ನವದೆಹಲಿ: ಒಂದು ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ನೊಂದಿಗೆ ಮಾಡೆಲ್ ಹಾಗೂ ಆತನ ಸ್ನೇಹಿತನನ್ನು ದೆಹಲಿ ಪೊಲೀಸರು ಇಂದು ಬಂಧಿಸಿದ್ದಾರೆ. ಆರೋಪಿಗಳು ದೆಹಲಿ ವಿಶ್ವವಿದ್ಯಾನಿಲಯ ಕ್ಯಾಂಪಸ್ ಸುತ್ತ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು 25 ವರ್ಷದ ಶುಭಂ ಮಲ್ಹೋತ್ರಾ ಮತ್ತು ಆತನ ಸ್ನೇಹಿತ 27 ವರ್ಷದ ಕೀರ್ತಿ ಎಂದು ತಿಳಿದುಬಂದಿದ್ದು ಹಿಮಾಚಲ ಪ್ರದೇಶದಿಂದ ಡ್ರಗ್ಸ್ ತಂದು ದೆಹಲಿಯಲ್ಲಿ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಕೆಲವರು ದೆಹಲಿ ವಿಶ್ವವಿದ್ಯಾನಿಲಯಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಾರೆ ಎಂಬ ಮಾಹಿತಿ ಪಡೆದ ನಂತರ ದೆಹಲಿ ಪೊಲೀಸರು ತನಿಖೆ ಆರಂಭಿಸಿದರು ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ರೋಹಿತ್ ಮೀನಾ ಹೇಳಿದ್ದಾರೆ. ಶುಭಂ ಮತ್ತು ಆತನ ಸ್ನೇಹಿತ ಕೀರ್ತಿ ಹಿಮಾಚಲದಿಂದ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ತಪಾಸಣೆಗಳನ್ನು ತಪ್ಪಿಸಿಕೊಳ್ಳಲು ಕೀರ್ತಿ ದಿಂಬನ್ನು ಬಳಸಿ ಗರ್ಭಿಣಿಯಂತೆ ನಟಿಸುತ್ತಿದ್ದಳು ಎಂಬುದು ಪತ್ತೆಯಾಗಿದೆ. ಶುಭಂ ಹಿಮಾಚಲದಲ್ಲಿರುವ ಬಗ್ಗೆ ಜುಲೈ 12ರಂದು ಅಪರಾಧ ವಿಭಾಗಕ್ಕೆ ಮಾಹಿತಿ ಸಿಕ್ಕಿತ್ತು. ಅವರು ಹಿಂದಿರುಗುವಾಗ ಇಬ್ಬರನ್ನು ಹಿಡಿಯಲು ದೆಹಲಿಯ ಸಿಂಧೂ ಗಡಿಯಲ್ಲಿ ಬಲೆ ಬೀಸಿದರು. ಭಾರೀ ಮಳೆಯ ನಡುವೆ ಬೆನ್ನಟ್ಟಿದ ಪೊಲೀಸರು ದೆಹಲಿಯ ಗುಪ್ತಾ ಚೌಕ್‌ನಲ್ಲಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.