ನವದೆಹಲಿ: ಸಂಸತ್ ನ ಮುಂಗಾರು ಅಧಿವೇಶನದಲ್ಲಿ ತೀವ್ರ ಗದ್ದಲ ಉಂಟಾಗಿದ್ದು 2 ವಾರಗಳ ಕಾಲವೂ ಸಂಸತ್ ನ ಕಲಾಪಗಳು ವ್ಯರ್ಥವಾಗಿವೆ.
ಈ ಅಧಿವೇಶನದ ಅವಧಿಯಲ್ಲಿ ಕೇಂದ್ರ ಸರ್ಕಾರ 32 ಮಸೂದೆಗಳನ್ನು ಅಂಗೀಕರಿಸುವ ತಯಾರಿಯಲ್ಲಿತ್ತು. ಆದರೆ ಈಗ ಅಧಿವೇಶನ ಪ್ರಾರಂಭವಾಗಿ 2 ವಾರಗಳೇ ಕಳೆದರೂ 32 ಮಸೂದೆಗಳು ಅಂಗೀಕಾರವಾಗದೇ ಬಾಕಿ ಉಳಿದಿದೆ.
ಜಿಎಸ್ ಟಿ ಬೆಲೆ ಏರಿಕೆ ಹಾಗೂ ಹಣದುಬ್ಬರದ ವಿಷಯವಾಗಿ ಪ್ರತಿಪಕ್ಷಗಳು ಸಂಸತ್ ಕಲಾಪದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಗದ್ದಲ ಉಂಟಾದ ಪರಿಣಾಮ ಕಲಾಪ ವ್ಯರ್ಥವಾಗುತ್ತಿದೆ. ಮುಂಗಾರು ಅಧಿವೇಶನದಲ್ಲಿ ಲೋಕಸಭೆ ಈ ವರೆಗೂ ಅಂದಾಜು 16 ಗಂಟೆಗಳು ಕೆಲಸ ಮಾಡಿದ್ದರೆ, ರಾಜ್ಯಸಭೆ ಕೇವಲ 11 ಗಂಟೆಗಳು ಕೆಲಸ ಮಾಡಿದೆ. ದಿನಂಪ್ರತಿ ಉಭಯ ಸದನಗಳು 6 ಗಂಟೆಗಳ ಕಾಲ ಕಾರ್ಯನಿರ್ವಹಿಸುವುದು ನಿಗದಿಯಾಗಿತ್ತು.
ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆಯ 4 ಸಂಸದರು ಹಾಗೂ 23 ರಾಜ್ಯಸಭೆ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಇನ್ನು ರಾಷ್ಟ್ರಪತಿಗಳ ವಿಷಯದಲ್ಲಿ ವಿಪಕ್ಷಗಳ ಹೇಳಿಕೆಗೆ ಸರ್ಕಾರವೂ ತೀವ್ರ ವಾಗ್ದಾಳಿ ನಡೆಸಿತ್ತು. ಈ ಗದ್ದಲಗಳ ನಡುವೆಯೇ ಸರ್ಕಾರ ಲೋಕಸಭೆಯಲ್ಲಿ ಡೋಪಿಂಗ್ ವಿರೋಧಿ ಮಸೂದೆ ಮತ್ತು ಕೌಟುಂಬಿಕ ನ್ಯಾಯಾಲಯದ ಮಸೂದೆಯನ್ನು ಅಂಗೀಕಾರ ಪಡೆದಿದೆ.
ಈಗ ಸರ್ಕಾರ ಬೆಲೆ ಏರಿಕೆ ವಿಷಯ ಚರ್ಚಿಸಲು ಸಿದ್ಧವಿದೆ ಎನ್ನುತ್ತಿದ್ದಾರೆ ಆದರೆ ವಿಪಕ್ಷಗಳು ಮಾತ್ರ ಚರ್ಚೆಗೆ ಸಿದ್ಧವಿರುವಂತೆ ತೋರುತ್ತಿಲ್ಲ ಪರಿಣಾಮ ಉಳಿದ ಅವಧಿಗೂ ಸಂಸತ್ ಸುಗಮವಾಗಿ ಕಾರ್ಯನಿರ್ವಹಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ಬೆಲೆ ಏರಿಕೆ ವಿರೋಧಿಸಿ ಆಗಸ್ಟ್ 5 ರಂದು ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ್ದು, ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವ ಯೋಜನೆಯನ್ನೂ ಹೊಂದಿದೆ.