ಈ ಪತ್ರಿಕೆಯ ಸಂಪಾದಕರು. ತ್ರೈಮಾಸಿಕವಾಗಿ ಆರಂಭವಾದ ಇದು ಕನಿಷ್ಠ 25 ಸಂಚಿಕೆಗಳವರೆಗೆ ನಿಯತವಾಗಿಯೇ ಬಂದಿತು. ಸದ್ಯಕ್ಕೆ ರುಜುವಾತು ಅನಿಯತಕಾಲಿಕವಾಗಿ ಪ್ರಕಟಗೊಳ್ಳುತ್ತಿದೆ.

ಲೋಚನ (1982), ಚಂದನ (1984), ಸಂಚಯ (1987), ಅನಿಕೇತನ (1988), ಗಾಂಧಿಬಜಾರ್ (1988), ಕನ್ನಡ ಸಾಹಿತ್ಯ ಲೋಕ (1993), ಪುಸ್ತಕ ಮಾಹಿತಿ (1993)-ಇವಿಷ್ಟು ನವ್ಯ, ದಲಿತ, ಬಂಡಾಯ ಎಂಬ ಘೋಷಣೆಯ ಹಣೆಪಟ್ಟಿಯ ಹಂಗಿಲ್ಲದೇ ಶುದ್ಧ ಸಾಹಿತ್ಯ ಪತ್ರಿಕೆಗಳಾಗಿ ಕನ್ನಡದಲ್ಲಿ ಬೆಳಕು ಕಂಡಂಥವು. ಇತ್ತೀಚೆಗೆ ದೇಶಗತಿ ಎಂಬ ಪತ್ರಿಕೆ ಪ್ರಕಟವಾಗುತ್ತಿದೆ.

ಈಗ 20ನೆಯ ಶತಮಾನ ಮುಗಿದು ಜಗತ್ತು 21ನೆಯ ಶತಮಾನಕ್ಕೆ ಕಾಲಿರಿಸಿದೆ. ಕ್ಷಣಕ್ಷಣಕ್ಕೂ ಪ್ರಪಂಚದ ಮಟ್ಟದಲ್ಲಿ ಅನೇಕ ರೀತಿಯ ಬದಲಾವಣೆಗಳಾಗುತ್ತಿವೆ. ಅದರ ಪರಿಣಾಮ ಕರ್ನಾಟಕದ ಮೇಲೆ, ಒಟ್ಟಾರೆ ಕನ್ನಡ ಸಾಹಿತ್ಯ ಸಂದರ್ಭದ ಮೇಲೂ ಆಗಿದೆ, ಆಗುತ್ತಿದೆ. ಈಗ ಕನ್ನಡದ ದೊಡ್ಡ ಪತ್ರಿಕೆಗಳೇ ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. ಬೆಲೆಯಿಳಿಸಿಕೊಂಡು ಪ್ರಸಾರ ಹೆಚ್ಚಿಸಿಕೊಳ್ಳುವ ಕಸರತ್ತಿನಲ್ಲಿ ಸ್ಪರ್ಧೆಗಿಳಿ ದಿವೆ. ದಶಕದ ಹಿಂದೆ ಕೈಗಾರಿಕೆ ಹಾಗೂ ವಾಣಿಜ್ಯ ವ್ಯವಹಾರಗಳಿಂದಾ ಗುವ ಮುದ್ರಣ ಮಾಧ್ಯಮಕ್ಕೆ ಬರುತ್ತಿದ್ದ ಜಾಹೀರಾತುಗಳು ದೂರದರ್ಶನ ಚಾನಲುಗಳ ಪಾಲಾಗುತ್ತಿವೆ. ಹೀಗಾಗಿ ಪತ್ರಿಕೆಗಳ ಜಾಹೀರಾತು ಆದಾಯ ಶೇಕಡಾವಾರು ಇಳಿಕೆಗಂಡಿದೆ. ಪತ್ರಿಕೆಗಳ ನಡುವಿನ ಪ್ರಸಾರದ ಸ್ಪರ್ಧೆಯಲ್ಲಿ ಪ್ರಸಾರವೂ ಇಳಿಮುಖವಾಗಿದೆ. ಮಾಹಿತಿ ತಂತ್ರಜ್ಞಾನ ಪ್ರವೇಶದಿಂದ ಪತ್ರಿಕೋದ್ಯಮ ರಂಗದಲ್ಲಿ ಕ್ರಾಂತಿಕಾರಕವಾದ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿವೆ. ಮಾಹಿತಿ ಜ್ಞಾನದ ದೃಷ್ಟಿಯಿಂದ ಈಗ ಪ್ರಪಂಚ ಜಾಗತಿಕ ಹಳ್ಳಿಯಾಗಿ ಪರಿವರ್ತಿತವಾಗುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries