ನವದೆಹಲಿ: 'ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ'ವು ಸಾಮೂಹಿಕ ಆಂದೋಲನವಾಗಿ ಬದಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ಆಗಸ್ಟ್ 2 ಮತ್ತು 15 ರ ನಡುವಿನ ಅವಧಿಯಲ್ಲಿ ದೇಶದ ನಾಗರಿಕರು ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳ ಪ್ರೊಫೈಲ್ ಚಿತ್ರವಾಗಿ 'ತಿರಂಗ'ವನ್ನು ಬಳಸುವಂತೆ ಅವರು ಒತ್ತಾಯಿಸಿದ್ದಾರೆ.
ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ಭಾನುವಾರ ಮಾತನಾಡಿರುವ ಅವರು, 'ಆಗಸ್ಟ್ 13 ರಿಂದ 15 ರವರೆಗೆ 'ಸ್ವಾಂತ್ರ್ಯೋತ್ಸವದ ಅಮೃತಮಹೋತ್ಸವದ'ದ ಅಡಿಯಲ್ಲಿ 'ಹರ್ ಘರ್ ತಿರಂಗ' ಎಂಬ ವಿಶೇಷ ಆಂದೋಲನವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
'ನಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಈ ಆಂದೋಲನವನ್ನು ಮತ್ತಷ್ಟು ವ್ಯಾಪಕವಾಗಿಸೋಣ' ಎಂದೂ ಅವರು ಕರೆ ನೀಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಖಾತೆಗಳನ್ನು ಹೊಂದಿರುವವರು ಆಗಸ್ಟ್ 2ರಿಂದ 15 ವರೆಗೆ ತಮ್ಮ ಪ್ರೊಫೈಲ್ ಚಿತ್ರವಾಗಿ ತ್ರಿವರ್ಣ ಧ್ವಜವನ್ನು ಬಳಸಬೇಕು ಎಂದು ಮೋದಿ ಜನರನ್ನು ಒತ್ತಾಯಿಸಿದರು.
ಅಮೃತ ಮಹೋತ್ಸವವು ಸಾಮೂಹಿಕ ಆಂದೋಲನದ ರೂಪ ಪಡೆಯುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಪ್ರಧಾನಿ ಹೇಳಿದರು.
ಈ ಮಹೋತ್ಸವದ ಅಂಗವಾಗಿ ಸಮಾಜದ ಎಲ್ಲಾ ವರ್ಗದ ಜನರು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
'ಭಾರತವು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವೆಲ್ಲರೂ ಅದ್ಭುತ ಮತ್ತು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದೇವೆ' ಎಂದು ಮೋದಿ ಹೇಳಿದರು.