ಕಾಸರಗೋಡು: ಸಾಲದ ಸುಳಿಯಲ್ಲಿ ಸಿಲುಕಿ ಹೊಸದಾಗಿ ನಿರ್ಮಿಸಿದ ಮನೆಯನ್ನೇ ಮಾರಲು ಹೊರಟಿದ್ದ ಕೇರಳದ ಪೇಂಟರ್ ಒಬ್ಬರಿಗೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಲಾಟರಿ ಹೊಡೆದಿದ್ದು, ಅದೃಷ್ಟ ಲಕ್ಷ್ಮೀಯೆ ಮನೆ ಬಾಗಿಲಿಗೆ ಬಂದು ಆ ಮನೆಯ ಸಂಕಷ್ಟಗಳನ್ನು ದೂರವಾಗಿಸಿದೆ.
ಸಾಲಗಾರರಿಂದ ಬೇಸತ್ತು ಪಾವೂರ್‌ನ ಮೊಹಮ್ಮದ್ ಬಾವ(50) ಅವರು ಮಂಜೇಶ್ವರದಲ್ಲಿ ಹೊಸದಾಗಿ ನಿರ್ಮಿಸಿದ ಮನೆ ಮಾರಾಟಕ್ಕಿಟ್ಟಿದ್ದರು. ಮನೆಗೆ ಟೋಕನ್ ಹಣ ಸ್ವೀಕರಿಸುವ ಎರಡು ಗಂಟೆಗಳ ಮೊದಲು ಅವರಿಗೆ 1 ಕೋಟಿ ರೂಪಾಯಿ ಲಾಟರಿ ಬಹುಮಾನ ಲಭಿಸಿದೆ. ಭಾರೀ ಸಾಲದ ಸುಳಿಯಲ್ಲಿ ತತ್ತರಿಸಿರುವ ಬಾವ ಮತ್ತು ಅವರ ಪತ್ನಿ ಅಮೀನಾ(45) ಅವರು ಎಂಟು ತಿಂಗಳ ಹಿಂದೆ ನಿರ್ಮಿಸಿದ 2,000 ಚದರ ಅಡಿಯ ತಮ್ಮ ಮನೆಯನ್ನು ಮಾರಾಟಕ್ಕಿಟ್ಟಿದ್ದರು.
"ನಾನು ನಮ್ಮ ಮನೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ. ಆದರೆ ನನಗೆ ಲಾಟರಿ ಹೊಡೆದಿದೆ ಎಂದು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಮಂಜೇಶ್ವರದ ಪಾವೂರ್‌ನ ಮೊಹಮ್ಮದ್ ಬಾವ ಅವರು ಹೇಳಿದ್ದಾರೆ.
ಭಾನುವಾರ ಸಂಜೆ 5 ಗಂಟೆಗೆ, ಮನೆ ಖರೀದಿಗಾಗಿ ಟೋಕನ್ ಹಣ ನೀಡಲು ನಮ್ಮ ಮನೆಗೆ ಬರುವುದಾಗಿ ಒಬ್ಬರು ಒಪ್ಪಿಕೊಂಡಿದ್ದರು. “ನಮಗೆ 45 ಲಕ್ಷ ರೂಪಾಯಿ ಸಾಲ ಇರುವುದರಿಂದ ಮನೆಗೆ 45 ಲಕ್ಷ ರೂಪಾಯಿ ಬೇಕಿತ್ತು. ಆದರೆ ಅಂತಿಮವಾಗಿ ದಲ್ಲಾಳಿ ಮೂಲಕ 40 ಲಕ್ಷ ರೂಪಾಯಿಗೆ ಮನೆ ಮಾರಲು ಒಪ್ಪಿಕೊಂಡಿದ್ದೇವು ಮತ್ತು ಮಕ್ಕಳ ಸಮೇತ ಬಾಡಿಗೆ ಮನೆಗೆ ತೆರಳಿದ್ದೇವು ಎಂದು ಬಾವ ತಿಳಿಸಿದ್ದಾರೆ.
ಈ ದಂಪತಿಗಳು ಮನೆ ಕಟ್ಟಲು ಬ್ಯಾಂಕ್ ನಿಂದ 10 ಲಕ್ಷ ರೂಪಾಯಿ ಸಾಲ ಮತ್ತು ಸಂಬಂಧಿಕರಿಂದ ಇನ್ನೂ 20 ಲಕ್ಷ ರೂಪಾಯಿ ಸಾಲ ಪಡೆದಿದ್ದರು. "ಇದಾದ ಕೆಲವೇ ದಿನಗಳಲ್ಲಿ, ನಾವು ನಮ್ಮ ಎರಡನೇ ಮಗಳ ಮದುವೆಗೆಂದು ಮತ್ತಷ್ಟು ಸಾಲ ಮಾಡಿಕೊಂಡಿದ್ದೇವು" ಎಂದು ಬಾವಾ ಹೇಳಿದ್ದಾರೆ.
ಕೇರಳ ಸರ್ಕಾರ ನಡೆಸುವ ಫಿಫ್ಟಿ ಫಿಫ್ಟಿ ಲಾಟರಿಯ ನಾಲ್ಕು ಟಿಕೆಟ್ ಖರೀದಿಸಿದ್ದ ಬಾವ ಅವರಿಗೆ 1 ಕೋಟಿ ರೂಪಾಯಿ ಜಾಕ್ ಪಾಟ್ ಹೊಡೆದಿದ್ದು, ಆದಾಯ ತೆರಿಗೆ ಕಡಿತವಾಗಿ ಸುಮಾರು 63 ಲಕ್ಷ ರೂಪಾಯಿ ಅವರ ಕೈಸೇರಲಿದೆ.