ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಭಾನುವಾರ ಸರ್ವ ಪಕ್ಷ ಸಭೆಯನ್ನು ಕರೆದಿದೆ. ಅಂದು ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಈ ಮಧ್ಯೆ ಭಾನುವಾರ ಸಂಜೆ 4 ಗಂಟೆಗೆ ಸರ್ವ ಪಕ್ಷ ಸದನ ನಾಯಕರ ಸಭೆಯನ್ನು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕರೆದಿದ್ದಾರೆ. ಅದೇ ದಿನ ಎನ್ ಡಿಎ ಸದನ ನಾಯಕರ ಸಭೆ ನಡೆಯಲಿದ್ದು, ಪ್ರಧಾನಿ ಮೋದಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಸಂಸತ್ತಿನ ಮುಂಗಾರು ಅಧಿವೇಶ ಜುಲೈ 19 ರಿಂದ ಆರಂಭವಾಗಲಿದ್ದು, ಆಗಸ್ಟ್ 13 ರಂದು ಮುಕ್ತಾಯವಾಗಲಿದೆ. 19 ದಿನ ಕಾರ್ಯಕಲಾಪಗಳು ನಡೆಯಲಿವೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ನಡೆಯಲಿದೆ.
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಆರೋಗ್ಯ ಸುರಕ್ಷತಾ ಶಿಷ್ಟಾಚಾರದ ಪ್ರಕಾರ ಅಧಿವೇಶನ ಸಂದರ್ಭದಲ್ಲಿ ಕೋವಿಡ್-19 ಶಿಷ್ಟಾಚಾರ ಪಾಲನೆಗೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸದನದಲ್ಲಿ ಸಾಮಾಜಿಕ ಅಂತರ ಪಾಲನೆಯೊಂದಿಗೆ ಸದಸ್ಯರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದು ಓಂ ಬಿರ್ಲಾ ತಿಳಿಸಿದ್ದಾರೆ.