ನವದೆಹಲಿ :ಹದಿನೇಳು ವರ್ಷದಿಂದ ಒಬ್ಬಂಟಿ ಜೀವನ ಸಾಗಿಸುತ್ತಿರುವ 'ಶಂಕರ'ನಿಗೆ ಆಫ್ರಿಕಾದಿಂದ ಸಂಗಾತಿಯನ್ನು ಕರೆ ತನ್ನಿ ಎಂದು ದೆಹಲಿ ಹೈಕೋರ್ಟ್ ಬುಧವಾರ ಆದೇಶ ನೀಡಿದೆ.
ದೆಹಲಿ ಮೃಗಾಲಯದಲ್ಲಿ ಹದಿನೇಳು ವರ್ಷಗಳಿಂದ ಈ ಆಫ್ರಿಕನ್ ಆನೆ ಒಬ್ಬಂಟಿಯಾಗಿದೆ.
1998ರಲ್ಲಿ ರಾಷ್ಟ್ರಪತಿಯಾಗಿದ್ದ ಶಂಕರ್ ದಯಾಳ್ ಶರ್ಮಾ ಅವರಿಗೆ ಜಿಂಬಾಬ್ವೆ ಸರ್ಕಾರ, ಎರಡು ಆಫ್ರಿಕನ್ ಆನೆಗಳನ್ನು ಉಡುಗೊರೆಯಾಗಿ ನೀಡಿತ್ತು. ಇವುಗಳಿಗೆ ಶಂಕರ ಹಾಗೂ ಬೊಂಬಾಯಿ ಎಂದು ಹೆಸರಿಡಲಾಗಿತ್ತು. ಹೆಣ್ಣಾನೆ ಬೊಂಬಾಯಿ 2005ರಲ್ಲಿ ಮೃತಪಟ್ಟ ಬಳಿಕ ಶಂಕರ ಒಂಟಿ ಬದುಕು ಸವೆಸುತ್ತಿತ್ತು.
ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಅವರನ್ನೊಳಗೊಂಡ ಹೈಕೋರ್ಟ್ ಪೀಠ, ಈ ಸಂಬಂಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಆಫ್ರಿಕನ್ ಆನೆಯನ್ನು ವಾಪಾಸು ಕಳುಹಿಸದಂತೆ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಮತ್ತು ಭಾರತದ ಪ್ರಾಣಿ ಕಲ್ಯಾಣ ಮಂಡಳಿಗೆ ಸೂಚಿಸಿದೆ. ಆನೆಯ ಬಗ್ಗೆ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದೆ.
ಆನೆಯನ್ನು ವಾಪಾಸು ಕಳುಹಿಸಲು ಕೋರಿದ್ದ ಮನವಿಗೆ, "ಅದಕ್ಕೆ ನಾವು ಅನುಮತಿ ನೀಡುವುದಿಲ್ಲ. ಇದನ್ನು ನಾವು ಭಾರತದಲ್ಲೇ ಇಟ್ಟುಕೊಳ್ಳುತ್ತೇವೆ. ಇಲ್ಲೇ ಆತನ ಆರೈಕೆ ಮಾಡಬೇಕು. ಆತ ನಮ್ಮವನು. ನಾವು ಆತನನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ. ಭಯ ಬೇಡ" ಎಂದು ಕೊರ್ಟ್ ಹೇಳಿದೆ.
ಈ ಅನೆಯನ್ನು ಯಾವುದೇ ವನ್ಯಧಾಮ ಅಥವಾ ರಾಷ್ಟ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆಯೂ ನ್ಯಾಯಾಲಯ ಆದೇಶ ನೀಡಿದೆ. ಜತೆಗೆ ದಕ್ಷಿಣ ಆಫ್ರಿಕಾದಿಂದ ಶಂಕರನಿಗೆ ಸಂಗಾತಿಯನ್ನು ತರುವ ಬಗ್ಗೆಯೂ ಪರಿಶೀಲಿಸುವಂತೆ ಸೂಚಿಸಿದೆ.