ನವದೆಹಲಿ: ಜುಲೈ 15 ರಿಂದ ಪ್ರಾರಂಭವಾಗುವ 75 ದಿನಗಳ ವಿಶೇಷ ಅಭಿಯಾನದಡಿಯಲ್ಲಿ 18 ವರ್ಷದಿಂದ 59 ವಯಸ್ಸಿನವರಿಗೆ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಅಥವಾ ಬೂಸ್ಟರ್ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.
ಕೋವಿಡ್ ಮುನ್ನೆಚ್ಚರಿಕೆ ಡೋಸ್ ಅನ್ನು ಹೆಚ್ಚು ಜನರಿಗೆ ನೀಡುವ ಗುರಿಯನ್ನು ಹೊಂದಿರುವ ಈ ಅಭಿಯಾನ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿಯವರೆಗೆ 18 ರಿಂದ 59 ವಯೋಮಾನದ 77 ಕೋಟಿ ಜನಸಂಖ್ಯೆಯಲ್ಲಿ ಶೇಕಡಾ 1 ಕ್ಕಿಂತ ಕಡಿಮೆ ಜನರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ.
ಭಾರತೀಯ ಜನಸಂಖ್ಯೆಯ ಬಹುಪಾಲು ಜನರು ಒಂಬತ್ತು ತಿಂಗಳ ಹಿಂದೆಯೇ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಮತ್ತು ಇತರ ಅಂತರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳ ಅಧ್ಯಯನಗಳು, ಲಸಿಕೆ ಪಡೆದ ಆರು ತಿಂಗಳ ನಂತರ ಪ್ರತಿಕಾಯ ಮಟ್ಟಗಳು ಕ್ಷೀಣಿಸುತ್ತವೆ ಎಂದು ಹೇಳಿವೆ. ಹೀಗಾಗಿ ಕೊರೋನಾದಿಂದ ಮತ್ತಷ್ಟು ರಕ್ಷಣೆ ಪಡೆಯಲು ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಎಲ್ಲಾ ಫಲಾನುಭವಿಗಳಿಗೆ ಅಔಗಿIಆ-19 ಲಸಿಕೆಯ ಎರಡನೇ ಮತ್ತು ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವನ್ನು ಒಂಬತ್ತರಿಂದ ಆರು ತಿಂಗಳವರೆಗೆ ಕಡಿಮೆ ಮಾಡಿದೆ. ಇದು ಪ್ರತಿರಕ್ಷಣೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಶಿಫಾರಸನ್ನು ಅನುಸರಿಸಿದೆ.
ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ಮತ್ತು ಬೂಸ್ಟರ್ ಶಾಟ್‌ಗಳನ್ನು ಉತ್ತೇಜಿಸಲು ಸರ್ಕಾರವು ಜೂನ್ 1 ರಂದು ರಾಜ್ಯಗಳಾದ್ಯಂತ ‘ಹರ್ ಘರ್ ದಸ್ತಕ್ ಅಭಿಯಾನ 2.0’ ನ ಎರಡನೇ ಸುತ್ತನ್ನು ಪ್ರಾರಂಭಿಸಿತು. ಎರಡು ತಿಂಗಳ ಕಾರ್ಯಕ್ರಮವು ಪ್ರಸ್ತುತ ನಡೆಯುತ್ತಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ 96 ಪ್ರತಿಶತದಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ. ಶೇಕಡಾ 87 ರಷ್ಟು ಜನ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ.