ನವದೆಹಲಿ: I2U2' ಶೃಂಗಸಭೆ ಅಂಗವಾಗಿ ದೇಶಾದ್ಯಂತ ಸಮಗ್ರ ಫುಡ್ ಪಾರ್ಕ್ ಅಭಿವೃದ್ಧಿಗೆ ಯುನೈಟೆಡ್ ಅರಬ್ ಎಮಿರೈಟ್ಸ್ 2 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ.
ಈ ಗುಂಪಿನ ನಾಯಕರಾದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಜೋ- ಬೈಡನ್, ಇಸ್ರೇಲ್ ಪ್ರಧಾನಿ ಯೈರ್ ಲ್ಯಾಪಿಡ್, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ನಡುವಿನ ಮೊದಲ ವರ್ಚುಯಲ್ ಸಭೆಯ ನಂತರ ಈ ನಿರ್ಧಾರವನ್ನು ಘೋಷಿಸಲಾಗಿದೆ.
ನಾಲ್ಕು ರಾಷ್ಟ್ರಗಳ ನಾಯಕರ ಸಭೆಯಲ್ಲಿ ಆಹಾರ ಭದ್ರತೆಯ ಬಿಕ್ಕಟ್ಟು, ಶುದ್ಧ ಇಂಧನ ಮತ್ತು ಧೀರ್ಘಾವಧಿಯ ಆಹಾರ ಉತ್ಪಾದನೆ ಹಾಗೂ ಆಹಾರ ಪೂರೈಕೆ ವ್ಯವಸ್ಥೆಗೆ ದಾರಿ ಕಂಡುಹಿಡಿಯುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
"I" ಭಾರತ ಮತ್ತು ಇಸ್ರೇಲ್ ಪ್ರತಿನಿಧಿಸಿದರೆ, U" ಅಮೆರಿಕ ಮತ್ತು ಯುಎಇ ಪ್ರತಿನಿಧಿಸುತ್ತದೆ. ಪುಡ್ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ಭಾರತ ಸೂಕ್ತ ಜಮೀನು ನೀಡಲಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಯೋಜನೆಗಾಗಿ ಭಾರತ ಸೂಕ್ತವಾದ ಜಮೀನು ಪೂರೈಸಿದರೆ, ಅಮೆರಿಕ ಮತ್ತು ಇಸ್ರೇಲ್ ಖಾಸಗಿ ವಲಯಗಳು ತಾಂತ್ರಿಕ ಪರಿಣಿತಿಯನ್ನು ನೀಡಲಿವೆ ಎಂದು I2U2 ಹೇಳಿಕೆಯಲ್ಲಿ ತಿಳಿಸಿದೆ.
ಯುಎಇ ಹೂಡಿಕೆಯಿಂದ ದಕ್ಷಿಣ ಏಷ್ಯಾ ಮತ್ತು ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಆಹಾರದ ಅಭದ್ರತೆ ತೊಡೆದು ಹಾಕಲು ನೆರವಾಗಲಿದೆ ಎಂದು I2U2 ಹೇಳಿದೆ.